ಬೊಮ್ಮಾಯಿ ಮತ್ತವರ ಸರ್ಕಾರವೇ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು: ಸಿದ್ದರಾಮಯ್ಯ

3 years ago

ದೊಡ್ಡಬಳ್ಳಾಪುರ: ಪ್ರಜಾಧ್ವನಿ ಯಾತ್ರೆ ಮೂಲಕ ಜನರ ಆಕಾಂಕ್ಷೆಗಳು ಮತ್ತು ಸಲಹೆಗಳನ್ನು ತಿಳಿದುಕೊಂಡು ಮುಂದೆ ನಾವು ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಇದು ನಮ್ಮ ಬದ್ಧತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತಾಡಿದ ಅವರು, ಬಿಜೆಪಿಯ ಭ್ರಷ್ಟಾಚಾರದ ಕರ್ಮಕಾಂಡವನ್ನು ನಾವು ಜನರಿಗೆ ತಿಳಿಸಲು ಆರಂಭಿಸಿದ ಮೇಲೆ ಅವರು ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ಭ್ರಷ್ಟಾಚಾರ ನಡೆದಿತ್ತು ಎಂದೆಲ್ಲ‌ ಸುಳ್ಳು ಹೇಳಲು ಆರಂಭ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಿಜೆಪಿ ಅಧಿಕೃತ ವಿರೋಧ ಪಕ್ಷದಲ್ಲಿತ್ತು, ಆಗ ಒಂದು ದಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಪ್ರಸ್ತಾಪ ಮಾಡಿಲ್ಲ. ಆಗ ಬಿಜೆಪಿಯವರ ಗಂಟಲಲ್ಲಿ ಕಡುಬು ಸಿಗಾಕಿಕೊಂಡಿತ್ತಾ? ಎಂದು ಪ್ರಶ್ನಿಸಿದರು.
ಸಚಿವ ಸುಧಾಕರ್‌ ಅವರು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಮ್ಮ ಜೊತೆ ಶಾಸಕರಾಗಿದ್ದರು, ಬಸವರಾಜ ಬೊಮ್ಮಾಯಿ ಭಾರೀ ಕಿಲಾಡಿ ತರ ಕಾಣುತ್ತಾರೆ. ಕಾರಣ ಹಿಂದೆ ನಮ್ಮ ಜೊತೆ ಇದ್ದ ಸುಧಾಕರ್‌ ಅವರಿಂದಲೇ ಹೇಳಿಕೆ ಕೊಡಿಸುತ್ತಿದ್ದಾರೆ. ಸುಧಾಕರ್, ಬೊಮ್ಮಾಯಿ ಎಲ್ಲರೂ ಭ್ರಷ್ಟರೇ. ಬೊಮ್ಮಾಯಿ ಮತ್ತವರ ಸರ್ಕಾರವೇ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು. ಇಂಥವರು ನಮಗೆ ಭ್ರಷ್ಟಾಚಾರದ ಪಾಠ ಮಾಡಿದರೆ ಭೂತದ ಬಾಯಲ್ಲಿ ಮಂತ್ರ ಕೇಳಿದಂತಾಗುತ್ತದೆ ಎಂದರು.
ಜೆಡಿಎಸ್‌ ನವರು ಸ್ವಂತಶಕ್ತಿ ಮೇಲೆ ಅಧಿಕಾರಕ್ಕೆ ಬರುವವರಲ್ಲ. ಅವರದು ಅವಕಾಶವಾದಿ ರಾಜಕಾರಣ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಮಾಡಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮಾಡ್ತೀನಿ ಎನ್ನುತ್ತಿದ್ದಾರೆ. ಹಿಂದೆ 2 ವರ್ಷ 10 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಗೆ ಪಂಚರತ್ನದ ನೆನಪು ಬಂದಿಲ್ವಾ? ಕಳೆದ ಚುನಾವಣೆಯಲ್ಲಿ 37 ಸ್ಥಾನ ಗಳಿಸಿದ್ದ ಕುಮಾರಸ್ವಾಮಿಯನ್ನು 80 ಸ್ಥಾನ ಗೆದ್ದಿದ್ದ ನಾವು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಅವರಿಗೆ ನಾವು ನೀಡಿದ್ದ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಲ್ಲಮಪ್ರಭು ಅವರ ವಚನದಂತೆ ಕೊಟ್ಟ ಕುದುರೆ ಏರಲಾಗದವ ವೀರನು ಅಲ್ಲ, ಶೂರನೂ ಅಲ್ಲ. ಇದು ಕುಮಾರಸ್ವಾಮಿಯ ಕಥೆ ಎಂದರು.
ಹಿಂದೆ ನಾನು ಮುಖ್ಯಮಂತ್ರಿಯಾಗಿರುವಾಗ ವೆಂಕಟರಮಣಯ್ಯ ಅವರು ತೆಗೆದುಕೊಂಡು ಬರುತ್ತಿದ್ದ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ಮನವಿ ಪತ್ರಗಳನ್ನು ಅನುಮೋದನೆ ಮಾಡಿ, 1600 ಕೋಟಿ ಅನುದಾನ ನೀಡಿದ್ದೆ. ದೊಡ್ಡಬಳ್ಳಾಪುರಕ್ಕೆ 32,000 ಮನೆಗಳನ್ನು ಕೊಟ್ಟಿದ್ದೆ. ಬಿಜೆಪಿಯವರು ಚುನಾವಣೆ ಹತ್ತಿರ ಬಂದಿರುವುದರಿಂದ 1000 ಮನೆ ಕೊಟ್ಟಿದ್ದಾರೆ, ಮಂಜೂರು ಮಾಡುವುದು ಯಾವಾಗಲೋ ಗೊತ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ರಾಜ್ಯಾದ್ಯಂತ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದೆವು. ನೇಕಾರರಿಗೆ ಮನೆ, 20ಹೆಚ್‌,ಪಿ ವರೆಗೆ 1 ರೂಪಾಯಿ 25 ಪೈಸೆಯಂತೆ ವಿದ್ಯುತ್‌ ನೀಡಿದ್ದೆವು. ಬಿಜೆಪಿ ಸರ್ಕಾರ 20 ಹೆಚ್‌,ಪಿ ಇಂದ 5 ಹೆಚ್‌,ಪಿ ಗೆ ಇಳಿಸಿದೆ. ನಾವು ಅಧಿಕಾರಕ್ಕೆ ಬಂದ ನಂತರ 20 ಹೆಚ್‌,ಪಿ ವರೆಗೆ ಉಚಿತವಾಗಿ ವಿದ್ಯುತ್‌ ನೀಡುತ್ತೇವೆ. ನೇಕಾರ ಸಮುದಾಯಕ್ಕೆ ಬಿಜೆಪಿ ಏನಾದರೂ ಮಾಡಿಕೊಟ್ಟಿದೆಯಾ? ಹಾಗಾಗಿ ದಯವಿಟ್ಟು ಯಾರೊಬ್ಬರೂ ಬಿಜೆಪಿಗೆ ಮತ ಹಾಕಬೇಡಿ ಎಂದರು.
2013ರಲ್ಲಿ ಇಲ್ಲಿನ ತಲಾ ಆದಾಯ 94,000 ರೂ. ಇತ್ತು, 2018ರಲ್ಲಿ ಅದು 1 ಲಕ್ಷದ 97 ಸಾವಿರಕ್ಕೆ ಏರಿಕೆಯಾಗಿತ್ತು. ಬೆಂಗಳೂರು ನಗರದಲ್ಲಿ ತಲಾ ಆದಾಯ 6 ಲಕ್ಷ ಇದೆ. ಅನ್ನಭಾಗ್ಯ ಯೋಜನೆ ಮೂಲಕ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ, ಈಗ ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ಅಕ್ಕಿ ಕೊಡಲು ಬೊಮ್ಮಾಯಿಗೆ ಯಾಕೆ ಹೊಟ್ಟೆ ಉರಿ? ನಾವು ಮುಂದೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದರು.
ಬೆಂಗಳೂರಿನ ಪಕ್ಕದಲ್ಲೇ ಇರುವ ಕ್ಷೇತ್ರ ಇದು, ಇಲ್ಲಿನ ಜನ ಹಣ್ಣು, ಹೂವು, ತರಕಾರಿ ಬೆಳೆ ಬೆಳೆದು ಬದುಕು ಸಾಗಿಸುತ್ತಿದ್ದಾರೆ. ಆದರೆ ಇಲ್ಲಿನ ಜನಕ್ಕೆ ನ್ಯಾಯಯುತ ಬೆಲೆಯ ಬದಲಾಗಿ ಶೋಷಣೆ ಸಿಗುತ್ತಿದೆ. ಎಂಎಸ್‌ಪಿ ಅಡಿ ರಾಗಿ ಬೆಳೆಯ ಖರೀದಿಯನ್ನು 50 ಕ್ವಿಂಟಾಲ್‌ ನಿಂದ 25 ಕ್ವಿಂಟಾಲ್‌ ಗೆ ಇಳಿಸಿದ್ದಾರೆ. ಇದರ ವಿರುದ್ಧ ವೆಂಕಟರಮಣಯ್ಯ, ಶರತ್‌ ಬಚ್ಚೇಗೌಡ, ರಂಗನಾಥ್‌ ಸದನದ ಬಾವಿಗಿಳಿದು ಹೋರಾಟ ಮಾಡಿದರು, ಸರ್ಕಾರ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಮತ್ತೆ 50 ಕ್ವಿಂಟಾಲ್‌ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುತ್ತೇವೆ. ಮಗ್ಗಗಳಿಗೆ ಉಪಯೋಗಿಸುವ ವಿದ್ಯುತ್‌ ಗೆ 20 ಹೆಚ್‌,ಪಿ ವರೆಗೆ ಒಂದು ರೂಪಾಯಿ ಕಟ್ಟುವ ಅಗತ್ಯವಿರುವುದಿಲ್ಲ, ಇದನ್ನು ನಾವು ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತೇವೆ. ನಾವು ನುಡಿದಂತೆ ನಡೆಯುವವರು ಎಂದರು.
ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ. ನರೇಂದ್ರ ಮೋದಿ ಅವರು ಹೊರದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು, ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು, ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ನ ಖಾವೂಂಗ ನ ಖಾನೆದೂಂಗ ಎಂದಿದ್ದರು, ರೈತರ ಸಾಲ ಮನ್ನಾ ಮಾಡಿದ್ದಾರ? ಇದರಲ್ಲಿ ಯಾವುದಾದರೂ ಒಂದು ಭರವಸೆ ಈಡೇರಿಸಿದ್ದಾರ? ಇದೇ ಕಾರಣಕ್ಕೆ ನರೇಂದ್ರ ಮೋದಿ ಅವರಂಥ ಸುಳ್ಳು ಪ್ರಧಾನಿಯನ್ನು ಈ ದೇಶ ಎಂದೂ ನೋಡಿರಲಿಲ್ಲ ಎಂದು ನಾನು ಹೇಳಿದ್ದು.
– ಸಿದ್ದರಾಮಯ್ಯ, ಮಾಜಿ ಸಿಎಂ
ಮನಮೋಹನ್‌ ಸಿಂಗ್‌ ಅವರು ರೂ. 78,000 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿರುವಾಗ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂಪಾಯಿ ವರೆಗಿನ 22 ಲಕ್ಷದ 27 ಸಾವಿರ ರೈತರ 8,165 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದೆ. ಮೋದಿ ಅವರು ಅಂಬಾನಿ, ಅದಾನಿಯಂಥಾ ಬಂಡವಾಳಶಾಹಿಗಳ 14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಮನಮೋಹನ್‌ ಸಿಂಗ್‌ ಅವರು ಇರುವಾಗ ಉದ್ಯಮಿಗಳ ಮೇಲೆ 30% ತೆರಿಗೆ ಇತ್ತು, ಅದನ್ನು ಮೋದಿ ಅವರು 20% ಗೆ ಇಳಿಸಿದ್ದಾರೆ. ಶ್ರೀಮಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಹಾಲು, ಮೊಸರು, ಪೆನ್ನು, ಪೆನ್ಸಿಲ್, ರಸಗೊಬ್ಬರ, ಗ್ಯಾಸ್‌ ಮೇಲೆ ತೆರಿಗೆ ಹೆಚ್ಚು ಮಾಡಿದ್ದಾರೆ. ಮನಮೋಹನ್‌ ಸಿಂಗ್‌ ಅವರು ಗ್ಯಾಸ್‌ ಮೇಲೆ ಸಬ್ಸಿಡಿ ಕೊಡುತ್ತಿದ್ದರು, ಅದನ್ನು ಕೂಡ ನಿಲ್ಲಿಸಿದ್ದಾರೆ ಎಂದರು.
ರಾಜ್ಯ ಬಿಜೆಪಿಯದು 40% ಕಮಿಷನ್‌ ಸರ್ಕಾರ. ಇದನ್ನು ಹೇಳಿದರೆ ಅವರಿಗೆ ಮೈ ಉರಿಯುತ್ತದೆ. ಕಳ್ಳರಿಗೆ ಕಳ್ಳ ಎಂದರೆ ಕೋಪ ಬರುತ್ತಂತೆ ಹಾಗಾಗಿ ಬಿಜೆಪಿಗೂ ನನ್ನ ಮೇಲೆ ಸಿಟ್ಟು ಬರುತ್ತದೆ. ಇಂಥವರನ್ನು ಅಧಿಕಾರದಿಂದ ಇಳಿಸುವ ಕೆಲಸವನ್ನು ರಾಜ್ಯದ ಜನ ಮಾಡಬೇಕು ಎಂದರು.
ಎತ್ತಿನಹೊಳೆ ಯೋಜನೆಗೆ ನಾನು ಮತ್ತು ವೀರಪ್ಪ ಮೊಯ್ಲಿಯವರು ಚಿಕ್ಕಬಳ್ಳಾಪುರದಲ್ಲಿ ಭೂಮಿ ಪೂಜೆ ಮಾಡಿದ್ದೆವು, ನಮ್ಮ ಕಾಲದಲ್ಲಿ ಎತ್ತಿನಹೊಳೆ ಕೆಲಸ ಎಷ್ಟು ಆಗಿತ್ತೋ ಅಷ್ಟಕ್ಕೆ ನಿಂತು ಹೋಗಿದೆ, ಈಗ ಯೋಜನಾ ವೆಚ್ಚ 24,000 ಕೋಟಿಗೆ ಹೆಚ್ಚಾಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ಅಷ್ಟೂ ಹಣವನ್ನು ನೀಡಿ ಯೋಜನೆಯನ್ನು ಪೂರ್ಣಗೊಳಿಸಿ ಈ ಭಾಗದ ಜನರಿಗೆ ನೀರು ಕೊಟ್ಟು, ಕೆರೆಗಳನ್ನು ತುಂಬಿಸುತ್ತೇವೆ, ಕುಡಿಯಲು ನೀರು ಕೊಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವೃಷಭಾವತಿ ಯೋಜನೆಯನ್ನು ಜಾರಿ ಮಾಡಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆಯುವವರು, ನಮ್ಮ ಮೇಲೆ ಜನರು ನಿಸ್ಸಂಶಯವಾಗಿ ನಂಬಿಕೆ ಇಡಬಹುದು ಎಂದರು.
ಕೃಷಿ ಭಾಗ್ಯ, ಶಾದಿ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್‌ ಇವೆಲ್ಲವನ್ನು ನಿಲ್ಲಿಸಿದ್ದಾರೆ, ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಯೋಜನೆಗಳಿಗೆ ಮರು ಚಾಲನೆ ನೀಡುತ್ತೇವೆ. ಇದೆಲ್ಲವೂ ಬೇಕು ಎನ್ನುವುದಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರದ ಜನ ಕಾಂಗ್ರೆಸ್‌ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

Leave a Reply