ಮೂವರು ಕಲಾವಿದರಿಗೆ ರಾಜ್ಯ ಮಟ್ಟದ ಸಿಜಿಕೆ ಪ್ರಶಸ್ತಿ ಪ್ರದಾನ

3 years ago

ಅನುಭವ ಮಂಟಪ ತೆರೆದಿಟ್ಟ ಉರಿಲಿಂಗಪೆದ್ದಿ ನಾಟಕ ಪ್ರದರ್ಶನ
ಸಿಜಿಕೆ ಜನಸಂಸ್ಕೃತಿಯ ಕಲಾ ಸಂಪನ್ನ : ಹೆಚ್ ಜನಾರ್ದನ್


ಚಾಮರಾಜನಗರ: ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ಘಟಕ, ರಂಗವಾಹಿನಿ ಸಹಯೋಗದಲ್ಲಿ ಡ್ರಾಮಾ ಸೀನರಿ ಮಾಲೀಕರಾದ ನಾಗಸುಂದರ್, ರಂಗಕಲಾವಿದ ಮಿಮಿಕ್ರಿ ಮಲ್ಲಣ್ಣ, ರಂಗಕಲಾವಿದ ಕಲೆ ನಟರಾಜು ಅವರಿಗೆ ರಂಗಾಯಣ ಮಾಜಿ ನಿರ್ದೇಶಕ ಹೆಚ್. ಜನಾರ್ದನ್ (ಜನ್ನಿ) ಪ್ರಶಸ್ತಿ ಪ್ರದಾನ ಮಾಡಿದರು.

ನಗರದ ಡಾ. ರಾಜ್‌ಕುಮಾರ್ ಜಿಲ್ಲಾ ಕಲಾಮಂದಿರದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ಘಟಕ, ರಂಗವಾಹಿನಿ ಸಹಯೋಗದಲ್ಲಿ ಉರಿಲಿಂಗಪೆದ್ದಿ ನಾಟಕ ಪ್ರದರ್ಶನ ಹಾಗೂ ರಾಜ್ಯ ಮಟ್ಟದ ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ರಂಗಾಯಣ ಮಾಜಿ ನಿರ್ದೇಶಕ ಹೆಚ್. ಜನಾರ್ದನ್ (ಜನ್ನಿ) ಮಾತನಾಡಿ, ಹಲವಾರು ರೀತಿಯ ವಿನೂತನ ಮತ್ತು ನಿರಂತರ ರಂಗ ಪ್ರಯೋಗಗಳಲ್ಲಿ ತನ್ನ ಬದುಕನ್ನು ಮೀಸಲಿಟ್ಟ ರಂಗ ಸಂಘಟಕ ಪ್ರೊ ಸಿ.ಜಿ.ಕೃಷ್ಣ ಸ್ವಾಮಿ ರಂಗಭೂಮಿಯ ದೈತ್ಯ ಪ್ರತಿಭೆ. ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ಘಟಕ, ರಂಗವಾಹಿನಿ ಸಂಸ್ಥೆ ಮಾಡುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎದರು.

ಉತ್ತಮ ನಾಟಕದಿಂದ ಸಾಮಾಜಿಕ ಮೌಲ್ಯ ಹೆಚ್ಚಳ: ಸಿಜಿಕೆ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಉತ್ತಮ ನಾಟಕದಿಂದ ಸಾಮಾಜಿಕ ಮೌಲ್ಯ ಹೆಚ್ಚಳವಾಗುತ್ತದೆ. ಆ ನಿಟ್ಟಿನಲ್ಲಿ ಉರಿಲಿಂಗಪೆದ್ದಿ ನಾಟಕ ಮೂಡಿ ಬಂದಿದೆ. ಪಾತ್ರಧಾರಿಗಳೆಲ್ಲ ಉತ್ತಮವಾಗಿ ಅಭಿನಯಿಸಿದ್ದು, ಸಂಭಾಷಣೆ ಚೆನ್ನಾಗಿ ಬಂದಿದೆ. ಈ ನಾಟಕ ರಾಜ್ಯ ಮಟ್ಟದಲ್ಲಿ ಪ್ರದರ್ಶನಗೊಂಡು ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಡಾ ಅಧ್ಯಕ್ಷ ನಿಜಗುಣರಾಜು ಮಾತನಾಡಿ, ಜಿಲ್ಲೆಯು ಡಾ. ರಾಜಕುಮಾರ್ ಹುಟ್ಟಿದ ತವರೂರಾಗಿದ್ದು, ಗಡಿ ಜಿಲ್ಲೆಯ ಕಲಾವಿದರನ್ನು ಪೋಷಿಸಿ ಪ್ರೋತ್ಸಾಹಿಸುವ ಕೆಲಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಕಾಡೆಮಿಗಳು ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಮಹಾಸಭಾ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಜಿಲ್ಲೆಯ ಕಲಾವಿದರನ್ನು ಹೆಚ್ಚಿನ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ನೀಡುವ ಕೆಲಸಗಳು ಆಗುತ್ತಿಲ್ಲ. ಆದರೂ ಸಿಎಂ ನರಸಿಂಹಮೂರ್ತಿಯವರು ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಸಹಾಯಧನ ವಿತರಣೆ: ಇದೇ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜಾನಪದ ನೀಲಗಾರ ಕಲಾವಿದ ಬಂಗಾರಶೆಟ್ಟಿ ಅವರಿಗೆ ಬೆಂಗಳೂರಿನ ಕಿರಂ ಬಳಗದಿಂದ ಸಂಸ ಸುರೇಶ್ ಅವರು 5 ಸಾವಿರ ರೂ. ಧನ ಸಹಾಯ ನೀಡಿದರು.

ಕರ್ನಾಟಕ ರಂಗ ಪರಿಷತ್ತು ರಾಜ್ಯ ಸಂಚಾಲಕ ಸಿಎಂ ನರಸಿಂಹಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಲೆಕ್ಕಾಧಿಕಾರಿ ಹೆಚ್.ಎಸ್.ಗಂಗಾಧರ್, ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಗೌರವ ಅಧ್ಯಕ್ಷ ಸುರೇಶ್‌ಗೌಡ, ಕರ್ನಾಟಕ ರಂಗ ಪರಿಷತ್ತು ಜಿಲ್ಲಾಧ್ಯಕ್ಷ ಶಾಂತರಾಜ್, ಕನ್ನಡ ಪ್ರಾಧ್ಯಾಪಕ ಕುಮಾರಸ್ವಾಮಿ ರಂಗನಿರ್ದೇಶಕ ಮಧುಕರ್ ಮಳವಳ್ಳಿ ಇತರರು ಹಾಜರಿದ್ದರು.

ಇದೇ ವೇಳೆ ಯಳಂದೂರು ತಾಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಉರಿಲಿಂಗಪೆದ್ದಿ ನಾಟಕ ಪ್ರದರ್ಶನ ಅನುಭವ ಮಂಟಪ ತೆರೆದಿಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿತು. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Leave a Reply