ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಡಾ.ಅಂಬೇಡ್ಕರ್ ಬಂದಾಗ ನಡೆದ ಬೃಹತ್ ಮೆರವಣಿಗೆ ಕಡೆಗೆ ಬ್ರಾಹ್ಮಣನೊಬ್ಬ ಚಪ್ಪಲಿ ತೂರಿದ್ದ. ಈ ಕುರಿತು ಅಂಬೇಡ್ಕರ್ ಹೇಳಿದ್ದೇನು?
ಮುಂಬೈ ಇಲಾಖಾ ಪ್ರಾಂತೀಯ ಬಹಿಷ್ಕೃತ ಪರಿಷದ್ 3 ನೇ ಅಧಿವೇಶನ ನಿಪ್ಪಾಣಿಯಲ್ಲಿ 11-12 ಎಪ್ರಿಲ್ 1925 ರಂದು ಜರುಗಿತು, ದಾದಾ ಬಾಬಾ ಸಾಹೇಬ ಅಂಬೇಡ್ಕರ ಈ ಸಮಾವೇಶದ ಅಧ್ಯಕ್ಷರಾಗಿದ್ದರು. ಬೆಳಗಾವಿ ಜಿಲ್ಲೆಯ ಅಸ್ಪಶ್ಯ ಸಮಾಜದ ಕಾರ್ಯಕರ್ತರಾದ ಶ್ರೀ. ಡಿ.ಆರ್. ಇಂಗಳೆ, ಹಾಗೂ ನಿಪ್ಪಾಣಿಯ ಪ್ರಸಿದ್ಧ ಸಮಾಜ ಸೇವಕರಾದ ದಲಿತ ಸಮಾಜದ ಉದ್ಧಾರಕರಾದ ಶ್ರೀ ಮಾರುತಿ ಜ್ಯೋತಿ ರಾವಣ ಇವರು ಅಧಿವೇಶನದ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಶ್ರೀ ರಾವಣ ಇವರು ಸತ್ಯಶೋಧಕ ಸಮಾಜದ ಕಾರ್ಯಕರ್ತರಿದ್ದರು. ಅಲ್ಲದೇ ನಿಪ್ಪಾಣಿಯ ನಗರ ಪರಿಷತ್ತಿನ ಚೇರಮನ್ನರು ಕೂಡ ಇದ್ದರು. ಅಧಿವೇಶನದಲ್ಲಿ ಶ್ರೀ ಬಳವಂತರಾವ್ ವರಾಳೆ, ಶ್ರೀ ಎಸ್.ಎನ್. ಮಾನೆ ಇವರು ಸ್ವಯಂ ಸೇವಕರಾಗಿದ್ದರು. ಈ ಸಂದರ್ಭದಲ್ಲಿ ಶ್ರೀ ಬಳವಂತರಾವ ವರಾಳೆಯವರು ನಿಪ್ಪಾಣಿಯ ನಗರಸಭೆಯ ಶಾಲೆಯಲ್ಲಿ ಐದನೇಯ ತರಗತಿಯಲ್ಲಿ ಓದುತ್ತಿದ್ದರು. ಈ ಕಾರ್ಬಾರಿ ಹಾಗೂ ಬ್ರಾಹ್ಮಣೇತರ ಚಳುವಳಿಯ ಮತ್ತು ಸತ್ಯ ಶೋಧಕ ಸಮಾಜದ ಮುಖ್ಯ ಕಾರ್ಯಕರ್ತರಾದ ಶ್ರೀ ಬಾಬುರಾವ ಯಾದವ, ಅಸ್ಪೃಶ್ಯ ಸಮಾಜದ ಶ್ರೀ ಗಂಗಾರಾಮ ಯಾಜಿ ಕಾಂಬಳೆ, ಶ್ರೀಯುತರಾದ ಪವಾರ, ಲಿಗಾಡೆ, ದಾದಾಸಾಹೇಬ ಶಿರ್ಕೆ ಮುಂತಾದವರು ಹಾಜರಾಗಿದ್ದರು. ಆಗಿನ ಮೈಸೂರ ಸರ್ಕಾರದ, ಸಮಾಜ ಕಲಾಣ ಮಂತ್ರಿ ಈ ವಸಂತರಾವ ಪಾಟೀಲ ಅವರ ತಂದೆ ಎಸ್.ಎಸ್.ಪಾಟೀಲ್ ಅಧಿವೇಶನಕ್ಕೆ ಬಂದಿದ್ದರು.
ಅಧಿವೇಶನವು ನಿಪ್ಪಾಣಿಯ ಮಲ್ಲಿಕಾರ್ಜುನ ಥೇಟರಿನಲ್ಲಿ ಜರುಗಿತ್ತು. ಸಮಾವೇಶಕ್ಕೆ ಬಂದಿದ್ದ ಅತಿಥಿಗಳಿಗೆ ವಸತಿ ವ್ಯವಸ್ಥೆಯನ್ನು ನಗರ ಪಾಲಿಕೆಯಲ್ಲಿ ಮಾಡಲಾಗಿತ್ತು. ನಗರಪಾಲಿಕೆಯ ಒಂದು ಪ್ರಶಸ್ತವಾದ ಕೋಣೆಯಲ್ಲಿ ಬಾಬಾಸಾಹೇಬರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು, ಯಾವುದೇ ರೀತಿಯ ತಾರತಮ್ಯವಾಗದಂತೆ ಅಥಿತಿಗಳಿಗೆಲ್ಲ ಊಟದ ವ್ಯವಸ್ಥೆಯನ್ನು ಬಂದ ಮಾಡಲಾಗಿತ್ತು. ಅಧಿವೇಶನದ ನೆಪದಿಂದ ಈ ಭಾಗದಲ್ಲಿ ಒಂದು ಹೊಸ ಚೈತನ್ಯ ಉಂಟಾಗಿತ್ತು. ಈ ಮೊದಲು ಈ ಪ್ರಕಾರದ ಕಾರ್ಯಕ್ರಮಗಳು ಈ ಭಾಗದಲ್ಲಿ ಈ ಮೊದಲು ನಡೆದಿರಲಿಲ್ಲ. ಅಸ್ಪೃಶ್ಯ ಸಮಾಜದಲ್ಲಿ ಕೆಲವೊಂದು ಅನಿಷ್ಠ ಪದ್ಧತಿಗಳು ಈ ಪ್ರದೇಶದ ಜನರಲ್ಲಿದ್ದವು. ರೈತರ ಕಡೆಯಿಂದ ಬೇಡಿ ತಂದು ತಿನ್ನುವದು, ಜೋಗತಿ ಬಿಡುವದು, ಸತ್ತ ದನ ತಿನ್ನುವದು,ಅನಕ್ಷರತೆ ಮುಂತಾದವು. ಅಸ್ಪೃಶ್ಯತೆಯಿಂದಾಗಿ ಮನುಷ್ಯತ್ವವು ಸಂಪೂರ್ಣವಾಗಿ ಸತ್ತು ಹೋಗಿತ್ತು. ಸ್ವಾಭಿಮಾನದ ಅರಿವು ಅವರಿಗೆ ಇರಲೇ ಇಲ್ಲ, ಆರ್ಥಿಕ ದೃಷ್ಟಿಯಿಂದ ಈ ಭಾಗದ ಹೊಲೆಯರು ಸಾಧಾರಣ ಮಟ್ಟದಲ್ಲಿಯೇ ಇದ್ದರು. ಕಾರಣ ತಂಬಾಕಿನ ವ್ಯಾಪಾರವನ್ನು ಕೇವಲ ಹೊಲೆಯರು ಮಾತ್ರ ಮಾಡುತ್ತಿದ್ದರು. ಹೀಗಾಗಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸುಧಾರಿತರಾಗಿದ್ದರು. ಮುಂಬೈ ಇಲಾಖೆಯಲ್ಲಿ ತಂಬಾಕು ವ್ಯಾಪಾರದ ಅತ್ಯಂತ ಪ್ರಮುಖವಾದ ಸ್ಥಾನವೆಂದರೆ ನಿಪ್ಪಾಣಿ, ಇದು ಅಂದಿನ ತಂಬಾಕು ವ್ಯಾಪಾರದ ಪ್ರಮುಖ ಕೇಂದ್ರ ಸ್ಥಾನವಾಗಿತ್ತು. ನಿಪ್ಪಾಣಿಯ ಸುತ್ತ ಮುತ್ತಲಿನ ಪ್ರದೇಶಗಳಾದ ಯಕ್ಷಂಬಾ, ಸದಲಗಾ, ಬೇಡಿಕಿಹಾಳ, ಬೇನಾಡಿ, ಕೋಗನೋಳಿ, ಕೋಡಣಿ, ಕಣಗಲಾ, ಕೋಥಳಿ ಮುಂತಾದ ಊರುಗಳಲ್ಲಿ ತಂಬಾಕು ಪ್ರಸಿದ್ಧ ಬೆಳೆಯಾಗಿತ್ತು.
ಈ ಸಂದರ್ಭದಲ್ಲಿ ಬಾಬಾ ಸಾಹೇಬರ
ಮೆರವಣಿಗೆಯನ್ನು ಏರ್ಪಡಿಸಿದ್ದರು.
ಮೆರವಣಿಗೆಯು ಸಾಗುತ್ತಿರಬೇಕಾದರೆ ಬ್ರಾಹ್ಮಣನೊಬ್ಬನಿಗೆ ಅಸ್ಪೃಶ್ಯರ ವೈಭವ ಕಂಡು ಸಹಿಸಿಕೊಳ್ಳಲಾಗದೆ ಬಾಬಾಸಾಹೇಬರ ಮೆರವಣಿಗೆಯ ಮೇಲೆ ಚಪ್ಪಲಿ ಎಸೆದನು. ಅಲ್ಲಿ ಸೇರಿದ್ದ ದಲಿತರೆಲ್ಲ ಬ್ರಾಹ್ಮಣನ ಮನೆ ಹೊಕ್ಕು ಹೊಡೆಯಲು ಹೊರಟಾಗ ಬಾಬಾಸಾಹೇಬರು ಅದನ್ನು ತಡೆದು ಇಂಥ ವಿಘ್ನಗಳು ನಮ್ಮ ಚಳುವಳಿಗೆ ಇರುವದು ಸಹಜ. ಆದ್ದರಿಂದ ಈಗ ಯಾರೂ ತಾಳ್ಮೆ ಕಳೆದುಕೊಳ್ಳದೇ ಮೆರವಣಿಗೆಯನ್ನು ಮುಂದುವರೆಸಿ ಎಂದು ಆಜ್ಞಾಪಿಸಿದರು. ಆದರೂ ಒಬ್ಬ ದಲಿತನು ಸಿಟ್ಟು ತಡೆಯದೇ ತನ್ನ ಕಾಲಲ್ಲಿಯ ಚಪ್ಪಲಿಗಳನ್ನು ಆ ಬ್ರಾಹ್ಮಣನ ಮನೆಯ ಮೇಲೆ ಒಗೆದನು. ಇದನ್ನು ನೋಡಿದ ಅನೇಕರು ತಾವು ತಮ್ಮ ಚಪ್ಪಲಿಗಳನ್ನು ಆ ಬ್ರಾಹ್ಮಣನ ಮನೆಯ ಮೇಲೆ ಒಗೆದರು. ಸುಮಾರು ಹತ್ತು ಸಾವಿರ ಕಾರ್ಯಕರ್ತರೆಲ್ಲ ತಮ್ಮ ಚಪ್ಪಲಿಗಳನ್ನು ಅವನ ಮನೆಯ ಮೇಲೆ ಒಗೆದಾಗ ಅವನ ಮನೆಯ ಆಟ್ಟಿ, ತುಂಬಿ ಹೋಯಿತು. ಅಲ್ಲಿ ಚಪ್ಪಲುಗಳ ರಾಶಿಯೇ ತುಂಬಿತ್ತು. ನಿಪ್ಪಾಣಿಯ ಈ ಸಭೆಯ ಕೊನೆಗೆ ಅನೇಕ ಗೊತ್ತುವಳಿಗಳನ್ನು ಪಾಸು ಮಾಡಲಾಯಿತು. ಅದರಲ್ಲಿಯ ಒಂದು ಗೊತ್ತುವಳಿ ಹೀಗಿತ್ತು. ಅಸ್ಪಶ್ಯ ಜನಾಂಗದ ಮಹಾನ್ ದುರೀಣರಾದ ಡಾ. ಬಿ.ಆರ್. ಅಂಬೇಡ್ಕರ ಅವರನ್ನು ಮತ್ತು ಶೋಷಿತ ವರ್ಗದ ಜನರನ್ನು ಅಪಮಾನಿಸಲು ಚಪ್ಪಲು ಎಸೆದ ಬ್ರಾಹ್ಮಣನ ಮನೆಯಲ್ಲಿ ಚಪ್ಪಲಿಗಳನ್ನು ಯಾರೂ ವಿಲೇವಾರಿ ಮಾಡತಕ್ಕದ್ದಲ್ಲ. ಆದರಂತೆ: ನಿಪ್ಪಾಣಿ, ಮುನ್ಸಿಪಾಲ್ಟಿ ಸಹಿತ ಈ ಚಪ್ಪಲುಗಳನ್ನು ಅಲ್ಲಿಂದ ತೆಗೆಯಬಾರದೆಂದು ತಿಳಿಸಿತು.
(ಆಕರ:ಶಂಕರರಾವ ವಿ.ಮಗರ- ‘ಮುಂಬೈ ಕರ್ನಾಟಕದ ಜತೆಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಸಂಬಂಧಗಳು/ಪಿಹೆಚ್ಡಿ/2018 ಪುಟ:96/ಕರ್ನಾಟಕ ವಿವಿ ಧಾರವಾಡ)
– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು



