ಹಾವೇರಿ: 201 ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಅವರು 74,000 ಮತಗಳನ್ನು ಪಡೆದು ಕೇವಲ 6,000 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕೊನೆ ಘಳಿಗೆಯಲ್ಲಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿ, ಅವರಿಗೆ ಅಗತ್ಯ ಸಮಯಾವಕಾಶ ನೀಡದೆ ಇದ್ದದ್ದು ಸೋಲಿಗೆ ಕಾರಣವಾಗಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಹಾನಗಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಮತ ಯಾಚಿಸಿದ ಅವರು, ಚುನಾವಣೆಯಲ್ಲಿ ಸೋತೆ ಎಂದು ಮನೆಯಲ್ಲಿ ಕೂರದೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ಜೊತೆಗಿದ್ದು, ಅವರ ಕಷ್ಟ ಸುಖಗಳನ್ನು ಕೇಳಿ ತಮ್ಮ ಕೈಲಾದ ಸಹಾಯ ಮಾಡಿರುವ ಕಾರಣಕ್ಕೆ ಇಂದು ಶ್ರೀನಿವಾಸ್ ಮಾನೆ ಅವರನ್ನು ಕ್ಷೇತ್ರದ ಜನ ಅಪದ್ಭಾಂದವ ಎಂದು ಕರೆಯುತ್ತಾರೆ ಎಂದರು.
ನಾವು ಅಧಿಕಾರದಲ್ಲಿ ಇದ್ದಾಗ ಜನರಿಗೆ ನೀಡಿದ್ದ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರೈತರ ಸಾಲಮನ್ನಾ, ಕ್ಷೀರಧಾರೆ, ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದರು.
ಬಿಜೆಪಿ ಅವರಂತೆ ನಾವು ಹಣ ಹಂಚಿ ಮತ ಕೇಳುತ್ತಿಲ್ಲ. ಅಧಿಕಾರದಲ್ಲಿ ಇದ್ದಾಗ ಐದು ವರ್ಷ ನಿಮಗಾಗಿ ದುಡಿದಿದ್ದೇವೆ, ನಮ್ಮ ದುಡಿಮೆಗೆ ಕೂಲಿಯ ರೂಪದಲ್ಲಿ ಮತ ಕೊಡಿ ಎಂದು ಕೇಳುತ್ತಿದ್ದೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಲ್ವಾ? ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಯಾವುದಾದರೂ ಒಂದು ಜನಪರ ಯೋಜನೆಯ ಹೆಸರು ಹೇಳಲಿ ನೋಡೋಣ. ಅವರಿಂದ ಸಾಧ್ಯವಿದೆಯಾ? ತಮ್ಮ ಬಣ್ಣ ಬಯಲಾಗುತ್ತೆ ಎಂದು ಹೆದರಿ ಅವರು ಒಂದೇ ವೇದಿಕೆಗೆ ಚರ್ಚೆಗೆ ಬರಲು ನಿರಾಕರಿಸಿದರು ಎಂದರು.
ಚುನಾವಣೆ ಕಾರಣಕ್ಕೆ ಬಸವರಾಜ ಬೊಮ್ಮಾಯಿಯವರು ಹಾನಗಲ್ ಗೆ 7400 ಮನೆಗಳನ್ನು ಮಂಜೂರು ಮಾಡಿ ಆದೇಶ ಪತ್ರ ಹಿಡಿದುಕೊಂಡು ಮತ ಕೇಳುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಒಂದು ಮನೆಯನ್ನು ಕಟ್ಟಿಸಿಕೊಡಲ್ಲ. ಇದು ಬರೀ ಚುನಾವಣಾ ಗಿಮಿಕ್ ಅಷ್ಟೆ ಎಂದರು.
ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿಯವರು ಅಂಜುಮಾನ್ ಸಂಸ್ಥೆಯವರಿಗೆ 5 ಲಕ್ಷ ರೂಪಾಯಿ ಹಣ ಕೊಟ್ಟು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿಗೆ ಮತ ಹಾಕಲ್ಲ ಎಂದು ಗೊತ್ತು, ನಮಗೆ ಮತ ನೀಡದಿದ್ದರೂ ಪರವಾಗಿಲ್ಲ ಜೆಡಿಎಸ್ ಗೆ ಹಾಕಿ ಎಂದು ಹೇಳಿದ್ದಾರೆ. ಬಿಜೆಪಿಯವರ ಹಣ ಹಾಗೂ ಸುಳ್ಳು ಭರವಸೆಗಳನ್ನು ನಂಬದೆ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಮತದಾರರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದರು.
ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ್, ಡಾ. ಜಿ. ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಭಾಗವಹಿಸಿದ್ದರು.



