ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ನಕಲಿ ತಯಾರಿಕೆ ಜಾಲದಲ್ಲಿ ಬಿಜೆಪಿ ನಾಯಕರಿಗೆ ನಂಟಿದೆ ಎಂದು ಆರೋಪಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಅಕ್ರಮದಲ್ಲಿ ಬಿಜೆಪಿ ನಾಯಕರ ಪಾಲೆಷ್ಟು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನಿನ ನಕಲಿ ಉತ್ಪನ್ನಗಳ ಮಾರಾಟದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗಿದೆ. ಈ ಹಗರಣದ ಪ್ರಮುಖ ಆರೋಪಿಗಳಾದ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬ ವ್ಯಕ್ತಿಗಳು ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಇವರು ಯೋಗಿ ಆದಿತ್ಯನಾಥ್, ತೆಲಂಗಾಣ ಶಾಸಕ ರಾಜಾ ಸಿಂಗ್ ಅವರ ಒಡನಾಡಿಗಳು ಎಂದು ಆರೋಪಿಸಿದರು.
ಈ ಇಬ್ಬರೂ, ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಜತೆ ಒಡನಾಟ ಇಟ್ಟುಕೊಂಡಿದ್ದಾರೆ ಎಂದರು.
ರಾಜ್ಯದ ಉತ್ಪನ್ನವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಂತಹ ಉತ್ಪನ್ನಗಳನ್ನು ಬಿಜೆಪಿ ನಾಯಕರು ನಕಲಿ ಉತ್ಪನ್ನಗಳ ಮಾರಾಟಕ್ಕೆ ಶಾಮೀಲಾಗಿದ್ದಾರೆ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಈಗ ಕರ್ನಾಟಕದ ಆಸ್ತಿ ಮಾರಲು ತಯಾರಾಗಿದ್ದಾರೆ ಎಂದು ಕಿಡಿಕಾರಿದರು.
ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ್, ಫೈಟರ್ ರವಿ, ಪೃಥ್ವಿ ಸಿಂಗ್ ರಂತಹವರು ಬಿಜೆಪಿಯಲ್ಲೇ ಕಾಣಿಸಿಕೊಳ್ಳುತ್ತಿರುವುದೇಕೆ? ರಾಜ್ಯದ ಆಸ್ತಿ ಮಾರಲು ಹೊರಟವರಿಗೆ ಪಕ್ಷದ ಟಿಕೆಟ್ ನೀಡಿ, ಪದಾಧಿಕಾರಿ ಮಾಡುತ್ತೀರಾ? ನಿಮಗೆ ನಾಚಿಕೆ ಇದ್ದರೆ ಅವರನ್ನು ವಜಾ ಮಾಡುತ್ತಿದ್ದಿರಿ ಎಂದರು.
ಮೊನ್ನೆ ಗರೀಬ್ ಕಲ್ಯಾಣ್ ಯೋಜನೆಯ 700 ಕ್ವಿಂಟಾಲ್ ಅಕ್ಕಿ ಬಿಜೆಪಿ ನಾಯಕರ ಗೋದಾಮಿನಲ್ಲಿ ಸಿಕ್ಕಿದೆ. ಮೋದಿ ಅಕ್ಕಿ ಎಂದು ಬೀಗುವ ಬಿಜೆಪಿ ನಾಯಕರು ಅದನ್ನು ಕದ್ದು ಸಿಕ್ಕಿಬಿದ್ದನಂತರವೂ ಆತನನ್ನು ಪಕ್ಷದಿಂದ ಹೊರಹಾಕಿಲ್ಲ ಎಂದರೆ ನಿಮಗೂ ಇದರಲ್ಲಿ ಪಾಲಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ. ಬಿಜೆಪಿ ನಾಯಕರಿಗೆ ಮಣಿಕಂಠ, ಪೃಥ್ವಿ ಸಿಂಗ್, ಸ್ಯಾಂಟ್ರೋ ರವಿ ಅವರ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಬಿಜೆಪಿಯವರಿಗಿಲ್ಲ. ಕಾರಣ ಅವರ ಗುಟ್ಟುಗಳೆಲ್ಲಾ ಇವರ ಬಳಿಯೇ ಇದೆ ಎಂದರು.




