ಜಾತಿ, ಹಣವೇ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವಾಯಿತು

3 years ago

#Caste #money #became #criteria #selection #candidates #ksnagaraj

ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿದ್ಯಾರ್ಹತೆ, ಪ್ರಾಮಾಣಿಕತೆ, ದಕ್ಷತೆ, ಅನುಭವ, ಹಿರಿತನ ಇವುಗಳನ್ನು ಮಾನದಂಡವನ್ನಾಗಿ ಅನುಸರಿಸದೆ ಜಾತಿ ಮತ್ತು ಹಣವೇ ಪ್ರಧಾನವಾದಂತಹ ಸಂಗತಿಯಾಗಿರುವುದು ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದಾಗ ಸ್ಪಷ್ಟವಾಗುತ್ತಿದೆ.

ಮತದಾರರು ಯಾರು ತಮ್ಮ ಪ್ರತಿನಿಧಿ ಯಾವ ಜಾತಿಯವರಿರಬೇಕೆಂದು ಬಯಸುವುದಿಲ್ಲ. ಆದರೆ ಅಭ್ಯರ್ಥಿಗಳ ಆಯ್ಕೆಗೆ ಜಾತಿಯನ್ನೇ ಮಾನದಂಡವನ್ನಾಗಿಸಿಕೊಂಡು ಮತದಾರರ ಮನಸ್ಸುಗಳನ್ನು ಜಾತಿವಾದದ ಕಡೆಗೆ ಸೆಳೆಯುವಂತಹ ಕೆಲಸವನ್ನು ಮಾಡಿರುತ್ತೀರಿ.

ಮತದಾರರು ಯಾರು ನಮ್ಮ ಪ್ರತಿನಿಧಿ ಆಗರ್ಭ ಶ್ರೀಮಂತನಾಗಿರಬೇಕು, ಸಂಪದ್ಭರಿತನಾಗಿರಬೇಕೆಂದು ಬಯಸಿರಲಿಲ್ಲ. ಆದರೆ ಹಣವಂತರನ್ನು ಆಯ್ಕೆ ಮಾಡುವುದರ ಮೂಲಕ ರೀತಿಯಲ್ಲಿ ಕಲುಷಿತಗೊಳಿಸುವಂತಹ ಕಾರ್ಯವನ್ನು ಮತದಾರರ ಮನಸ್ಸನ್ನು ಮತ್ತೆ ಅನೇಕ ರೀತಿಯಲ್ಲಿ ಮಾಡಿರುತ್ತೀರಿ.

ಇನ್ನು ಮತದಾರರು ಯಾರು ಕುಟುಂಬದ ಕುಡಿಗಳು ನಮ್ಮ ಪ್ರತಿನಿಧಿಗಳಾಗಬೇಕೆಂದು ಬಯಸಿರಲಿಲ್ಲ. ಆದರೆ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ರಾಜ್ಯದ ಕನಿಷ್ಠ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುಟುಂಬದ ಕುಡಿಗಳು ಮಹಾರಾಜರ ನಂತರ ಯುವರಾಜರು ಪಟ್ಟಾಭಿಷೇಕಕ್ಕೆ ಏರಬೇಕೆಂಬ ನಿಯಮದಂತೆ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. ಇದು ಸಹ ಮತದಾರರ ಬಯಕೆಯಲ್ಲ. ಮತದಾರರ ಮೇಲೆ ಬಲವಂತವಾಗಿ ವಂಶಪಾರಂಪರ್ಯದ ಸಂಸ್ಕೃತಿಯನ್ನು ಹೇರುವಂತಹ ಕಾರ್ಯವಾಗಿರುತ್ತದೆ.

ಮತದಾರರು ಬಯಸುವುದು ನಮ್ಮ ಪ್ರತಿನಿಧಿ ವಿದ್ಯಾವಂತನಾಗಿರಬೇಕು, ಉತ್ತಮ ಸಂಸದೀಯ ಪಟುವಾಗಿರಬೇಕು, ಜನಪರ ಕಾಳಜಿಯವನ್ನಾಗಿರಬೇಕು, ಪಾರದರ್ಶಕವಾದ ಬದುಕನ್ನು ನಡೆಸುವವರಾಗಿರಬೇಕು, ಜನರಿಗೆ ಸ್ಪಂದಿಸುವವರಾಗಿರಬೇಕು, ಶುದ್ಧವಾದ ರಾಜಕಾರಣದ ದಾರಿಯಲ್ಲಿ ಸಾಗುವವರು ಆಗಿರಬೇಕು ಎಂಬುದಾಗಿರುತ್ತದೆ. ಆದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಈ ಗುಣ ವಿಶೇಷಗಳು ಇಲ್ಲದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಮತದಾರರಿಗೆ ಬೇರೆ ದಾರಿಗಳಿಲ್ಲದೇ ಇಂತವರನ್ನೇ ಆರಿಸಬೇಕಾಗಿದೆ.

ಇನ್ನು ನಮ್ಮ ದೃಶ್ಯ ಮಾಧ್ಯಮದವರು ಅಭ್ಯರ್ಥಿಯ ಜಾತಿ, ಉಪಜಾತಿ, ಕ್ಷೇತ್ರದಲ್ಲಿರುವ ಮತದಾರರ ಜಾತಿ ಜನಗಣತಿಯ ವಿವರ, ಅವರ ಅಂತಸ್ತು, ಆಸ್ತಿ ಎಲ್ಲವನ್ನೂ ಧಾರಾವಾಹಿಯ ರೂಪದಲ್ಲಿ ಪ್ರಚಾರ ಮಾಡುತ್ತಾ ಜಾತೀಯತೆಯ ವಿಷಬೀಜವನ್ನು ಜನರ ಮನಸ್ಸಿನಲ್ಲಿ ಮತಷ್ಟು ಬೀರುತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂತಹ ವ್ಯಕ್ತಿಗಳು ನಮ್ಮ ಪ್ರತಿನಿಧಿಗಳಾಗುತ್ತಾರೆ ಎನ್ನುವುದಕ್ಕೆ ಈ ಪಟ್ಟಿಯೇ ಸಾಕ್ಷಿಯಾಗಿದೆ. ಗಂಭೀರವಾದ ಚರ್ಚೆ ಮಾಡುವ ಪ್ರಾಮಾಣಿಕವಾದ ಪ್ರತಿನಿಧಿಗಳನ್ನುಳ್ಳ ಜನಪರವಾದ ವ್ಯವಸ್ಥೆಯನ್ನು ಬಯಸುವುದು ಎಂದರೆ ಅಮಾವಾಸ್ಯೆಯ ದಿನದಂದು ಆಕಾಶದಲ್ಲಿ ಹುಣ್ಣಿಮೆಯ ಚಂದ್ರನನ್ನು ಬಯಸಿದಂತೆ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply