ಗ್ಯಾರಂಟಿ ಯೋಜನೆಗಳ ಜಾರಿಗೆ ಬಿಜೆಪಿ ಒತ್ತಾಯ

3 years ago

#BJP #insists #implementation #guarantee #schemes

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಗೃಹಜ್ಯೋತಿ, ಯುವ ನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತಿಲ್ಲದೆ ಜಾರಿ ಮಾಡಬೇಕು. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು ಎಂದು ಆಗ್ರಹಿಸಿ ಬಿಜೆಪಿಯ ಶಾಸಕರು, ನಾಯಕರು, ಮುಖಂಡರು, ಕಾರ್ಯಕರ್ತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.

ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿದ ಬಿಜೆಪಿ ಹಲವಾರು ಶಾಸಕರು, ಮುಖಂಡರು, ಸಾವಿರಾರು, ಕಾರ್ಯಕರ್ತರು ರಾಜ್ಯ ಸರ್ಕಾರ ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ಬೇಷರತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಗ್ಯಾರಂಟಿ ಜಾರಿಗೆ ಒತ್ತಾಯಿಸಿದರು.ಗ್ಯಾರಂಟಿ ಯೋಜನೆ ಪೂರ್ಣ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿ ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್‌ನವರು ಕೊಟ್ಟ ಭರವಸೆಗಳನ್ನು ಷರತ್ತಿಲ್ಲದೇ ಜಾರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನರಿಗೆ ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಯಾವುದೇ ಕಾರಣಕ್ಕೂ ವಾಪಸ್ ಪಡೆಯಬಾರದು ಎಂದು ಆಗ್ರಹಿಸಿದರು.

ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಾಸು ಪಡೆದರೆ ಸಮಾಜದಲ್ಲಿ ಸಾಮರಸ್ಯ ಕದಡಲಿದೆ. ಮತ ಬ್ಯಾಂಕ್ ಗಟ್ಟಿಗೊಳಿಸಲು ಕಾಂಗ್ರೆಸ್ ಇಂತಹ ಕ್ರಮಗಳಿಗೆ ಮುಂದಾಗಿದೆ ಎಂದು ಹರಿಹಾಯ್ದರು.

ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು. ಈ ವಿಚಾರ ಇಟ್ಕೊಂಡು ನಾವು ಹೋರಾಟ ಮಾಡುತ್ತೇವೆ. ಇವತ್ತು ಒಂದೇ ದಿನ ಹೋರಾಟ ನಡೆಯಲಿದೆ. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ರೀತಿ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸುಳ್ಳು ಸಹಿ ಹಾಕಿ ಮನೆ ಮನೆಗೆ ಗ್ಯಾರಂಟಿ ಹಂಚಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ಜಾರಿಗೆ ಬಂದ 24 ಗಂಟೆಯಲ್ಲಿ ಭಾಗ್ಯಗಳ ಜಾರಿ ಎಂದು ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆಯುತ್ತ ಬಂದರೂ ಇನ್ನೂ ಯೋಜನೆಗಳು ಜಾರಿಯಾಗಿಲ್ಲ. ಭಾಗ್ಯಗಳ ಕೊಡುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಯೋಜನೆ ಕೊಡಿ ಎಂದು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೇಂದ್ರ ಕೊಡುತ್ತಿದೆ. ನೀವು ನೀಡಿದ್ದ ಭರವಸೆಯಂತೆ ಕೇಂದ್ರದಿಂದ ಕೊಡುವ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡಬೇಕು. ವಿದ್ಯುತ್ ಬಿಲ್ ಜನರಿಗೆ ಹೊರೆಯಾಗಿದೆ. ಈವರೆಗೂ ಹೊಸ ಸರ್ಕಾರ ಬಂದು ತಿಂಗಳಲ್ಲೇ ಹೋರಾಟ ನಡೆದಿಲ್ಲ. ಆದರೆ ವಿದ್ಯುತ್ ಬಿಲ್ ದುಬಾರಿ ಬರುತ್ತಿದ್ದು, ಜನರು ಸಿಡಿದೆದ್ದು ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ವಿದ್ಯುತ್ ಬಿಲ್ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದು ಗೋ ವಿರೋಧಿ ನೀತಿ ಮಾಡುತ್ತಿದ್ದಾರೆ. ಪಠ್ಯ ಪರಿಷ್ಕರಣೆ ಮಾಡಿ ದ್ವೇಷದ ರಾಜಕಾರಣ ಮಾಡುವುದನ್ನು ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿದರು.

ಸರ್ಕಾರ ಭಾಗ್ಯಗಳನ್ನು ಕೊಡಬೇಕು, ದ್ವೇಷದ ರಾಜಕಾರಣ ನಿಲ್ಲಿಸಬೇಕು. ವಿದ್ಯುತ್ ಬಿಲ್ ಕಡಿಮೆ ಮಾಡದಿದ್ದರೆ ಬೀದಿ ಬೀದಿಯಲ್ಲಿ ಹೋರಾಟ ಮಾಡುತ್ತೇವೆ. ಬಿಲ್ ಕಟ್ಟಲು ಬಿಡದೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಿನ್ನೆ ನಮ್ಮ ಕಾರ್ಯಕರ್ತ ಸಿದ್ದೇಶ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಬೇಕಾದ ಕಾರಣ ನಾನು ಹೋರಾಟದ ನಡುವೆ ಚಿತ್ರದುರ್ಗಕ್ಕೆ ತೆರಳುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಸಿದ್ದೇಶ್ ನಿಧನಕ್ಕೆ ಸಂತಾಪ: ಹೋರಾಟ ಆರಂಭಕ್ಕೂ ಮೊದಲು ನಿನ್ನೆ ಬಿಜೆಪಿ ಸಭೆಯಲ್ಲಿ ಭಾಗಿಯಾಗಿದ್ದ ಬಳ್ಳಾರಿ ಪ್ರಭಾರಿ ಸಿದ್ದೇಶ ಯಾದವ್ ನಿಧನರಾಗಿದ್ದು, ಅವರ ನಿಧನಕ್ಕೆ ಬಿಜೆಪಿ ನಾಯಕರು ಕಾರ್ಯಕರ್ತರು ಸಂತಾಪ ಸೂಚಿಸಿದರು. ನಂತರ ಸಿದ್ದೇಶ್ ಯಾದವ್ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಡಿ.ವಿ ಸದಾನಂದಗೌಡ, ಕೆ.ಎಸ್‌ ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಸಿ. ನಾಗೇಶ್, ಬಿ.ಸಿ‌.ಪಾಟೀಲ್, ಕೆ.ಸಿ.ನಾರಾಯಣಗೌಡ, ಮುರುಗೇಶ್ ನಿರಾಣಿ, ಎನ್.ಮಹೇಶ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

Leave a Reply