ಚಿಕ್ಕೋಡಿಗೆ ಮಂಜೂರಾಗಿದ್ದ CCB ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ

9 months ago

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಿರ್ಮಿಸಲು ಮಂಜೂರಾಗಿರುವ 50 ಹಾಸಿಗೆಗಳ ತೀವು ನಿಗಾ ಆರೈಕೆ ಘಟಕವನ್ನು (CCB) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಪ್ರಧಾನಮಂತ್ರಿ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆಗೆ 23.75 ಕೋಟಿ ವೆಚ್ಚವಾಗಲಿದೆ ಇದರಲ್ಲಿ ಆಸ್ಪತ್ರೆ ಕಟ್ಟಡ ಮತ್ತು ಅಗತ್ಯ ವೈದ್ಯಕೀಯ ಉಪಕರಣ ಒದಗಿಸಲು ಅನುಮೋದನೆ ನೀಡಿದೆ ಎಂದರು.

ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಬಾಗಲಕೋಟೆ ಇಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅವಶ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ, ಬಾಲಕಿಯರ ಹಾಸ್ಟೆಲ್‌ಗಳು, ಬೋಧಕ ಸಿಬ್ಬಂದಿಗಳ ವಸತಿಗೃಹಗಳು ಹಾಗೂ ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ ರೂ.450.00 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಸಂಪುಟದ ಇತರೆ ನಿರ್ಧಾರಗಳು:
• ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವಿಸ್ತರಣೆ ಹಾಗೂ ಆಧುನೀಕರಣದ ರೂ.329.00 ಕೋಟಿಗಳ ಪರಿಷ್ಕೃತ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಮುಂಬಡ್ತಿಗಾಗಿ ಕಡ್ಡಾಯ ತರಬೇತಿ) ನಿಯಮಗಳು 2025ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
• ಉನ್ನತ ಶಿಕ್ಷಣ ಇಲಾಖೆಯಡಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2ನೇ ಆವೃತ್ತಿ (UUCMS-V-2.0) ಯನ್ನು ರೂ.40.29 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
• ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ 110 ಜಂಕ್ಷನ್ ಗಳಲ್ಲಿ  ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಟ್ರಾಫಿಕ್ ಸಿಗ್ನಲ್ ಗಳನ್ನು  ರೂ. 56.45 ಕೋಟಿಗಳ ಅಂದಾಜು ಅನುಷ್ಠಾನಗೊಳಿಸಲು ಅನುಮತಿಯನ್ನು ಸಚಿವ ಸಂಪುಟ ನೀಡಿದೆ.
•  “ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ-2025-32ಕ್ಕೆ ಅನುಮೋದನೆ ನೀಡಿದೆ.
• ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು.
• ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರಸ್ತುತ ಇರುವ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮೊದಲನೇ ಹಂತದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ರೂ.95.60 ಕೋಟಿಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
•  ಚಿಕ್ಕಮಗಳೂರು ಜಿಲ್ಲೆಯ. ಕಡೂರು ತಾಲ್ಲೂಕಿನಲ್ಲಿ ಹೊಸದಾಗಿ ತಾಲ್ಲೂಕು ಪ್ರಜಾಸೌಧ ಕಟ್ಟಡವನ್ನು (Type-C ಮಾದರಿ) ರೂ.16.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
• ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆಯನ್ನು ಸರ್ಕಾರ ನೀಡಿದೆ.
• ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
• ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಯ ರೂ.128.74 ಕೋಟಿಗಳ ವಿಸ್ತ್ರತ ಯೋಜನಾ ವರದಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಿದೆ.
• ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕದ ಅಧೀನದಲ್ಲಿ ಹೊಸದಾಗಿ ಸ್ಥಾಪಿಸಿರುವ ಎರಡು ಐ.ಆರ್.ಬಿ ಪಡೆಗಳಿಗೆ ಅವಶ್ಯಕವಿರುವ ಮೂಲಭೂತ ವಸತಿ/ವಸತಿಯೇತರ ಸೌಕರ್ಯಗಳನ್ನು ರೂ.60.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಲ್ಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
• ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್, ಬೆಂಗಳೂರು ಸಂಸ್ಥೆಗೆ ಅವಶ್ಯವಿರುವ ರೋಬೋಟಿಕ್ ವೈದ್ಯಕೀಯ ಉಪಕರಣವನ್ನು ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Leave a Reply