ಬೆಂಗಳೂರು: ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ಬಿಜೆಪಿ ನಾಯಕರು, ಅದು ಸೋರಿಕೆಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಾತಿ ಗಣತಿ ವರದಿ ಸಲ್ಲಿಕೆ, ಬಿಡುಗಡೆ, ಸೋರಿಕೆ ಇತ್ಯಾದಿ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಹಾಗೂ ಇವುಗಳ ನಾಯಕರ ನಡುವೆ ಪರಸ್ಪರ ವಾಕ್ಸಮರ ತಾರಕಕ್ಕೇರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೆಸರೆರಚಾಟ ನಡೆದಿದೆ.
ಈ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸೋರಿಕೆ ಬಗ್ಗೆ ಖಚಿತ ಮಾಹಿತಿ ಮುಖ್ಯಮಂತ್ರಿಗಳ ಬಳಿ ಇದ್ದರೆ ಅದರ ಬಗ್ಗೆ ತನಿಖೆ ನಡೆಸಲಿ. ಸೋರಿಕೆ ಆಗಿದೆಯೆನ್ನಲಾದ ಜಾತಿಗಣತಿ ವರದಿಯ ಅಂಶಗಳೇ ಮೂಲ ವರದಿಯಲ್ಲಿ ಇವೆ ಎನ್ನುವುದನ್ನು ಬಿಜೆಪಿ ಅಷ್ಟೊಂದು ವಿಶ್ವಾಸದಿಂದ ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಬಳಿ ಇರಬೇಕಾದ ಮೂಲ ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ? ಮುಖ್ಯಮಂತ್ರಿಗಳ ಕಚೇರಿಯಿಂದ ಅದು ಸೋರಿಕೆಯಾಗಿದೆಯೇ? ಎಂದು ಅವರು ಕೇಳಿದ್ದಾರೆ.
ಜಾತಿಗಣತಿ ವರದಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸಿ ಸ್ವೀಕರಿಸಬೇಕೆಂಬುದು ನನ್ನ ಉದ್ದೇಶವಾಗಿತ್ತು. ಅಂಕಿಅಂಶಗಳ ಮಾಹಿತಿ ಸಂಗ್ರಹವಾಗಿದ್ದರೂ ವಿಶ್ಲೇಷಣೆಯ ಕೆಲಸ ಪೂರ್ಣಗೊಂಡಿರದ ಕಾರಣ ಸಾಧ್ಯವಾಗಿರಲಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಜಾತಿ ಗಣತಿ ವರದಿಯನ್ನು ನಮ್ಮ ಪಕ್ಷದ ನಾಯಕರು ವಿರೋಧಿಸಿದ್ದರು ಎನ್ನುವುದು ಕಪೋಲ ಕಲ್ಪಿತ ಆರೋಪ. ಯಾರು? ಯಾವಾಗ? ವಿರೋಧಿಸಿದ್ದರು ಎನ್ನುವುದನ್ನು ಬಿಜೆಪಿ ನಾಯಕರು ಬಹಿರಂಗ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾತಿ ಗಣತಿ ವರದಿ ಸೋರಿಕೆಯಾಗಿದ್ದರೂ ಅದರ ಪಾವಿತ್ರ್ಯವೇನು ಕಳೆದುಹೋಗುವುದಿಲ್ಲ. ಸೋರಿಕೆಯಿಂದಾಗಿ ಅಪರಾಧಿಗಳು ಓಡಿಹೋಗಲು ಅದೇನು ಅಪರಾಧದ ತನಿಖಾ ವರದಿಯೇ? ಅದೊಂದು ಸಮೀಕ್ಷಾ ವರದಿ. ಪರಿಶೀಲನೆ ನಡೆಯಬೇಕಾಗಿರುವುದು ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ. ಅದರ ಬಗ್ಗೆ ಚರ್ಚೆ ನಡೆಯಲಿ ಎಂದು ಅವರು ಹೇಳಿದ್ದಾರೆ.
ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ಮರಳಿ ರಾಜ್ಯ ಸರ್ಕಾರಕ್ಕೆ ನೀಡುವ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು ಸಂಸತ್ ನಲ್ಲಿ ನಮ್ಮ ಪಕ್ಷದ ಸದಸ್ಯರು ಬೆಂಬಲಿಸಿರುವುದು ನಿಜ. ಆ ತಿದ್ದುಪಡಿ ಕಾಂಗ್ರೆಸ್ ಪಕ್ಷದ ಬೇಡಿಕೆಯ ಒತ್ತಡದಿಂದಾಗಿಯೇ ಮಂಡಿಸಲಾಗಿತ್ತು ಎಂದಿದ್ದಾರೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ನೆಪದಲ್ಲಿ ಸಂವಿಧಾನಕ್ಕೆ 123ನೇ ತಿದ್ದುಪಡಿ ಮಾಡಿ ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವ ಕೇಂದ್ರದ ಬಿಜೆಪಿ ಸರ್ಕಾರದ ಹುನ್ನಾರವನ್ನು 2017ರಲ್ಲಿಯೇ ನಮ್ಮ ಪಕ್ಷ ವಿರೋಧಿಸಿತ್ತು ಎಂದು ಅವರು ಹೇಳಿದ್ದಾರೆ.
ಸಂವಿಧಾನದ 123ನೇ ತಿದ್ದುಪಡಿ ಮೂಲಕ ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಂದ ಕಿತ್ತುಕೊಂಡದ್ದನ್ನು ಕೇಂದ್ರ ಬಿಜೆಪಿ ಸರ್ಕಾರ 127ನೇ ತಿದ್ದುಪಡಿ ಮೂಲಕ ಮರಳಿ ನೀಡಿದೆ. ಇದೇನು ಹಿಂದುಳಿದ ಜಾತಿಗಳಿಗೆ ಮಾಡಿರುವ ಉಪಕಾರ ಅಲ್ಲ. ಮಾಡಿರುವ ತಪ್ಪನ್ನು ಒಪ್ಪಿ ಸರಿಪಡಿಸಿದೆಯಷ್ಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




