ಕಾರ್ಕಳ: ರಾಧಾಕೃಷ್ಣ ಹೀರ್ಗಾನ ಅವರ ಮೇಲಿನ ಹಲ್ಲೆ ಪ್ರಕರಣ ರಾಜ್ಯದಲ್ಲಿ ಪ್ರತಿಧ್ವನಿಸುತ್ತಿದ್ದು ಇದೀಗ ಪತ್ರಿಕಾ ಪ್ರಕಟಣೆಯಲ್ಲಿ ರಾಧಾಕೃಷ್ಣ ಹೀರ್ಗಾನ ಅವರು ಶಾಸಕ ಸುನೀಲ್ ಕುಮಾರ್ ಮತ್ತು ಕಾರ್ಕಳದ ಬಿಜೆಪಿ ಪದಾಧಿಕಾರಿಗಳು ಅವರನ್ನು ಸುಳ್ಳಾರೋಪ ಹೊರಿಸಿ ದೇಶದ್ರೋಹಿ ಎಂದು ಮಾನಹಾನಿ ಮಾಡಿದ್ದಕ್ಕೆ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ತನಿಖೆಯ ನೆಪದಲ್ಲಿ ನನ್ನ ಮೇಲೆ ಕಾರ್ಕಳ ಪೊಲೀಸ್ ಅಧಿಕಾರಿ ಮಧು ಅವರು ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ನಾನು ಕಾರ್ಕಳ ತಾಲ್ಲೂಕಿನ ಹಿರ್ಗಾನ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದವನು. ನಾನು ಮತ್ತು ನನ್ನ ಕುಟುಂಬ ಬದುಕಿನುದ್ದಕ್ಕೂ ದೇಶ, ದೇಶದ ಸಂವಿಂಧಾನ, ದೇಶದ ಸೈನಿಕರ ಬಗ್ಗೆ ಅಪಾರ ಭಕ್ತಿ ಮತ್ತು ಗೌರವ ಹೊಂದಿದವರು. ದೇಶ ಪ್ರೇಮ ನನ್ನ ರಕ್ತದ ಪ್ರತಿ ಕಣ ಕಣದಲ್ಲೂ ಇದೆ. ನನಗೆ ಯಾವ ವ್ಯಕ್ತಿಯಿಂದಲೂ ದೇಶ ಪ್ರೇಮದ ಪಾಠ ಅಗತ್ಯವಿರುವುದಿಲ್ಲ. ಇದನ್ನು ಹೇಳಲು ಕಾರಣವೇನೆಂದರೆ, ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಗಳ್ಳನ್ನು ಹಾಕಿರುತ್ತಾರೆ. ಈ ಬಗ್ಗೆ ನಾನೇ ಸ್ವತಃ ಬೆಂಗಳೂರಿನ ಉತ್ತರ ಗಂಗಮ್ಮನ ಗುಡಿ ಸೈಬರ್ ಠಾಣೆಯಲ್ಲಿ 26-8-2020 ದೂರು ದಾಖಲಿಸಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುತ್ತೇನೆ. ನೀವು ನೀಡಿದ ದೂರು ಸರಿಯಾಗಿಲ್ಲ ಮತ್ತೊಮ್ಮೆ ದೂರು ನೀಡಿ ಎಂದು ಅದೇ ಠಾಣೆಯಿಂದ ಕರೆ ಬಂದ ಹಿನ್ನಲೆಯಲ್ಲಿ ದಿನಾಂಕ 04-09-2020 ರಂದು ಮತ್ತೊಮ್ಮೆ ದೂರು ಸಲ್ಲಿಸಿದ್ದ ಕಾರಣ ನನ್ನ ವಿಚಾರಣೆಯನ್ನು ಕೂಡಾ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಕೆಲಸ ಮಾಡುತ್ತಿದ್ದ ಬೇಕರಿ ಮಾಲೀಕರಿಗೂ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು ಕರೆ ಮಾಡಿ ನನ್ನ ಬಗ್ಗೆ ಬೇಡದ ಹೇಳಿ ನೀಡಿ ನನ್ನನ್ನು ಕೆಲಸದಿಂದ ತೆಗೆಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರಿಂದ ಮನನೊಂದ ನಾನು ಕಾರ್ಕಳಕ್ಕೆ ಬಂದು ಒಂದು ಟೆಂಪೋ ಚಲಾಯಿಸಿಕೊಂಡು ಜೀವನ ಸಾಗಿಸಿಕೊಂಡು ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದೇನೆ. ದಿನಾಂಕ 04-04-2021 ರಂದು ನನಗೆ ಎರಡನೇ ಬಾರಿ ಹೃದಯಾಘಾತವಾದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೃದಯದಲ್ಲಿ ಸ್ಟಂಟ್ ಗಳನ್ನು ಅಳವಡಿಸಿರುತ್ತಾರೆ.
ಏಪ್ರಿಲ್ 23 ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಿಂದ ಠಾಣೆಗೆ ಹಾಜರಾಗುವಂತೆ ನನಗೆ ನೋಟೀಸ್ ಬಂದಿದ್ದು ಅದರಂತೆ ನಾನು ಠಾಣೆಗೆ ಹೋಗಿದ್ದು ಆ ಸಂದರ್ಭದಲ್ಲಿ ಠಾಣಾಧಿಕಾರಿ ಶ್ರೀ ಮಧು ರವರು ಇಲ್ಲದಿರುವ ಕಾರಣ ಪೊಲೀಸರು ನನ್ನ ಹೇಳಿಕೆ ಪಡೆದು ಕಳುಹಿಸಿ, ಠಾಣಾಧಿಕಾರಿ ಶ್ರೀ ಮಧು ರವರು ಬಂದ ನಂತರ ಬರುವಂತೆ ವಾಪಸ್ ಕಳುಹಿಸಿರುತ್ತಾರೆ. ಅನಂತರ ಈ ಕಾರಣಕ್ಕಾಗಿ ಎರಡು ಬಾರಿ ಹೋದರು ಅವರು ಸಿಗದ ಕಾರಣ ವಾಪಾಸು ಬಂದಿರುತ್ತೇನೆ. ಈ ಎಲ್ಲಾ ಸಂದರ್ಭದಲ್ಲಿಯೂ ಠಾಣೆಯಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿರುವುದು ದಾಖಲಾಗಿದೆ. 9-7-2021ರಂದು 4ನೇ ಬಾರಿ ನಾನು ಠಾಣೆಗೆ ಬಂದಿದ್ದು ಅಂದು ತನಿಖೆ ನಡೆಸುವ ಸಂದರ್ಭ ಬೆಂಗಳೂರಿನಲ್ಲಿ ದೂರು ನೀಡಿದ ಬಗ್ಗೆ ದಾಖಲೆ ನೀಡುವಂತೆ ಕೇಳಿದಾಗ ಲಾಕ್ ಡೌನ್ ಇದ್ದ ಕಾರಣ ಅಲ್ಲಿ ಹೋಗಿ ತರಲು ಸಾದ್ಯವಾಗಲಿಲ್ಲ ಎಂದು ಹೇಳಿದಾಗ ಯಾವುದೇ ತನಿಖೆ ನಡೆಸದೆ ನನ್ನ ಮೇಲೆ ಹಲ್ಲೆ ನಡೆಸಿ ದೂರುದಾರನ್ನು ಕರೆಸಿ ಅವರನ್ನು ಸಮ್ಮುಖದಲ್ಲಿ ನನ್ನನ್ನು ನೆಲದ ಮೇಲೆ ಕುಳ್ಳಿರಿಸಿ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿರುತ್ತಾರೆ. ಮಾತ್ರವಲ್ಲದೆ ನನ್ನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ನನ್ನನ್ನು ವೈದ್ಯಕೀಯ ಪರೀಕ್ಷಿಗೆ ಒಳಪಡಿಸಿ ಮನೆಗೆ ಕಳುಹಿಸಿರುತ್ತಾರೆ ಎಂದು ಹೇಳಿದ್ದಾರೆ. ಅವರಿಂದ ಹಲ್ಲೆಗೊಳಗಾಗಿ ಆಘಾತಕ್ಕೊಳಗಾದ ನನ್ನ ಆರೋಗ್ಯದಲ್ಲಿ ಏರುಪೇರಾದಾಗ ಸಂಬಂಧಿಕರು ಮತ್ತು ಮಿತ್ರರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಮಧು ಅವರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ
ನನ್ನ ಮೇಲೆ ರಾಜ್ಯದ ಯಾವುದೇ ಠಾಣೆಯಲ್ಲಿ ದೇಶ ದ್ರೋಹದ ಕೇಸು ದಾಖಲಾಗದಿದ್ದರೂ ಶಾಸಕ ಸುನೀಲ್ ಕುಮಾರ್ ಮತ್ತು ಬಿಜೆಪಿ ಪದಾಧಿಕಾರಿಗಳು ನನ್ನನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿ ನನ್ನ ಮಾನಹಾನಿ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ರಾಜ್ಯದಲ್ಲಿ ತನ್ನದೇ ಸರಕಾರ ಇರುವುದರಿಂದ ಶಾಸಕರು ನನ್ನ ಮೇಲೆ ಮಾಡಿದ ಗಂಭೀರ ಆರೋಪವನ್ನು ಸಾಬೀತುಪಡಿಸಿದರೆ ನಾನು ಗಲ್ಲಿಗೇರಲು ಸಿದ್ದ, ಇಲ್ಲವಾದಲ್ಲಿ ಅವಮಾನಕ್ಕೊಳಗಾದ ನಾನು ಅವರ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಒಬ್ಬ ಜವಾಬ್ದಾರಿಯುತ ಶಾಸಕನಾಗಿ ರಾಜಧರ್ಮವನ್ನು ಮರೆತು ನನ್ನ ಹೆಸರಿನ ನಕಲಿ ಫೆಸ್ ಬುಕ್ ಖಾತೆಯ ಬಗ್ಗೆ ತನಿಖೆ ನಡೆಸದೆ ಯಾರೋ ಕಿಡಿಗೇಡಿಗಳು ಸೃಷ್ಟಿಸಿದ ಸುಳ್ಳು ಸುದ್ದಿಗಳನ್ನು ನಂಬಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನನಗೆ ದೇಶದ್ರೋಹಿ ಪಟ್ಟ ಕಟ್ಟಿರುವುದು ನನ್ನ ಕುಟುಂಬ ಹಾಗೂ ನಮ್ಮ ಸಮಾಜಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ನನ್ನ ಇಡೀ ಕುಟುಂಬವೇ ತಲೆ ತಗ್ಗಿಸುವಂತಾಗಿದ್ದು ಮಾಡದಿರುವ ತಪ್ಪಿಗೆ ಇಷ್ಟೊಂದು ಕಠೋರವಾದ ಶಿಕ್ಷೆಯೆ ಅನುಭವಿಸುವಂತಾಗಿದೆ.
ಶಾಸಕರೇ, ನಿಮ್ಮ ಮೇಲಿರುವ ಭ್ರಷ್ಟಾಚಾರ ಅರೋಪ ಮತ್ತು ನಿಮ್ಮ ತಪ್ಪು ನಡೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದೇನೆ ಎನ್ನುವ ಒಂದೇ ಕಾರಣಕ್ಕಾಗಿ ಪ್ರಾಮಾಣಿಕ ಬದುಕು ನಡೆಸುತ್ತಿರುವ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಈ ರೀತಿಯ ದೌರ್ಜನ್ಯ ನಿಮಗೆ ಶೋಭೆಯೇ? ಒಂದು ವೇಳೆ ನಾನೇ ಸೈನಿಕರ ವಿರುದ್ಧ ಪೋಸ್ಟ್ ಮಾಡಿದ್ದು ಹೌದಾದರೆ ಬೆಂಗಳೂರಿನ ಠಾಣೆಯಲ್ಲಿ ಹೇಳಿಕೆ ಪಡೆದು ಯಾವುದೇ ಪ್ರಕರಣ ದಾಖಲಿಸದಿರಲು ಕಾರಣವೇನು? ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ನಾನೇ ಖುದ್ದಾಗಿ ಠಾಣೆಗೆ ಬರುವವರೆಗೆ ಪೊಲೀಸರು ಮೌನ ವಹಿಸಿದ್ದು ಯಾಕೆ? ನನ್ನ ತನಿಖೆ ನಡೆಸಿದ ಮಧು ಅವರಿಗೆ ನಾನೇ ತಪ್ಪು ಮಾಡಿದ್ದೇನೆಂದು ಖಚಿತವಾಗಿದ್ದರೆ ನನ್ನ ಮೇಲೆ ಕೇಸು ದಾಖಲಿಸದೆ, ಹೇಳಿಕೆಯನ್ನೂ ಪಡೆಯದೆ ನನ್ನನ್ನು ಮನೆಗೆ ಕಳುಹಿಸಲು ಕಾರಣವೇನು? ನಾನು ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾದ ನಂತರ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದೇನೆಂದು ತಪ್ಪು ದೂರು ದಾಖಲಿಸಲು ಯಾರ ಒತ್ತಡವಿತ್ತು? ಒಬ್ಬ ಸಾಮಾನ್ಯ ವ್ಯಕ್ತಿ ಪೊಲೀಸ್ ಸ್ಟೇಷನ್ ಒಳಗೆ ಅದೂ ಅಷ್ಟೊಂದು ಪೋಲೀಸರ ಮದ್ಯೆ ಠಾಣಾಧಿಕಾರಿಯವರಿಗೆ ಹಲ್ಲೆ ನಡೆಸಲು ಸಾಧ್ಯವೇ? ಪೋಲೀಸರು ಅಷ್ಟು ದುರ್ಬಲರೇ?
ನಾನು ಹೇಳಿದ್ದಂತೆ ನನ್ನ ಮೇಲೆ ಹಲ್ಲೆ ಮಾಡದ್ದಿದ್ದರೆ ನನ್ನ ವೈದ್ಯಕೀಯ ತಪಾಸಣೆ ಮಾಡಲು ಕಾರಣವೇನು? ನನ್ನ ನಕಲಿ ಫೆಸ್ ಬುಕ್ ಖಾತೆಯ ಬಗ್ಗೆ ದೂರು ನೀಡಿ ವರ್ಷವಾಗುತ್ತಾ ಬಂದರೂ ಆ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ? ಯಾಕೆ ಎಂದು ರಾಧಾಕೃಷ್ಣ ಹೀರ್ಗಾನ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.




