ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕನ್ನು ಚನ್ನಮ್ಮನ ಕಿತ್ತೂರು ಎಂದು ಮರು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಜ್ಯದ ಹಲವಾರು ಕಡೆ ಕಿತ್ತೂರು ಎಂಬ ಊರುಗಳಿವೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕನ್ನು ಚೆನ್ನಮ್ಮನ ಕಿತ್ತೂರು ಎಂದು ಮರು ನಾಮಕರಣ ಮಾಡಲಾಗುತ್ತಿದೆ ಎಂದರು.
ಕಿತ್ತೂರಿಗೂ ರಾಣಿ ಚೆನ್ನಮ್ಮನಿಗೂ ಅವಿನಾಭಾವ ನಂಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚೆನ್ನಮ್ಮನ ಶೌರ್ಯವನ್ನು ಯಾರೂ ಮರೆಯುವಂತಿಲ್ಲ. ಅವರ ಹೆಸರು ಎಂದೆಂದಿಗೂ ಸ್ಪೂರ್ತಿ ಹೀಗಾಗಿ ಅವರ ಊರಿನ ಜೊತೆಗೆ ಅವರ ಹೆಸರನ್ನು ಇಡಲು ನಿರ್ಧರಿಸಲಾಯಿತು. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುತ್ತದೆ ಎಂದರು.
ಶಿವಮೊಗ್ಗದ ಹಳೇ ಜೈಲು ಆವರಣದ ಉದ್ಯಾನವನಕ್ಕೆ ಅಲ್ಲಮಪ್ರಭು ರೈಲ್ವೇ ನಿಲ್ದಾಣ ಎಂದು ನಾಮಕರಣಕ್ಕೆ ನಿರ್ಧಾರ ಮಾಡಲಾಗಿದೆ. ಸಾಂಸ್ಕೃತಿಕ ರಾಯಭಾರಿ, ವಚನ ಚಳವಳಿಯ ಹರಿಕಾರ, ಸಮಾನತೆ, ಸ್ವಾತಂತ್ರ್ಯವನ್ನು ಪಸರಿಸಿದ ಹನ್ನೆರಡನೆಯ ಶತಮಾನದ ಮಹಾನ್ ಮಾನವತಾವಾದಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಂಪುಟ ನಿರ್ಧರಿಸಿತು ಎಂದರು.
ಜಾತಿ ರಹಿತ ಸಮಾಜದ ಕನಸು ಕಂಡವರು ಬಸವಣ್ಣ. ಸಮಾಜದಲ್ಲಿ ಸಾಮರಸ್ಯ ತರುವ ನಿಟ್ಟಿನಲ್ಲಿ ಅವರ ತತ್ವಗಳು ಹೆಚ್ಚು ಪ್ರಸಾರ ಆಗಬೇಕು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇಂದಿನ ಕಲುಷಿತ ವಾತಾವರಣದಲ್ಲಿ ಬಸವಣ್ಣ ತತ್ವ ಆದರ್ಶ ಎಲ್ಲಡೆ ಪಸರಿಸಬೇಕು. ಇದಕ್ಕೆ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತದೆ ಎಂದರು.
ಅದಕ್ಕಾಗಿ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, 2025 ರಲ್ಲಿ ಅನುಭವ ಮಂಟಪ ಪೂರ್ಣಗೊಳ್ಳಬೇಕು. ಮುಂದಿನ ವರ್ಷ ಅನುಭವ ಮಂಟಪದ ಲೋಕಾರ್ಪಣೆ ಆಗಲಿದೆ ಎಂದರು.




