ಬೆಂಗಳೂರು: 2024-25ನೇ ಸಾಲಿನ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸುವ ವೇಳೆ ವಿಪಕ್ಷ ಬಿಜೆಪಿ ಸದಸ್ಯರು ಬಜೆಟ್ನಲ್ಲಿ ಏನಿಲ್ಲ ಎಲ್ಲಾ ಸುಳ್ಳು ಎಂದು ಘೋಷಣೆ ಕೂಗಿ ಕೆಲಕಾಲ ಭಿತ್ತಿ ಪತ್ರ ಪ್ರದರ್ಶಿಸಿ ನಂತರ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಕೂಡ ಬಿಜೆಪಿ ಸದಸ್ಯರನ್ನು ಬೆಂಬಲಿಸಿ ಸಭಾತ್ಯಾಗ ಮಾಡಿ ಹೊರ ನಡೆದರು. ಸದನ ಸಮಾವೇಶಗೊಂಡ ಕೂಡಲೇ ಬಿಜೆಪಿ ಶಾಸಕ ಸುನೀಲ್ ಕುಮಾರ್ ಏನಿಲ್ಲಾ… ಏನಿಲ್ಲಾ… ಎಂದು ಹೇಳಿದರು.
ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಆಕ್ಷೇಪವೆತ್ತಲು ಶುರುಮಾಡಿದರು. ಆಗ ಸಿಎಂ ಸಿದ್ದರಾಮಯ್ಯ ಅವರು ನಿಶಬ್ದವಾಗಿರಲು ಹೇಳಿದರು. ನಂತರ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಅನುಮತಿಯಂತೆ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಮುಂದಾದರು. 15ನೇ ಹಣಕಾಸು ಆಯೋಗ ಮಧ್ಯಂತರ ವರದಿ ಶಿಫಾರಸ್ಸಿನಂತೆ ರಾಜ್ಯಕ್ಕಾದ ಅನ್ಯಯ ಸರಿಪಡಿಸುವಲ್ಲಿ ಹಿಂದಿನ ಸರ್ಕಾರ ವಿಫಲವಾಯಿತು ಎಂದರು.
ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಹಂಚಿಕೆಯಲ್ಲಿ 62098 ಕೋಟಿ ರೂ. ನಷ್ಟವಾಗಿದೆ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲ ಎದ್ದು ನಿಂತು ಏನಿಲ್ಲಾ… ಏನಿಲ್ಲಾ.. ಬಜೆಟ್ನಲ್ಲಿ ಏನಿಲ್ಲಾ.. ರೈತ ವಿರೋಧಿ ಸಿದ್ದರಾಮಯ್ಯ, ಎಲ್ಲಾ ಸುಳ್ಳು ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಬಿಜೆಪಿ ಸದಸ್ಯರ ಘೋಷಣೆ ಗದ್ದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದರು.




