ಹಕ್ಕು ಬಾಧ್ಯತಾ ಸಮಿತಿಗೆ ರಾಜೇಂದ್ರ ಕುಮಾರ್ ಕಟಾರಿಯಾ ವಿರುದ್ಧದ ಪ್ರಕರಣ

1 year ago

ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜು ಭರಮಗೌಡ ಕಾಗೆ ಅವರು ಅತ್ಯಂತ ಹಿರಿಯ ಸದಸ್ಯ. ಇವರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ಅಗೌರವ ತೋರಿದ್ದಾರೆ ಎಂದು ಕಿಡಿಕಾರಿರುವ ವಿಧಾನಸಭೆ ಅಧ್ಯಕ್ಷ ಯು ಟಿ ಖಾದರ್ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸುವುದಾಗಿ ತಿಳಿಸಿದ್ದಾರೆ.

ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಹಕ್ಕುಚ್ಯುತಿ ನಿರ್ಣಯ ಮಂಡಿಸಿ ಮಾತನಾಡಿದ ಕಾಗವಾಡ ಕ್ಷೇತ್ರದ ಶಾಸಕ ರಾಜು ಭರಮಗೌಡ ಕಾಗೆ, ಕಳೆಧ ಫೆಬ್ರವರಿ 11 ರಂದು ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆ ನಡೆಯಿತು. ಸಮಿತಿಯ ಸದಸ್ಯನಾಗಿ ಸಭೆಯಲ್ಲಿ ಪಾಲ್ಗೊಂಡ ನಂತರ ತಾವು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ಬಳಿ ಹೋಗಿ, ತಮ್ಮ ಕ್ಷೇತ್ರದಲ್ಲಿನ ಭವನವೊಂದರ ನಿರ್ಮಾಣ ಕೆಲಸದ ವಿಚಾರವಾಗಿ ಪ್ರಸ್ತಾಪಿಸಿದೆ ಎಂದರು.

ಆಗ ಅವರು ಇದಕ್ಕೆ ತಕರಾರು ತೆಗೆದರು. ಇಂತಹ ಕೆಲಸ ನೀಡಿರುವ ನಿಮ್ಮ ಜಿಲ್ಲಾಧಿಕಾರಿಗಳಿಗೂ ತಲೆಯಿಲ್ಲ, ನಿಮಗೂ ತಲೆಯಿಲ್ಲ ಎಂದು ಅಪಮಾನ ಮಾಡಿದ್ದಾರೆ. ನನ್ನ ಮಾತಿಗೂ ಬೆಲೆ ಕೊಡದೆ ಹೋಗಿದ್ದಾರೆ. ಉದ್ಧಟತನದ ಮಾತನ್ನು ಆಡಿದ್ದಾರೆ. 25 ವರ್ಷದಿಂದ ಶಾಸಕನಾಗಿದ್ದೇನೆ. ಇದುವರೆಗೂ ಈ ರೀತಿ ಉದ್ಧಟತನವನ್ನು ಯಾವ ಅಧಿಕಾರಿಯೂ ತೋರಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಕೆಲಸ ಮಾಡುವುದು ಅಧಿಕಾರಿಯ ಕೆಲಸ. ಸರ್ವಾಧಿಕಾರಿ ಧೋರಣೆ ತೋರುವುದಲ್ಲ. ನಾನು ಜನಪ್ರತಿನಿಧಿ, ನಮಗೆ ಅಪಮಾನ ಮಾಡಿದರೆ ಅದು ಕ್ಷೇತ್ರದ ಜನರಿಗೆ ಮಾಡಿದ ಅಪಮಾನದಂತೆ. ಇಂತಹ ಉದ್ದಟತನ ತೋರಿರುವ ಅಧಿಕಾರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಇದು ಕೇವಲ ನನ್ನ ಒಬ್ಬನ ಅನುಭವವಲ್ಲ. ಹಲವು ಶಾಸಕರಿಗೂ ಇದೆ ಅನುಭವವಾಗಿದೆ. ಹೀಗಾಗಿ ಅವರನ್ನು ವರ್ಗಾವಣೆ ಮಾಡುವಂತೆ 50 ರಿಂದ 60 ಶಾಸಕರು ಸಹಿ ಹಾಕಿ ಪತ್ರ ಕೊಟ್ಟಿದ್ದಾರೆ. ಶಾಸಕರಿಗೆ ಅಪಮಾನ ಮಾಡಿರುವ ಘಟನೆಯನ್ನು ಹಕ್ಕುಚ್ಯುತಿ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಶಾಸಕ ಎಂ. ಟಿ ಕೃಷ್ಣಪ್ಪ, ಸದನದಲ್ಲಿ 224 ಶಾಸಕರಿಗೆ ಮಾಡಿರುವ ಅಪಮಾನ. ಅವರೊಬ್ಬರಿಗೆ ಮಾಡಿರುವ ಅಪಮಾನವಲ್ಲ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷ, ಶಾಸಕ ಸಿ. ಸಿ ಪಾಟೀಲ್ ಮಾತನಾಡಿ, ರಾಜು ಕಾಗೆ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಅಧಿಕಾರಿಯ ಬಳಿ ಮಾತನಾಡಲು ಹೋದಾಗ ಸೌಜನ್ಯದಿಂದ ಮಾತನಾಡದೆ ದುರ್ವರ್ತನೆ ತೋರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಎದ್ದು ನಿಂತು ಮಾತನಾಡಿದ ಬಿಜೆಪಿ ಶಾಸಕ ಬಸವರಾಜ ಮತ್ತಿಮೋಡ್, ಪುರಸಭೆ ಚುನಾವಣೆ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ತಮ್ಮೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ಇಬ್ಬರು ಚುನಾಯಿತ ಪ್ರತಿನಿಧಿಗಳನ್ನು ಅಪಹರಿಸಲು ಕುಮ್ಮಕ್ಕು ನೀಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ತಮಗೆ ಎದೆ ಮೇಲೆ ಕೈ ಹಾಕಿ ನೂಕಿದ್ದಾರೆ ಎಂದು ದೂರಿದರು.

ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಪ್ರತಿಪಕ್ಷ ಶಾಸಕರನ್ನು ಬಿಡಿ ಆಡಳಿತ ಪಕ್ಷದ ಶಾಸಕರುಗಳಿಗೆ ಅಧಿಕಾರಿಗಳೇ ಗೌರವ ಕೊಡಲ್ಲ ಎಂದರೆ ಹೇಗೆ? ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಗೆ ಸರ್ಕಾರವನ್ನು ಪ್ರಶ್ನೆ ಮಾಡುವಷ್ಟು ಅಧಿಕಾರವಿರುತ್ತದೆ. ಅಧಿಕಾರಿಗಳು ಬೆಲೆ ಕೊಡುವುದಿಲ್ಲ ಎಂದಾದರೆ ಸಮಿತಿಯನ್ನು ಮುಚ್ಚಿಬಿಡಿ. ಅಧಿಕಾರಿಗಳೇ ರಾಜ್ಯಭಾರ ಮಾಡಲಿ, ನಾವು ಸದನಕ್ಕೆ ಏಕೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಬೆಳಗಾವಿಯಲ್ಲಿ ಲಿಂಗಾಯಿತರ ಸಮಾವೇಶ ನಡೆಸುವಾಗ ಎಡಿಜಿಪಿ ಕಾನೂನು ಮೀರಿ ವರ್ತಿಸಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಕ್ರಮವಾಗಬೇಕು. ತಕ್ಕ ನಿರ್ದೇಶನ ಕೊಡಬೇಕೆಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್ ಮಾತನಾಡಿ, ಅಧಿಕಾರಿಗಳನ್ನು ರಕ್ಷಣೆ ಮಾಡುವುದಾಗಲೀ, ತಪ್ಪು ಮಾಡಿದವರ ಬಗ್ಗೆ ಸಬೂಬು ಹೇಳುವುದಾಗಲೀ ಮಾಡುವುದಿಲ್ಲ. ಶಾಸಕರಿಬ್ಬರು ಸದನದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಶಾಸಕರು, ಸಂಬಂಧಿಸಿದ ಅಧಿಕಾರಿಗಳು, ಕಂದಾಯ ಸಚಿವರು ಹಾಗೂ ಸಮಿತಿಯ ಅಧ್ಯಕ್ಷರಾದ ಸಿ. ಸಿ ಪಾಟೀಲರನ್ನು ತಮ್ಮ ಕಚೇರಿಗೆ ಕರೆಸಿ ಚರ್ಚೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು ಟಿ ಖಾದರ್ ಮಾತನಾಡಿ, ರಾಜು ಕಾಗೆ ಹಾಗೂ ಮತ್ತಿಮೋಡ್ ಅವರು ತಮಗಾಗಿರುವ ಅಪಮಾನದ ಬಗ್ಗೆ ಲಿಖಿತವಾಗಿ ಕೊಟ್ಟು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಲಬುರಗಿಯ ಹೆಚ್ಚುವರಿ ಎಸ್ಪಿ ಅವರಿಂದ ಆದ ಅಪಮಾನವನ್ನು ಪ್ರಸ್ತಾಪಿಸಿದ್ದಾರೆ. ವೇತನ, ಭತ್ಯೆಗಿಂತ ಗೌರವ ಬೇಕು ಎಂಬುದನ್ನು ಜನರು ಅಪೇಕ್ಷೆ ಪಡುತ್ತಾರೆ. ಅನಂತರ ಇತರೆ ಸೌಲಭ್ಯಗಳು. ಮಾತನಾಡುವ ಸೌಜನ್ಯ ತೋರದ ಅಧಿಕಾರಿಯ ವರ್ತನೆಯನ್ನು ಸಹಿಸುವುದಿಲ್ಲ. ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಇದು ಸದನಕ್ಕೆ ಮಾಡಿರುವ ಅಪಮಾನ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬೇರೆಯವರಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಹೀಗಾಗಿ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮತಿಗೆ ಒಪ್ಪಿಸುವುದಾಗಿ ತಿಳಿಸಿದರು.

Leave a Reply