ಕೋಲಾರ: ಕೆ.ಹೆಚ್ ಮುನಿಯಪ್ಪ ಅವರ ಆದಿಯಾಗಿ ಕೋಲಾರ ಜಿಲ್ಲೆಯ ಎಲ್ಲಾ ನಾಯಕರು ಇಲ್ಲಿಂದಲೇ ಸ್ಪರ್ಧೆ ಮಾಡಬೇಕು ಎಂದು ನನಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದು ದೇವಾಲಯಗಳಿಗೆ, ಮಸೀದಿಗಳಿಗೆ, ಚರ್ಚ್ ಗಳಿಗೆ ಭೇಟಿ ನೀಡಿ, ಪೂಜೆ ಪ್ರಾರ್ಥನೆ ಸಲ್ಲಿಸಿ, ಎಲ್ಲಾ ಧರ್ಮಗುರುಗಳೊಂದಿಗೆ ಮಾತನಾಡಿದ್ದೇನೆ, ಅವರೆಲ್ಲರೂ ನೀವು ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿದ್ದರು. ಕೋಲಾರ ಕ್ಷೇತ್ರದ ಜನತೆ ಕೂಡ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುವಂತೆ ಪ್ರೀತಿಯಿಂದ ಕರೆಯುತ್ತಿದ್ದಾರೆ ಎಂದರು.
ಕೆಲವರು ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ನಿಮಗಾಗಿ ನಾವು ಒಂದು ಹೆಲಿಕಾಪ್ಟರನ್ನೇ ಖರೀದಿ ಮಾಡಿ ಕೊಡುತ್ತೇವೆ, ನೀವು ಅದರಲ್ಲೇ ವಾರಕ್ಕೊಮ್ಮೆ ಬಂದು ಹೋದರೆ ಸಾಕು, ಇಲ್ಲೇ ನಿಲ್ಲಿ ಎನ್ನುತ್ತಿದ್ದಾರೆ. ಕೋಲಾರದಲ್ಲಿ ಜನ ಮತ್ತು ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸ ಗೌಡ ಅವರು ನೀವು ಇಲ್ಲಿಂದ ಸ್ಪರ್ಧೆ ಮಾಡಿದರೆ ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ನಿಮಗೆ ಬೆಂಬಲ ನೀಡುತ್ತೇನೆ ಎನ್ನುತ್ತಿದ್ದಾರೆ ಎಂದರು.
ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್ ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಎಂಬ ಕಾರಣಕ್ಕೆ ಪಕ್ಷದಲ್ಲಿ ನನಗೊಬ್ಬನಿಗೇ ವಿಶೇಷ ಅವಕಾಶ, ಸೌಲಭ್ಯ ಇಲ್ಲ, ಪಕ್ಷದಲ್ಲಿ ಯಾರೇ ಆಗಲಿ ಎಲ್ಲರೂ ಹೈಕಮಾಂಡ್ ನ ಅನುಮತಿ ಪಡೆದು ಸ್ಪರ್ಧೆ ಮಾಡಬೇಕು. ಅದರಂತೆ ನನಗೂ ಹೈಕಮಾಂಡ್ ಅನುಮತಿ ನೀಡಿದರೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.
ಮುಂದಿನ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧೆ ಮಾಡಿ ಜಯಗಳಿಸಿದರೆ ಪ್ರತೀ ವಾರ ಕೋಲಾರಕ್ಕೆ ಬರುತ್ತೇನೆ. ನಾನು ಬೆಳೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಯಾವ ಮುಖಂಡನನ್ನೂ ತಮ್ಮ ಜೊತೆ ಕರೆದುಕೊಂಡು ಬಂದು ನನ್ನನ್ನು ಭೇಟಿ ಮಾಡಬೇಕಾದ ಅಗತ್ಯ ಇಲ್ಲ, ಯಾವುದೇ ಸಾಮಾನ್ಯ ವ್ಯಕ್ತಿ ಬಂದು ನನ್ನನ್ನು ನೇರವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಜೊತೆಗೆ ನಾನು ಸ್ಪರ್ಧಿಸಿ ಗೆದ್ದ ಕ್ಷೇತ್ರಕ್ಕೆ ವಿಶೇಷ ಕಾಳಜಿ ನೀಡಿ ಅಭಿವೃದ್ಧಿ ಮಾಡಿದ್ದೇನೆ. ಇಡೀ ರಾಜ್ಯದ ಎಲ್ಲಾ ಜನರ ನೆರವಿಗೆ ಹೋಗುವಂತಾ ಕೆಲಸಗಳನ್ನು ಹಿಂದೆಯೂ ಮಾಡಿಕೊಂಡು ಬಂದಿದ್ದೇನೆ, ಮುಂದೆಯೂ ಮಾಡಲಿದ್ದೇನೆ ಎಂದರು.
ಕೋಲಾರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸುದರ್ಶನ್ ಅವರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ನಾನು ಈ ಹಿಂದೆ ಸ್ಪರ್ಧೆ ಮಾಡಿ ಗೆದ್ದುಬಂದ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವ ವಿಚಾರದಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇಲ್ಲಿಂದಲೇ ಚುನಾವಣೆಗೆ ನಿಂತು ನಾನು ಶಾಸಕನಾಗಿ ಆಯ್ಕೆಯಾದರೆ ಇಡೀ ಕೋಲಾರದ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಮಹತ್ವ ಕೊಡುತ್ತೇನೆ. ಇದರಲ್ಲಿ ಅನುಮಾನವೇ ಬೇಡ ಎಂದರು.
ನಾವು ಕೆ.ಸಿ ವ್ಯಾಲಿ ಯೋಜನೆಗೆ 1,400 ಕೋಟಿ ಅನುದಾನ ನೀಡಿ, ಜಾರಿ ಮಾಡಿದ್ದೆವು, ಎನ್,ಸಿ ವ್ಯಾಲಿ ಯೋಜನೆ ಜಾರಿ ಮಾಡಿದ್ದೆವು. ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಭೂಮಿ ಪೂಜೆ ಮಾಡಿದ್ದು ನಮ್ಮ ಕಾಲದಲ್ಲಿ. ಮತ್ತೆ ನಾವೇ ಅಧಿಕಾರಕ್ಕೆ ಬಂದಿದ್ದರೆ ಈ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆವು. ಮುಂದೆ ನಾವು ಮತ್ತೆ ಅಧಿಕಾರಕ್ಕೆ ಬಂದರೆ 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧರಿದ್ದೇವೆ. ಈಗ ಅದರ ಯೋಜನಾ ವೆಚ್ಚ 24,000 ಕೋಟಿ ಆಗಿದೆ, ಅದನ್ನು ಖರ್ಚು ಮಾಡಲು ತಯಾರಿದ್ದೇವೆ ಎಂದರು.
ಮೊನ್ನೆ ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷ ಘೋಷಣೆ ಮಾಡಿದಂತೆ ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೋಲಾರದಲ್ಲಿ ಕೃಷಿ ಮೇಲೆ ಅವಲಂಬಿತರಾದ ಜನ ಹೆಚ್ಚು. ಅದೇ ಕಾರಣಕ್ಕೆ ಸಕಲೇಶಪುರದ ಬಳಿ ನೇತ್ರಾವತಿ ನದಿ ನೀರನ್ನು ಎತ್ತಿ ಈ ಭಾಗದ ಕೆರೆಗಳನ್ನು ತುಂಬಿಸಲು ಕೆ.ಸಿ ವ್ಯಾಲಿ ಯೋಜನೆ ಮಾಡಿದ್ದು. ಈಗಾಗಲೇ ಸಾಕಷ್ಟು ಕೆರೆಗಳು ತುಂಬಿವೆ. ಮೊನ್ನೆ ನರಸಾಪುರದ ಕೆರೆಗೆ ಬಾಗೀನ ಅರ್ಪಿಸಲು ಹೋಗಿದ್ದೆ. ಇಲ್ಲಿ ತರಕಾರಿ, ಹಾಲು ಉತ್ಪಾದನೆ, ರೇಷ್ಮೆ, ರಾಗಿ ಮುಂತಾದ ಕೃಷಿ ಚಟುವಟಿಕೆಗಳನ್ನು ನಂಬಿರುವ ಜನ ಬಹಳಷ್ಟು ಇದ್ದಾರೆ. ಈ ಎಲ್ಲಾ ರೈತರಿಗೆ ನೀರು ಕೊಡುವ ಕೆಲಸವನ್ನು ಮುಂದೆ ನಾವು ಮಾಡುತ್ತೇವೆ ಎಂದರು.
ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ವರ್ಗದವರು, ಹಿಂದುಳಿದವರು ಹಾಗೂ ದಲಿತರಿಗಾಗಿ ನಮ್ಮ ಸರ್ಕಾರ ಇದ್ದಾಗ ಹಲವು ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆ, ನಾವು ಅಧಿಕಾರದಿಂದ ಇಳಿದ ಮೇಲೆ ಅವೆಲ್ಲವನ್ನೂ ನಿಲ್ಲಿಸಿದ್ದಾರೆ. ಕೋಲಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಮನವಿ ಮಾಡಿದ್ದಾರೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಆಸ್ಪತ್ರೆಯನ್ನು ಮಂಜೂರು ಮಾಡಿ ಸ್ಥಾಪನೆ ಮಾಡುವ ಕೆಲಸ ಮಾಡುತ್ತೇವೆ. ನಮ್ಮದು ನುಡಿದಂತೆ ನಡೆಯುವ ಸಿದ್ಧಾಂತ ಎಂದರು.
2013ರ ಚುನಾವಣೆಯಲ್ಲಿ ನಾವು 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಇದರ ಜೊತೆಗೆ 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಈಗ ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ, ಕೃಷಿ ಹೊಂಡ, ಶಾದಿ ಭಾಗ್ಯ ಇವು ಯಾವುವಾದರೂ ಈಗ ಇದೆಯಾ? ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅನುದಾನ ಖರ್ಚು ಮಾಡಬೇಕು ಎಂದು ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆ ಜಾರಿಗೆ ತಂದು, ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ 30,000 ಕೋಟಿ ರೂ. ಗೂ ಅಧಿಕ ಹಣ ನೀಡಿದ್ದೆ. ಅದಕ್ಕೂ ಮೊದಲು ಬಿಜೆಪಿ ಸರ್ಕಾರ ಇದ್ದಾಗ ಪೂರ್ತಿ 5 ವರ್ಷಗಳಲ್ಲಿ ಈ ವರ್ಗದ ಅಭಿವೃದ್ಧಿಗೆ ಖರ್ಚು ಮಾಡಿದ್ದ ಹಣ 22,000 ಕೋಟಿ. ನಾವು ಈ ಕಾನೂನು ಜಾರಿಗೆ ತಂದ ಮೇಲೆ ನಮ್ಮ ಸರ್ಕಾರದ 5 ವರ್ಷಗಳಲ್ಲಿ ಖರ್ಚು ಮಾಡಿದ ಒಟ್ಟು ಹಣ 88,000 ಕೋಟಿ ರೂ. ಎಂದರು.
ನಾವು ಅಧಿಕಾರಕ್ಕೆ ಬರುವ ಮೊದಲು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಗಳಿಗೆ ನೀಡುತ್ತಿದ್ದ ಅನುದಾನ 400 ಕೋಟಿ ರೂ. ಇತ್ತು. ಅದನ್ನು ನಾನು 3,000 ಕೋಟಿ ಹೆಚ್ಚು ಮಾಡಿದ್ದೆ. 800 ಕೋಟಿ ರೂ. ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ವಾಸಿಸುವ ಕೇರಿ/ಏರಿಯಾಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ನೀಡಿದ್ದೆ. ಬಡ ಜನರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೆ. ಈಗ ಬಸವರಾಜ ಬೊಮ್ಮಾಯಿ ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮ ಎನ್ನುತ್ತಿದ್ದಾರೆ. ಬೊಮ್ಮಾಯಿ ಅವರೇ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದವರು ಯಾರು? ನಿಮ್ಮ ವಾಜಪೇಯಿ ಅವರ ಸರ್ಕಾರ ಅಲ್ಲ, ಮನಮೋಹನ್ ಸಿಂಗ್ ಅವರ ಸರ್ಕಾರ. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದಾರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ಮುಂತಾದ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದರು.
ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ. ಅವರಿಗೆ ಜನ ಶಾಂತಿ, ನೆಮ್ಮದಿಯಿಂದ ಇರುವುದು ಬೇಡ. ಜನರ ಮಧ್ಯೆ ಜಗಳ ತಂದಿಟ್ಟು ಅದರಿಂದ ರಾಜಕೀಯ ಲಾಭ ಪಡೆಯಲು ಚಿಂತಿಸುವವರು ಅವರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದ ಜನರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತದೆ ಎಂದರು.
ಮನಮೋಹನ್ ಸಿಂಗ್ ಅವರ ಸರ್ಕಾರ 78,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿತ್ತು. ನಾನು ಮುಖ್ಯಮಂತ್ರಿಯಾಗಿರುವಾಗ 22,27,000 ರೈತರ 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ನರೇಂದ್ರ ಮೋದಿ ಅಥವಾ ಬಸವರಾಜ ಬೊಮ್ಮಾಯಿ ಅವರು ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದಾರ? ಎಂದರು.
ಮೋದಿ ಅವರು ಅಚ್ಚೇದಿನ್ ಆಯೇಗಾ ಎಂದರು, ಇಂದು ಗ್ಯಾಸ್ ಬೆಲೆ, ಅಡುಗೆ ಎಣ್ಣೆ ಬೆಲೆ, ಡೀಸೆಲ್ – ಪೆಟ್ರೋಲ್, ಕಬ್ಬಿಣ, ಸಿಮೆಂಟ್ ಬೆಲೆ ಎಷ್ಟಾಗಿದೆ? ಇದಾ ಅಚ್ಚೇದಿನ್? ನ ಖಾವೂಂಗಾ ನ ಖಾನೇದೂಂಗಾ ಎಂದರು ಇಲ್ಲಿನ ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ದೂರಿ ಮೋದಿ ಅವರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪತ್ರ ಬರೆದಿದ್ದರು. ಆದರೆ ಮೋದಿ ಅವರು ಇವತ್ತಿನವರೆಗೆ ರಾಜ್ಯ ಸರ್ಕಾರಕ್ಕೆ ಒಂದು ನೋಟಿಸ್ ನೀಡಿಲ್ಲ ಎಂದರು.
ಇಂದು ರಾಜ್ಯದಲ್ಲಿ ವಾತಾವರಣ ಕಾಂಗ್ರೆಸ್ ಪರವಾಗಿ ಬದಲಾಗುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೋಲಾರದಲ್ಲಿ ಬಿಜೆಪಿ ಪಕ್ಷವಿಲ್ಲ. ಆದರೂ ಬಿಜೆಪಿ ಬಗ್ಗೆ ಜನ ಎಚ್ಚರವಾಗಿರಬೇಕು. ಅವರು ಕೇವಲ ಅಲ್ಪಸಂಖ್ಯಾತರ ವಿರೋಧಿಗಳು ಮಾತ್ರ ಅಲ್ಲ, ರೈತರು, ಮಹಿಳೆಯರು, ಯುವ ಜನರ ವಿರೋಧಿಗಳು. ಯುವ ಜನರಿಗೆ ವಾರ್ಷಿಕ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು, ಕೊಟ್ಟಿದ್ದಾರ? ಕೆಲಸ ಕೇಳಿದವರಿಗೆ ಪಕೋಡ ಮಾರೋಕೆ ಹೋಗಿ ಎನ್ನುತ್ತಾರೆ. ಬಿಜೆಪಿಯವರಿಗೆ ಮಾನ ಮರ್ಯಾದಿ ಇದೆಯಾ? ಅದ್ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೋ ಗೊತ್ತಿಲ್ಲ ಎಂದರು.
ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆ. ಈಗಿನ ಬಿಜೆಪಿ ಸರ್ಕಾರ ಒಂದೇ ಒಂದು ಹೊಸ ಮನೆಯನ್ನು ಕಟ್ಟಿಕೊಟ್ಟಿಲ್ಲ, ಹಳೆಯ ಮನೆಗಳಿಗೆ ದುಡ್ಡನ್ನೂ ಬಿಡುಗಡೆ ಮಾಡಿ ಕೊಟ್ಟಿಲ್ಲ. ನಾಚಿಕೆಯಾಗಬೇಕು ಇವರಿಗೆ. ಜನರ ತೆರಿಗೆ ಹಣ ಯಾರಪ್ಪನ ಮನೆ ದುಡ್ಡಲ್ಲ. ನಾವು 7 ಕೆ.ಜಿ ಕೊಡುತ್ತಿದ್ದ ಅಕ್ಕಿಯನ್ನು 4 ಕೆ.ಜಿ ಮಾಡಿದ್ದಾರೆ. ಜನರ ತೆರಿಗೆ ಹಣದಲ್ಲಿ ಜನರಿಗೆ ಅಕ್ಕಿ ಕೊಡಲು ಏನು ಧಾಡಿ? ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ಬಂದ ತಕ್ಷಣ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಎಲ್ಲಾ ಬಡವರಿಗೆ ನೀಡುತ್ತೇವೆ ಎಂದರು.
ದಲಿತರಲ್ಲಿ ಕೈಗಾರಿಕೆ ಮಾಡುವವರಿಗೆ 4% ಬಡ್ಡಿದರದಲ್ಲಿ ಸಾಲ ಸೌಲಭ್ಯ, ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿ ಮಾಡಿದವರು ನಾವು. ಬೇರೆ ರಾಜ್ಯಗಳಲ್ಲಿ ಈ ಸೌಲಭ್ಯ ಇದೆಯಾ? ಮಹಿಳೆಯರಿಗೆ 10 ಲಕ್ಷದ ವರೆಗೆ ಬಡ್ಡಿರಹಿತವಾಗಿ ಸಾಲ ನೀಡಿದ್ದು ನಮ್ಮ ಸರ್ಕಾರ. ಇಂಥಾ ಅನೇಕ ವಿಚಾರಗಳು ಇನ್ನೂ ಇದ್ದಾವೆ ಎಂದರು.
ಇದು ಕೋಲಾರ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಆಗಿದ್ದು, ಇದೊಂದು ಸೀಮಿತ ಕಾರ್ಯಕ್ರಮವಾಗಿದೆ. 23ರಂದು ಬೃಹತ್ ಸಮಾವೇಶ ಮಾಡುತ್ತೇವೆ, ಅದಕ್ಕೆ ಇಡೀ ಜಿಲ್ಲೆಯ ಜನ ಬರಬೇಕು. ಆಗ ನಿಮ್ಮೊಂದಿಗೆ ಇನ್ನೂ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತೇನೆ ಎಂದರು.
ಈ ಬಾರಿ ನಾವು ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.



