ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ತಂತ್ರ

4 years ago

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ‌ ಗದ್ದುಗೆಗೇರಲು‌ ಆಡಳಿತಾರೂಢ ಬಿಜೆಪಿ ಹಲವಾರು ಕಸರತ್ತು ನಡೆಸಿದೆ. ಆಡಳಿತ ವಿರೋಧಿ ಅಲೆ ಜನರ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಮುಂಜಾಗ್ರತೆಯಿಂದ ಹಲವಾರು ಕ್ರಮ ಕೈಗೊಂಡಿದೆ.

ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಡಬಲ್ಲ ಹಲವು ರಾಷ್ಟ್ರೀಯ ನಾಯಕರನ್ನು ರಾಜ್ಯಕ್ಕೆ ಆಹ್ವಾನಿಸಿ ಅವರ ಮೂಲಕ ಪಕ್ಷದ ಪರ ಒಲವು ಮೂಡಿಸಲು ಪ್ರಯತ್ನ ನಡೆದಿದೆ. ಇದಕ್ಕಾಗಿ ಸಾಲು ಸಾಲು ಸಮಾವೇಶಗಳನ್ನು ನಡೆಸಿ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಮುಂದಾಗಿದೆ. ಭಾನುವಾರ ಬಳ್ಳಾರಿಯಲ್ಲಿ ನಡೆಯಲಿರುವ ಎಸ್ಸಿ ಮೋರ್ಚಾದ ನವಶಕ್ತಿ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರದ ಹಲವು ಸಚಿವರು ಆಗಮಿಸಲಿದ್ದಾರೆ.

ಡಿಸೆಂಬರ್‌ ನಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಬಳಿ ರಾಷ್ಟ್ರೀಯ ಲಂಬಾಣಿ ಸಮಾವೇಶ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ನಿರೀಕ್ಷೆ ಇದೆ.

ಇವರೊಂದಿಗೆ ಪ್ರಧಾನಿ ಮೋದಿ, ಯುಪಿ ಸಿಎಂ ಆದಿತ್ಯ ನಾಥ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ , ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ನಾಯಕರನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ.

ಗುಜರಾತ್ ಮತ್ತು ಹಿಮಾಚಲಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಡಿ.8ರಂದು ಹೊರಬೀಳಲಿದೆ. ಇದರ ಬಳಿಕ ರಾಷ್ಟ್ರೀಯ ನಾಯಕರು ಕರ್ನಾಟಕದ ಕಡೆ ಗಮನ ಹರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕಂದಾಯ ಹೋಬಳಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಾತಿವಾರು, ವಿವಿಧ ಮೋರ್ಚಾಗಳ ಸಮಾವೇಶವನ್ನು ನಡೆಸಿ ಮತದಾರರನ್ನು ಪಕ್ಷದತ್ತ ಸೆಳೆಯುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಈಗಾಗಲೇ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದು ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗೆ ಲಗ್ಗೆ ಹಾಕಲು ಬಿಜೆಪಿ ಮುಂದಾಗಿದೆ.

ಹಳೆ ಮೈಸೂರು ಭಾಗವಾದ ಚಾಮರಾಜನಗರ, ಮೈಸೂರು, ಹಾಸನ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತಿತರ ಕಡೆ ಬಿಜೆಪಿ ಮೋದಿ ಅವರನ್ನು ಕರೆಸಿ ಹೆಚ್ಚು ಸಮಾವೇಶ ನಡೆಸಲು ತೀರ್ಮಾನಿಸಿದೆ.

ಈ ಭಾಗದಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು. ಕಳೆದ ಲೋಕಸಭೆ ಮತ್ತು ವಿಧಾನಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ಈಗಾಗಲೇ ತನ್ನ ಶಕ್ತಿಯನ್ನು ಪ್ರದರ್ಶಿಸಿರುವುದರಿಂದ ಸಂಘಟನೆಯನ್ನು ಬಲಪಡಿಸಿದರೆ 89 ಕ್ಷೇತ್ರಗಳಲ್ಲಿರುವ ಹಳೇ ಮೈಸೂರಿನಲ್ಲಿ 30 ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಬಿಜೆಪಿ ಚಿಂತಕರ ಛಾವಡಿ ನೀಡಿರುವ ಸಲಹೆ.
ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಎಸ್ಸಿ ಸಮಾವೇಶ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಸೇರಿದಂತೆ ಹಲವು ಕಡೆ ಸಮಾವೇಶಗಳನ್ನು ನಡೆಸಿ ಚುನಾವಣೆಗೆ ರಣ ಕಹಳೆ ಮೊಳಗಿಸಲಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕಕ್ಕೆ ಬಂದು ಹೆಚ್ಚು ಹೆಚ್ಚು ಪ್ರಚಾರ ನಡೆಸುವುದಾಗಿ ಖುದ್ದು ಪ್ರಧಾನಿ ಹೇಳಿದ್ದಾರೆ. ಬಿಜೆಪಿ ಕೂಡ ಮೋದಿಯವರ ನಾಮಬಲವನ್ನೇ ಮೆಚ್ಚಿಕೊಂಡಿರುವುದರಿಂದ ಬರುವ ದಿನಗಳಲ್ಲಿ ಕೇಸರಿ ಪಡೆ ಹಿಂದೆಂದಿಗಿಂತಲೂ ಅಬ್ಬರದ ಪ್ರಚಾರ ನಡೆಸಲು ಮುಂದಾಗಿದೆ.

Leave a Reply