ಕರಾಳದಿನಗಳಲ್ಲಿ ಅಗ್ನಿಜ್ವಾಲೆಯಂತೆ ಎಲ್ಲವನ್ನು ಮೆಟ್ಟಿನಿಂತು ಮುನ್ನುಗ್ಗಿದ ಬಾಬಾ ಸಾಹೇಬರು

3 years ago

ಎಲ್ಲರಿಗೂ ವಿಶ್ವಜ್ಞಾನಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು💐(ತಪ್ಪದೇ ಈ ಲೇಖನ ಓದಿ)

ಇಂದಿಗೆ ಬಾಬಾ ಸಾಹೇಬರು ಜನಿಸಿ 132 ವರ್ಷಗಳಾದವು. ಬಾಬಾ ಸಾಹೇಬರು ಸತ್ತಿಲ್ಲ. ಅವರ ವಿಚಾರಗಳು ಈ ಭೂಮಿ ಇರುವವರೆಗೂ ಬದುಕಿರುತ್ತವೆ ಅನ್ನೋದು ಪರಮಸತ್ಯ. ಬಾಬಾ ಸಾಹೇಬರು ಈ ದೇಶದ ಶೋಷಿತರಿಗಾಗಿ ತಮ್ಮಿಡೀ ಜೀವ ಮತ್ತು ಜೀವನವನ್ನೇ ತ್ಯಾಗ ಮಾಡಿದರು. ತಮ್ಮ ನೆರಳು ಕೂಡ ಸವರ್ಣೀಯರ ಮೇಲೆ ಬೀಳಕೂಡದು ಎನ್ನುತ್ತಿದ್ದ ಕರಾಳದಿನಗಳಲ್ಲಿ ಬಾಬಾ ಸಾಹೇಬರು ಅಗ್ನಿಜ್ವಾಲೆಯಂತೆ ಎಲ್ಲವನ್ನು ಮೆಟ್ಟಿನಿಂತು ಮುನ್ನುಗ್ಗಿದರು. ನನ್ನನ್ನು ಮತ್ತು ನನ್ನ ಜನರನ್ನು ಸಮಾನತೆಯೆಡೆಗೆ ಕೊಂಡೊಯ್ಯುವುದು ಶಿಕ್ಷಣ ಮಾತ್ರ ಎನ್ನುವುದು ಬಾಬಾ ಸಾಹೇಬರಿಗೆ ಆ ಕಾಲದಲ್ಲೇ ಮನವರಿಕೆಯಾಗಿತ್ತು. ಸವರ್ಣೀಯರ ನಡುವೆಯೇ ಎಲ್ಲಾ ರೀತಿಯ ಅವಮಾನಗಳನ್ನು, ದೌರ್ಜನ್ಯವನ್ನು ಸಹಿಸಿಕೊಂಡೇ ಮುಂದೆ ಸಾಗಿದರು.

ನೀನು ಅಸ್ಪೃಶ್ಯ ನಿನಗ್ಯಾಕೆ ಶಿಕ್ಷಣ ಎಂದರು, ನೀನು ಮೇಲ್ವರ್ಗದ ಮಕ್ಕಳೊಂದಿಗೆ ಸರಿಸಮಾನವಾಗಿ ಕೂರಬಾರದು ಎಂದು ದೂರದಲ್ಲಿ ಕೂರಿಸಿದರು, ಮುಖ ಸಿಂಡರಿಸಿಕೊಂಡು ಮೇಲಿನಿಂದ ಅಂಗೈಗೆ ನೀರನ್ನು ಹೊಯ್ದರು, ಆದರೂ ಎಲ್ಲಾ ಅಡೆತಡೆಗಳನ್ನು, ಅವಮಾನವನ್ನು, ದೌರ್ಜನ್ಯವನ್ನು ಸಹಿಸಿ ಬಾಬಾ ಸಾಹೇಬರು ಮುನ್ನುಗ್ಗಿದರು. ಸವರ್ಣೀಯರು ಬಾಬಾ ಸಾಹೇಬರ ಮನೋಬಲವನ್ನು ಕುಗ್ಗಿಸುವ ಕೆಲಸ ಮಾಡಿದರು ಆದರೆ ಬಾಬಾ ಸಾಹೇಬರು ಚಲಬಿಡದ ಹಟವಾದಿಯಂತೆ ಅವಮಾನಗಳನ್ನು ನುಂಗಿ ಮುಂದೆ ಸಾಗಿದರು. ನೀನು ಶಿಕ್ಷಣ ಪಡೆಯಲು ಅರ್ಹನಲ್ಲ ಎನ್ನುತ್ತಿದ್ದವರ ಮುಂದೆಯೇ ಇಡೀ ಪ್ರಪಂಚದಲ್ಲೇ ಉನ್ನತ ವಿದ್ಯಾಸಂಸ್ಥೆ ಎನ್ನಿಸಿಕೊಂಡಿದ್ದ
ಕೊಲಂಬಿಯಾ ಯೂನಿವರ್ಸಿಟಿಯಲ್ಲಿ, ಲಂಡಲ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವೀ ಪಡೆದು ಡಾಕ್ಟರೇಟ್ ಪಡೆದರು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ರಾಜಕೀಯ ಶಾಸ್ತ್ರ, ಕಾನೂನು ಶಾಸ್ತ್ರ ಯಾವ ಕ್ಷೇತ್ರವನ್ನೂ ಬಿಡದೆ ಅಂತಾರಾಷ್ಟ್ರೀಯ ಮಟ್ಟದ ಜ್ಞಾನ ವೃದ್ಧಿಸಿಕೊಳ್ಳಲು ಎಲ್ಲವನ್ನು ಓದಿದರು.

ಹತ್ತಾರು ಪದವೀಗಳನ್ನು ಪಡೆದು, ಉನ್ನತ ಅಧಿಕಾರಿಯಾಗಿ ಹೊರಹೊಮ್ಮಿದರೂ ಬಾಬಾ ಸಾಹೇಬರ ಗುರಿ ಮಾತ್ರ ಯಾವತ್ತೂ ಬದಲಾಗಲಿಲ್ಲ, ಅವರ ಗುರಿ ಒಂದೇ ಆಗಿತ್ತು ಅದು ನನ್ನ ಜನರನ್ನು ಶೋಷಣೆಯಿಂದ ವಿಮೋಚನೆಗೊಳಿಸುವುದು, ಅವರಿಗೆ ಸಮಾನತೆ ತಂದುಕೊಡುವುದು, ಅವರಿಗೆ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು, ಘನತೆಯ ಬದುಕು ರೂಪಿಸಿಕೊಡುವುದು. ಮುಂದುವರೆದು ಬಾಬಾ ಸಾಹೇಬರು ಈ ದೇಶದ ಸಂವಿಧಾನ ಬರೆಯುವ ಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರು. ಶಾಲೆಯಲ್ಲಿ ಓದುತ್ತಿದ್ದಾಗ ಯಾರು ನೀನು ಕೆಳಜಾತಿಯವನು ದೂರ ಕುಳಿತುಕೊ ಎನ್ನುತ್ತಿದ್ದರೋ, ಅಂಬೇಡ್ಕರ್ ಉನ್ನತ ಅಧಿಕಾರಿಯಾಗಿ ಬಂದಾಗ ನೀನು ಕೆಳಜಾತಿಯವನು ಮನೆ ಕೊಡುವುದಿಲ್ಲ ಎಂದಿದ್ದರೋ ಅದೇ ಮನಸ್ಥಿತಿಯು ಅಂಬೇಡ್ಕರ್ ಸಂವಿಧಾನ ಬರೆಯುವುದನ್ನು ವಿರೋಧಿಸಿತು. ಅಂಬೇಡ್ಕರ್ ಯಾವುದೇ ಕಾರಣಕ್ಕೂ ಸಂವಿಧಾನ ಬರೆಯಕೂಡದು ಎಂದು ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ನನ್ನ ಜನರಿಗೆ ನನ್ನನ್ನು ಹೊರತುಪಡಿಸಿ ಬೇರೆ ಯಾರೇ ಸಂವಿಧಾನ ಬರೆದರೂ ನ್ಯಾಯ ದೊರಕದು ಎಂದು ಆಗಿನ ಬ್ರಿಟೀಷ್ ಇಂಡಿಯಾದ ಕೊನೆಯ ವೈಸ್ರಾಯ್ ಬಳಿ ಹೋಗಿ ಭಾರತದ ಜನಜೀವನ ಸ್ಥಿತಿ, ವರ್ಣವ್ಯವಸ್ಥೆ, ಅಸಮಾನತೆ, ಆಶಿಕ್ಷತೆ, ಶೋಷಣೆಯ ಬಗ್ಗೆ ಮನವರಿಕೆ ಮಾಡಿದರು. ಅಂಬೇಡ್ಕರ್ ಅವರಿಗಿದ್ದ ಆಘಾದವಾದ ವಿದ್ವತ್ತನ್ನು ಮನಗಂಡ ವೈಸ್ರಾಯ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಸಂವಿಧಾನ ರಚಿಸಬೇಕು ಎಂದು ಶಿಪಾರಸ್ಸು ಮಾಡಿದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದರು. ಈ ದೇಶದ ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸಾಮಾಜಿಕ ಸ್ಥಿತಿಗತಿಗಳನ್ನು ಆಧರಿಸಿ ಎಲ್ಲರಿಗೂ ಮೀಸಲಾತಿ ನೀಡಿದರು. ಶಿಕ್ಷಣ, ಸಮಾನತೆ, ಸ್ವಾತಂತ್ರ್ಯ ಎಲ್ಲವನ್ನು ನೀಡಿದರು. ಭೂಹೀನರಿಗೆ ಭೂಮಿ ನೀಡಿದರು, ಕೃಷಿ ಕಾಯ್ದೆಗಳನ್ನು ತಂದರು, ಉಚಿತ ಮತ್ತು ಎಲ್ಲರಿಗೂ ಶಿಕ್ಷಣವನ್ನು ನೀಡಿದರು. ಅಸ್ಪೃಶ್ಯತೆ ನಿವಾರಣೆ ಕಾಯ್ದೆಯನ್ನು ತಂದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದರು. ಮತದಾನ ಚಲಾಯಿಸುವ ಹಕ್ಕು ನೀಡಿದರು, ಮಹಿಳಾ ಸಮಾನತೆಗೆ ಹೆಚ್ಚು ಒತ್ತು ಕೊಟ್ಟರು, ಪುರುಷಪ್ರಧಾನವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿದರು. ಹೀಗೆ ಎಲ್ಲಾ ಆಯಾಮಗಳಲ್ಲೂ ಶೋಷಿತರಿಗೆ ನ್ಯಾಯವನ್ನು ದೊರಕಿಸಿಕೊಡುವ ಪ್ರಯತ್ನ ಪಟ್ಟರು. ಆದರೂ ಬಾಬಾ ಸಾಹೇಬರು ತೃಪ್ತರಾಗಿರಲಿಲ್ಲ. ಏಕೆಂದರೆ ಬಾಬಾ ಸಾಹೇಬರು ಅಂದುಕೊಂಡಿದ್ದ ಸಂವಿಧಾನ ಪೂರ್ತಿಯಾಗಿ ಅನುಷ್ಠಾನಕ್ಕೆ ಬರಲು ಸವರ್ಣೀಯರು ಅವಕಾಶ ನೀಡಲಿಲ್ಲ ಎನ್ನುವುದನ್ನು ಸ್ವತಃ ಬಾಬಾ ಸಾಹೇಬರೇ ಅನೇಕ ಬಾರಿ ಹೇಳಿದ್ದರು ಮತ್ತು ಬರೆದಿದ್ದಾರೆ.

“All powers are subordinate to political power” ಎನ್ನುವುದು ಬಾಬಾ ಸಾಹೇಬರಿಗೆ ಗೊತ್ತಿತ್ತು, ಆ ಕಾರಣಕ್ಕೆ ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಬೇಕು ಎಂದು ಹೋರಾಡಿದರು ಮತ್ತು ದೊರಕಿಸಿಕೊಟ್ಟರು. ಮತ ಚಲಾಯಿಸುವ ಹಕ್ಕು ಕೊಡುವುದನ್ನೇ ಒಪ್ಪದೇ ವಿರೋಧಿಸಿದ ಸವರ್ಣೀಯರು , ದಲಿತರು ಚುನಾವಣೆಗೆ ಸ್ಪರ್ದಿಸುವುದನ್ನು ಹೇಗೆ ಸಹಿಸಿಯಾರು. ಎಲ್ಲವನ್ನು ಮೆಟ್ಟಿ ಬಾಬಾ ಸಾಹೇಬರು ದಲಿತರಿಗೆ ರಾಜಕೀಯ ಮೀಸಲಾತಿಯನ್ನು ಕಲ್ಪಿಸಿದರು. ಸಂವಿಧಾನದ ಮೂಲಕ ಶೋಷಿತರಿಗೆ ನೀಡಿದ ಶಿಕ್ಷಣ, ಉದ್ಯೋಗ, ರಾಜಕೀಯ, ಮತದಾನದ ಹಕ್ಕು, ಲಿಂಗಸಮಾನತೆ, ಭೂಮಿ, ಅಸ್ಪೃಶ್ಯತೆ ನಿವಾರಣೆ, ಅಂತರ್ಜಾತಿ ವಿವಾಹ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದನ್ನೂ ಸಹಿಸದ ಮನುವಾದಿಗಳು ಸಂವಿಧಾನ ಅನುಷ್ಠಾನಕ್ಕೆ ಬಂದ ದಿನವೇ ಸಂವಿಧಾನದ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದ್ದರು, ಅದೇ ಸಿದ್ದಾಂತ ಇಂದು ದೇಶವನ್ನು ಆಳುತ್ತಿದೆ ಎನ್ನುವುದು ವಿಪರ್ಯಾಸ. ಮನುವಾದಕ್ಕೆ ಯಾವುದೇ ಪಕ್ಷಭೇದವಿಲ್ಲ, ಆ ಮನುವಾದ ಎಲ್ಲಾ ಪಕ್ಷಗಳಲ್ಲೂ ಆಳವಾಗಿ ಬೇರೂರಿದೆ.

ಅಂಬೇಡ್ಕರ್ ಜಯಂತಿಯನ್ನು ಎಲ್ಲರೂ ಆಚರಿಸುತ್ತೇವೋ ಇಲ್ಲವೋ ಎನ್ನುವುದು ಮುಖ್ಯವಲ್ಲ, ಆದರೆ ಅಂಬೇಡ್ಕರ್ ರವರ ವಿಚಾರಗಳನ್ನು ಎಷ್ಟರ ಮಟ್ಟಿಗೆ ಒಳಗೊಂಡಿದ್ದೇವೆ ಮತ್ತು ಪಾಲಿಸುತ್ತಿದ್ದೇವೆ ಅನ್ನೋದು ಬಹಳ ಮುಖ್ಯ. ಬಾಬಾ ಸಾಹೇಬರು ನಮಗೆ ಶಿಕ್ಷಣ ಕೊಟ್ಟು ಉದ್ಯಗವನ್ನು ಕೊಟ್ಟರು, ಅದರೊಂದಿಗೆ ಘನತೆಯ ಬದುಕನ್ನು ಕಲ್ಪಿಸಿಕೊಟ್ಟರು, ಹಣ ಅಂತಸ್ತು ಎಲ್ಲವೂ ಸಿಕ್ಕಿತು. ಎಷ್ಟೇ ದೊಡ್ಡ ಅಧಿಕಾರಿಯಾದರು ನೀತಿಗಳನ್ನು ಜಾರಿಗೊಳಿಸುವುದು ರಾಜಕಾರಣಿಗಳು ಎನ್ನುವ ಕಾರಣಕ್ಕೆ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಿದರು, ಸಂವಿಧಾನದ ಕಾಲಾಳುಗಳಾಗಿ ಕೆಲಸ ಮಾಡಲೆಂದು. ಶಿಕ್ಷಣ ಪಡೆದು ಉದ್ಯೋಗಸ್ಥರಾಗಿ ಹಣ ಅಂತಸ್ತು ಹೊಂದಿರುವ ನಾವುಗಳು ಏನು ಮಾಡುತ್ತಿದ್ದೇನೆ ಎನ್ನುವುದನ್ನು ನಾವೆಲ್ಲರೂ ಅವಲೋಕನ ಮಾಡಿಕೊಳ್ಳಬೇಕು. ಮೀಸಲು ಕ್ಷೇತ್ರದಿಂದ ಜಯಗಳಿಸಿ ತಮ್ಮ ಜನರ ಹಿತಕಾಯಬೇಕಾದ ಜನಪ್ರತಿನಿಧಿಗಳು ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ, ಮಂತ್ರಿಗಿರಿಗಾಗಿ ಸ್ವಾಭಿಮಾನವನ್ನೇ ಅಡವಿಟ್ಟು ಗುಲಾಮರಾಗಿರುವುದು ನೋವಿನ ಸಂಗತಿ. ನನ್ನ ಜನ ಆಳುವ ದೊರೆಗಳಾಗಬೇಕು ಎಂದು ಬಾಬಾ ಸಾಹೇಬರು ಕನಸು ಕಂಡಿದ್ದು ಯಾವ ಸವರ್ಣೀಯರು ಅಂದು ದಲಿತರಿಗೆ ಮತದಾನ ಮತ್ತು ರಾಜಕೀಯ ಮೀಸಲಾತಿಯನ್ನ ವಿರೋಧಿಸಿದ್ದರೋ ಅದೇ ಸವರ್ಣೀಯರ ಮುಂದೆ ಎದೆಯುಬ್ಬಿಸಿ ನಿಲ್ಲಲಿ ಎಂದು. ಆದರೆ ನಾವು ಬಂದಿರುವುದೇ ಸಂವಿಧಾನವನ್ನ ಬದಲಾಯಿಸಲು ಎಂದು ಬಹಿರಂಗವಾಗಿ ಹೇಳುವವರ ನಡುವೆ ಪ್ರಶ್ನಿಸದೇ ಬಾಯಿಮುಚ್ಚಿ ಕುಳಿತ ಪುಕ್ಕಲರಾಗಿದ್ದಾರೆ.

ಗುಲಾಮ ಮನಸ್ಥಿತಿಯಿಂದ ಹೊರಬರೋಣ, ಸಂವಿಧಾನಕ್ಕೆ ಮತ್ತು ನಮ್ಮ ಹಕ್ಕುಗಳ ಮೇಲೆ ದಾಳಿಯಾದಾಗ ಪಕ್ಷಾತೀತವಾಗಿ ಪ್ರಶ್ನಿಸುವ ಧೈರ್ಯ ತೋರೋಣ, ಬಾಬಾ ಸಾಹೇಬರ ಜಯಂತಿ ಮಾಡೋದಷ್ಟೇ ಅಲ್ಲ ಅವರ ವಿಚಾರಗಳನ್ನು ಪಾಲಿಸೋಣ, ಸಂವಿಧಾನದ ಕಾಲಾಳುಗಳಾಗಿ ಕೆಲಸ ಮಾಡೋಣ.

Happy world knowledge day
🌺🌿ಜೈ ಭೀಮ್. ಜೈ ಸಂವಿಧಾನ.

ರುದ್ರು ಪುನೀತ್ .ಆರ್.ಸಿ

Leave a Reply