ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರದ ಯತ್ನ: ಕೆ ಸಿ ವೇಣುಗೋಪಾಲ್

2 years ago

ಬೆಂಗಳೂರು: ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದ್ದು, ಇದಕ್ಕಾಗಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ನಾಯಕ ಕೆ ಸಿ ವೇಣುಗೋಪಾಲ್ ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರ ಮಕ್ಕಳ ಮೇಲೆ ಹಲವು ರೀತಿಯ ಭ್ರಷ್ಟಾಚಾರ ಮತ್ತು ಅತ್ಯಾಚಾರ ಆರೋಪ ಪ್ರಕರಣಗಳಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ಈ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಪಿತೂರಿ ಮಾಡಿ ಈ ಸರ್ಕಾರವನ್ನು ಅಸ್ಥಿರಗೊಳಿಸಲು ತಂತ್ರ ರೂಪಿಸಲಾಗಿದೆ ಎಂದರು.

ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಇದೇ ರೀತಿಯಲ್ಲಿ ಕುತಂತ್ರ ಮಾಡಿ ಬಿಜೆಪಿ ನಾಯಕರು ಪತನಗೊಳಿಸಿದ್ದರು. ಅದೇ ಮಾದರಿಯಲ್ಲಿ ಈಗಿನ ಸರ್ಕಾರವನ್ನು ಕೂಡ ಪತನಗೊಳಿಸಲು ಪಿತೂರಿ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳೆದು ಬಂದ ಹಾದಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಜನಪರವಾದ ಕಾಳಜಿ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಸಹಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದರು.

ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಕುತಂತ್ರದ ಬಗ್ಗೆ ರಾಜ್ಯಾದ್ಯಂತ ಜನರಿಗೆ ಮನವರಿಕೆ ಮಾಡಿಕೊಡುವಂತೆ ಮಂತ್ರಿಗಳು ಮತ್ತು ಶಾಸಕರಿಗೆ ಸಲಹೆ ಮಾಡಿದ್ದೇವೆ. ನಾಳೆಯಿಂದಲೇ ಅವರೆಲ್ಲರೂ ಈ ಕೆಲಸದಲ್ಲಿ ನಿರತರಾಗಲಿದ್ದಾರೆ ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಈ ಸರ್ಕಾರವನ್ನು ಪತನಗೊಳಿಸಲು ತಂತ್ರ ಮಾಡಿದೆ. ಇದಕ್ಕೆ ಕಾಂಗ್ರೆಸ್ ಜಗ್ಗುವುದಿಲ್ಲ, ತಕ್ಕ ತಿರುಗೇಟು ನೀಡಲಿದೆ ಎಂದರು.

Leave a Reply