ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ

3 years ago

ಬೆಂಗಳೂರು: ಗುಜರಾತ್ ಚುನಾವಣೆ ನಂತರ ಕರ್ನಾಟಕ ಚುನಾವಣೆಯತ್ತ ಬಿಜೆಪಿ ವರಿಷ್ಠರು ಗಮನ ಹರಿಸಿದ್ದಾರೆ. ಈ ತಿಂಗಳು ಹಾಗೂ ಮುಂದಿನ ತಿಂಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಪಕ್ಷದ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿಯ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿ ಜನವರಿ ಎರಡನೇ ವಾರ ರಾಜ್ಯಕ್ಕೆ ಬರಲಿದ್ದು, ಬೆಳಗಾವಿಯಲ್ಲಿ ನಡೆಯುವ ರೈತ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಚಿತ್ರದುರ್ಗದಲ್ಲಿ ಜನವರಿ ಮೊದಲ ವಾರ ನಡೆಯುವ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗುವರು.

ಬಿಜೆಪಿ ಕಚೇರಿಯಲ್ಲಿಂದು ಪಕ್ಷದ ವಿವಿಧ ಸಮಾವೇಶಗಳ ಬಗ್ಗೆ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಿದ್ದತಾ ಸಭೆ ನಡಿಸಿದರು. ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 12 ರಂದು ಉಡುಪಿಯಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಯಲಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಭಾಗಿಯಾಗುವರು ಎಂದರು.

ಡಿಸೆಂಬರ್ 15 ರಂದು ಬಾಗಲಕೋಟೆಯ ಜಿಲ್ಲಾ ಕಚೇರಿ ಉದ್ಘಾಟನೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಲಿದ್ದಾರೆ. ಹಾಗೆಯೇ, ಡಿ. 18 ರಂದು ಬೆಂಗಳೂರಿನಲ್ಲಿ ವಿವಿಧ ಪ್ರಕೋಷ್ಠ ಸಮಾವೇಶ ನಡೆಯಲಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಲ್ಗೊಳ್ಳುವರು ಎಂದರು.

ಈ ತಿಂಗಳ 22 ರಂದು ಮುರುಡೇಶ್ವರದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದರು.

ರೌಡಿ ಸೇರ್ಪಡೆ ತಪ್ಪಾಗಿದೆ: ರೌಡಿಶೀಟರ್ ಬೆತ್ತನಗೆರೆ ಶಂಕರನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ತಪ್ಪಾಗಿದೆ. ಇದನ್ನು ಒಪ್ಪಿಕೊಳ್ಳುತ್ತೇವೆ. ಶಂಕರ್ ಈಗ ನಮ್ಮಲ್ಲಿ ಆಕ್ಟೀವ್ ಆಗಿಲ್ಲ. ಆತನನ್ನು ಪಕ್ಷದಿಂದ ತೆಗೆಯುವ ಬಿಡುವ ಅಧಿಕಾರ ಅಧ್ಯಕ್ಷರಿಗಿರುತ್ತದೆ. ಆತ ಯಾರು ಎಂಬುದು ಗೊತ್ತಿರಲಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸ್ಪಷ್ಟಪಡಿಸಿದರು.

Leave a Reply