ಕಂದಾಯ ಇಲಾಖೆಯಲ್ಲಿ ಈ ಆಫೀಸ್‌ ಬಳಕೆಗೆ ಒತ್ತು: ಕೃಷ್ಣ ಬೈರೇಗೌಡ

2 years ago

ಬೆಂಗಳೂರು: ಕಂದಾಯ ಇಲಾಖೆಯ ಕೆಲ ಹಂತದ ಕಂದಾಯ ನಿರೀಕ್ಷಕರು-ಗ್ರಾಮ ಲೆಕ್ಕಿಗರೂ ಸಹ ಇ-ಆಫೀಸ್‌ ಬಳಕೆ ಮಾಡಬೇಕು. ಆಗ ಮಾತ್ರ ಜನರಿಗೆ ಕಾಗದ ರಹಿತ ಪಾರದರ್ಶಕ ಸೇವೆ ನೀಡಲು ಸಾಧ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ 1,000 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ಇಲಾಖೆಯ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂಬ ನಿಟ್ಟಿನಲ್ಲಿ ಇಂದು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೂ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಕಡತ ವಿಲೇವಾರಿ ಆನ್‌ಲೈನ್‌ನಲ್ಲಿ ಸಾಧ್ಯವಾದಷ್ಟು ವೇಗಗೊಳಿಸಬೇಕು. ಜನಪರ ಆಡಳಿತ ನಮ್ಮೆಲ್ಲರ ಧ್ಯೇಯವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಸಚಿವ ಕೃಷ್ಣ ಬೈರೇಗೌಡ ಅವರು ಕ್ರಾಂತಿಕಾರಿ ಮನೋಭಾವನೆ ಇಟ್ಟುಕೊಂಡೆ ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಂದಾಯ ಇಲಾಖೆ ಎಂದರೆ ಗೊಂದಲದ ಗೂಡು. ಸಣ್ಣ ಕೆಲಸ ಆಗಲೂ ಅಲೆದಾಡಬೇಕು ಎಂಬುದು ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಆದರೆ, ಅದನ್ನೆಲ್ಲ ಸರಿಮಾಡುವ ನಿಟ್ಟಿನಲ್ಲಿ ಕೃಷ್ಣ ಬೈರೇಗೌಡರು ಸಂಕಲ್ಪ ಮಾಡಿದ್ದಾರೆ. ಪ್ರಾಮಾಣಿಕತೆಗೆ ಮತ್ತೊಂದು ಹೆಸರಿದ್ದರೆ ಕೃಷ್ಣ ಬೈರೇಗೌಡ ಎಂದು ಶ್ಲಾಘಿಸಿದರು.

ಪ್ರತಿ 30 ವರ್ಷಕ್ಕೊಮ್ಮೆ ರೀ-ಸರ್ವೇ ನಡೆಸಬೇಕು ಎಂಬುದು ನಿಯಮ. ಆದರೆ, ಒಂದು ಶತಮಾನದ ನಂತರ ಬ್ರಿಟಿಷರು ಬಿಟ್ಟುಹೋದ ಕೆಲಸ ಇದೀಗ ಕೃಷ್ಣ ಬೈರೇಗೌಡರ ಮೂಲಕ ಆಗುತ್ತಿದೆ ಎಂದರೆ ಇವರೂ ಇತಿಹಾಸ ನಿರ್ಮಿಸುತ್ತಿದ್ದಾರೆ ಎಂದೇ ಅರ್ಥ. ಇಲಾಖೆಯ ನೌಕರರಿಗೆ ಸರ್ಕಾರ ದೊಡ್ಡ ಶಕ್ತಿ ನೀಡಿದೆ. ಇದನ್ನು ಬಳಸಿಕೊಂಡು ಜಾತಿಧರ್ಮ ಭೇದ ಇಲ್ಲದೆ ಎಲ್ಲರೂ ಜನರಿಗೆ ನ್ಯಾಯ ನೀಡಿ. ಮನಸ್ಸಾಕ್ಷಿಯಿಂದ ಕೆಲಸ ಮಾಡಿ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸರ್ವೇ ಇಲಾಖೆಯ ಆಯುಕ್ತರಾದ ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply