ಬೆಂಗಳೂರು: ಸಮಾಜಮುಖಿ ರಂಗಬಳಗ ಅರ್ಪಿಸುವ ಚಾವುಂಡರಾಯ ನಾಟಕ ಪ್ರದರ್ಶನ ಮಾರ್ಚ್ 16 (ಗುರುವಾರ) ಸಂಜೆ 7.00 ಗಂಟೆಗೆ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ ರಂಗಮಂದಿರ, ಮಲ್ಲತ್ತಹಳ್ಳಿ ಇಲ್ಲಿ ಏರ್ಪಡಿಸಲಾಗಿದೆ.
ಹಿರಿಯ ನಿರ್ದೇಶಕ, ರಂಗಾಯಣ ಕಲಾವಿದ ಹುಲುಗಪ್ಪ ಕಟ್ಟೀಮನಿ ನಾಟಕವನ್ನು ನಿರ್ದೇಶಿಸಿದ್ದಾರೆ.
ಚಾವುಂಡರಾಯ ನಾಟಕ ಗಂಗರಸರ ಕಡೆಗಾಲದ ಹೃದ್ಯ ಚಿತ್ರಣವಿರುವ ಐತಿಹಾಸಿಕ ನಾಟಕವಾಗಿದೆ. ಚಾವುಂಡರಾಯ ಮಹಾರಾಜ ಮಾರಸಿಂಹನ ಸೇನಾಧಿಪತಿ, ಮುಖ್ಯ ಸಚಿವ, ನಿಷ್ಠಾವಂತ ಪ್ರಾಣಮಿತ್ರ. ಅಧಿಕಾರಕ್ಕಾಗಿ ಆದರ್ಶ ಜೀವನ ದೊಡ್ಡದೆಂದು ಬಾಳಿದವನು. ಚಾವುಂಡರಾಯ ತನ್ನ ಅಂತರಂಗದ ಕರೆಗೆ ಓಗೊಟ್ಟು ಲೌಕಿಕದಿಂದ ಬಿಡುಗಡೆಯತ್ತ ಹೆಜ್ಜೆ ಹಾಕುತ್ತಾನೆ. ಭಾವನಾತ್ಮಕ ಬೆಸುಗೆಯಿಂದ ಬಿಡಿಸಿಕೊಂಡು ವಸ್ತುನಿಷ್ಠವಾಗಿ ಹಾಗೂ ಇತಿಹಾಸದ ಔಕಟ್ಟಿಗೆ ಎರವಾಗದಂತೆ ರಚಿತವಾಗಿರುವ ನಾಟಕವಿದು.
ಸಮಾಜಮುಖಿ ರಂಗಬಳಗ ಕನ್ನಡ ರಂಗಭೂಮಿಯಲ್ಲಿ ಹೊಸತನದ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದೆ. ʻರಸಾಭಿಜ್ಞಾನ’ ಎಂಬ ವಿಶೇಷ ರಂಗರಬೇತಿ ಶಿಬಿರ ನಡೆಸಿದೆ. ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರು ರಚಿಸಿ, ನಿರ್ದೇಶಿಸಿದ್ದ ‘ಕಸಾಂದ್ರ’ ನಾಟಕ ಹಾಗೂ ಕೆ.ವಿ.ತಿರುಮಲೇಶ್ ಅವರ ‘ಪೆಂಟಯ್ಯನ ಅಂಗಿ’ ಕಥನಕವನ ಹಾಗೂ ನಿಕೊಲಾಯ್ ಗೊಗೊಲ್ ಅವರ ‘ಓವರ್‌ಕೋಟ್’ ಕಥೆಯನ್ನು ಆಧರಿಸಿದ ‘ಬಿಳಿಅಂಗಿ-ಓವರ್ ಕೋಟು’ ನಾಟಕವನ್ನು ಪ್ರದರ್ಶಿಸಿದೆ. ಇತ್ತೀಚಿಗೆ ಪ್ರಸ್ತುತ ಜಯರಾಮ್ ರಾಯಪುರ್ ಅವರ ಮೂರು ನಾಟಕಗಳ ಉತ್ಸವವನ್ನು ನಡೆಸಿದೆ.
ನಾಟಕಕಾರ ಜಯರಾಮ್ ರಾಯಪುರ ಬೆಂಗಳೂರು ಮಹಾನಗರ ಪಾಲಿಕೆಯ ಹಣಕಾಸು ಆಯುಕ್ತರಾಗಿ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಾಲೇಜು ದಿನಗಳಿಂದಲೇ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಈವರೆಗೆ ಸಿರಿಗೆ ಸೆರೆ, ವಾರಸುದಾರಾ ಹಾಗೂ ಚಾವುಂಡರಾಯ ನಾಟಕಗಳನ್ನು ಬರೆದಿದ್ದಾರೆ.




