ಬೆಂಗಳೂರು: ಎಲ್ಲವೂ ನಿರೀಕ್ಷೆಯಂತೆ ನಡೆದು ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಕಳೆದ ಒಂದು ವರ್ಷಗಳಿಂದ ಪದೇ ಪದೇ ಮುಂದೂಡಲ್ಪಟ್ಟಿದ್ದ ಹಾಗೂ ಬಹುಚರ್ಚಿತ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ನಡೆಯುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಆ ಸಭೆಯ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
ಈ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಬೊಮ್ಮಾಯಿ ಸೇರಿದಂತೆ ಪಕ್ಷದ ರಾಜ್ಯದ ಹಿರಿಯ ನಾಯಕರು ತೆರಳುತ್ತಿರುವುದರಿಂದ ಇದೇ ವೇಳೆ ವರಿಷ್ಠರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಬಹುದಾಗಿದೆ. ಈ ವೇಳೆ ಚುನಾವಣೆಗೆ ಪೂರಕವಾಗಿ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಶುಕ್ರವಾರ ಬೆಳಗ್ಗೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ನೂತನ ಸಚಿವರಿಗೆ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಸಂಪುಟಕ್ಕೆ ಹೊಸಮುಖಗಳನ್ನು ತೆಗೆದುಕೊಳ್ಳಲು ಸಂಪುಟ ಪುನಾರಚನೆ ಮಾಡಬೇಕು. ಪ್ರದೇಶವಾರು, ಜಾತಿ, ಸಂಘ ಪರಿವಾರದ ಹಿನ್ನಲೆ, ಅನುಭವ, ಕ್ಷೇತ್ರದಲ್ಲಿ ಮತದಾರರ ಜೊತೆ ಹೊಂದಿರುವ ಸಂಬಂಧ ಇವೆಲ್ಲವನ್ನು ಮಾನದಂಡವಾಗಿಟ್ಟುಕೊಂಡು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒಲವನ್ನು ಹೊಂದಿದ್ದರು. ಆದರೆ ಇದಕ್ಕೆ ಪೂರಕವಾದ ವಾತಾವರಣ ಸಿಕ್ಕಿಲ್ಲ ಎನ್ನಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಸಂಪುಟದಿಂದ ಯಾರನ್ನೇ ಕೈಬಿಟ್ಟರೂ ಅದು ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಸಂಘ ಪರಿವಾರದವರು ಸಲಹೆ ಕೊಟ್ಟಿದ್ದಾರೆ.
ಪ್ರತಿ ರಾಜ್ಯದಲ್ಲೂ ಗುಜರಾತ್ ಮಾದರಿ ಚುನಾವಣೆ ನಡೆಯುವುದಿಲ್ಲ. ಬಂಡಾಯ ಹತ್ತಿಕ್ಕದ ಪರಿಣಾಮ ಹಿಮಾಚಲಪ್ರದೇಶದಲ್ಲಿ ಸೋಲುಂಟಾಯಿತು. ಹೀಗಾಗಿ ಪುನಾರಚನೆಗೆ ಕೈ ಹಾಕದೆ ಸದ್ಯಕ್ಕೆ ಖಾಲಿ ಸ್ಥಾನ ತುಂಬಲಷ್ಟೇ ಗಮನಕೊಡಬೇಕೆಂದು ಆರ್‍ಎಸ್‍ಎಸ್ ಸಿಎಂಗೆ ಕಿವಿಮಾತು ಹೇಳಿದೆ. ಈ ಹಿನ್ನೆಲೆಯಲ್ಲಿ ಪುನಾರಚನೆ ವಿಚಾರದಿಂದ ಹಿಂದೆ ಸರಿದಿದ್ದು, ವಿಸ್ತರಣೆ ಮಾತ್ರ ಮಾಡಲಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ , ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು ಸಮತೋಲನದ ಸಂಪುಟ ವಿಸ್ತರಣೆಗೆ ಸಿಎಂ ಒಲವು ತೋರಿದ್ದಾರೆ. ಆದರೆ ಸಂಪುಟಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ಉನ್ನತ ಮೂಲಗಳ ಪ್ರಕಾರ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಪಿ.ರಾಜೀವ್, ಸಿ.ಪಿ.ಯೋಗೇಶ್ವರ್, ಎಂ.ಪಿ.ರೇಣುಕಾಚಾರ್ಯ ಮತ್ತು ದತ್ತಾತ್ರೇಯ ರೇವೂರು ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ.




