ಬೆಂಗಳೂರು: ಕಮೀಷನ್ ಹಾಗೂ ರಾಜಕೀಯ ಕಾರಣಕ್ಕಾಗಿ ಹಿಂದಿನ ಸರ್ಕಾರ ವಿವಿಧ ಕಾಮಗಾರಿಗಳಿಗೆ ಬೇಕಾ ಬಿಟ್ಟಿ ಟೆಂಡರ್ ಗಳನ್ನು ಕರೆದು ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದಾಗಿ ಈ ವರ್ಷ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಇದನ್ನು ನಮ್ಮ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಶಾಸಕರುಗಳ ನಿರೀಕ್ಷೆಗಳು ಬಹಳ ಇವೆ. ಕೋಟ್ಯಂತರ ರೂ. ಅನುದಾನಕ್ಕಾಗಿ ಬೇಡಿಕೆಗಳು ಬರುತ್ತಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜಲಸಂಪನ್ಮೂಲ, ಪಿಡಬ್ಲ್ಯೂಡಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಯಾವುದೇ ಇಲಾಖೆಗಳಿಂದಲೂ ವಿಶೇಷ ಅನುದಾನ ನೀಡಲು ಕಷ್ಟಸಾಧ್ಯವಾಗಲಿದೆ ಎಂದರು.
ಈ ವಿಷಯವನ್ನು ಶಾಸಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಈ ಮೊದಲು ಬಜೆಟ್ ರೂಪಿಸುವ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರಿಗೂ ಪರಿಸ್ಥಿತಿ ಅರ್ಥ ಮಾಡಿಕೊಂಡು ತಾಳ್ಮೆಯಿಂದಿರುವಂತೆ ಸಲಹೆ ನೀಡಿದ್ದರು. ಹೀಗಾಗಿ ಆಯಾ ಇಲಾಖೆಗಳಲ್ಲಿ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳಿಗಷ್ಟೇ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲವು ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚು ಆಸಕ್ತಿ ಇದೆ. ಈ ವರ್ಷ ಪಂಚಖಾತ್ರಿ ಯೋಜನೆಗಳಿಗಾಗಿ 40 ಸಾವಿರ ಕೋಟಿ ರೂ. ಖರ್ಚು ಮಾಡಬೇಕು. ಜನರಿಗೆ ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಈ ವರ್ಷವೇ ಪಂಚಖಾತ್ರಿ ಯೋಜನೆಗಳು ಜಾರಿಯಾಗಬೇಕಿರುವುದರಿಂದ ಹಾಗೂ ಹಿಂದಿನ ಸರ್ಕಾರ ಆರ್ಥಿಕತೆಯನ್ನು ದಿವಾಳಿ ಮಾಡಿರುವುದರಿಂದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದು ಹೇಳಿದರು.



