ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ಬಿಕ್ಕಟ್ಟು ಇತ್ಯರ್ಥಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ತಮಗೆ ಅಮಿತ್ ಶಾ ಆಹ್ವಾನ ನೀಡಿದ್ದು ಡಿಸೆಂಬರ್ 14 ಅಥವಾ 15ರಂದು ಜಂಟಿಸಭೆ ನಡೆಯುವ ಸಾಧ್ಯತೆಗಳಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ ಪ್ರಯುಕ್ತ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಉನ್ನತ ಮಟ್ಟದ ಜಂಟಿ ಸಭೆಗೆ ಬರುವಂತೆ ತಮ್ಮನ್ನು ಅಮಿತ್ ಶಾ ಅವರು ಆಹ್ವಾನಿಸಿದ್ದಾರೆ. ನಾನು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಸಭೆಯಲ್ಲಿ ಭಾಗವಹಿಸಲಿದ್ದೇವೆ. ಈ ಸಭೆಯಲ್ಲಿ ರಾಜ್ಯದ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸಲಾಗುವುದು ಅದಕ್ಕೂ ಮುನ್ನ ಸರ್ವಪಕ್ಷ ಮುಖಂಡರ ಸಭೆ ಕರೆದು, ಅವರೊಂದಿಗೂ ಮಾತುಕತೆ ನಡೆಸುತ್ತೇನೆ ಎಂದರು.
ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿರುವೆ. ಆದಷ್ಟು ಸರ್ವಪಕ್ಷ ಸಭೆ ದಿನಾಂಕ ಗೊತ್ತುಪಡಿಸುವೆ ಎಂದು ತಿಳಿಸಿದರು.
ಸಂಸದರ ಸಭೆ: ಈ ನಡುವೆ ಸೋಮವಾರ ರಾಜ್ಯ ಸಂಸದರ ನಿಯೋಗ ಕೂಡಾ ಈ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಲಿದೆ.
ಶುಕ್ರವಾರ ಎನ್‍ಸಿಪಿ ಸಂಸದರ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಬೆನ್ನಲ್ಲೇ ರಾಜ್ಯದ ಬಿಜೆಪಿ ಸಂಸದರು ಈ ನಿರ್ಧಾರ ಕೈಗೊಂಡಿದ್ದಾರೆ.
ಸೋಮವಾರ ರಾಜ್ಯದ ಎಲ್ಲ ಸಂಸದರು ಒಟ್ಟಾಗಿ ಅಮಿತ್ ಶಾ ಅವರನ್ನು ಭೇಟಿಯಾಗುವ ಕುರಿತಂತೆ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ರಾಜ್ಯದ ಎಲ್ಲ ಸಂಸದರು ಸೋಮವಾರ ಅಮಿತ್ ಶಾ ಅವರನ್ನು ಭೇಟಿಯಾಗಿ ಗಡಿ ವಿವಾದ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದೆಂದು ಮನವರಿಕೆ ಮಾಡಿಕೊಡುವರು.
ಪ್ರಕರಣವು ನ್ಯಾಯಾಲಯದಲ್ಲಿ ಇರುವ ಕಾರಣ ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ ಅದು ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಕೇಂದ್ರ ಸರ್ಕಾರ ಕರ್ನಾಟಕದ ಹಿತ ಕಾಪಾಡಬೇಕೆಂದು ಮನವಿ ಮಾಡಲಿದೆ ಎಂದು ಗೊತ್ತಾಗಿದೆ.
ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡುವಂತೆ ರಾಜ್ಯ ಸಂಸದರಿಗೆ ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯಸಮ್ಮತ ನಿಲುವನ್ನು ತಿಳಿಸಲು ಶೀಘ್ರವೇ ಭೇಟಿ ಮಾಡಲಿದ್ದೇನೆ ಎಂದಿದ್ದಾರೆ.




