ಎಚ್ ಡಿ ಕುಮಾರಸ್ವಾಮಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

10 months ago

ಬೆಂಗಳೂರು: ಅಕ್ರಮ ಭೂ ಕಬಳಿಕೆ ಆರೋಪದಲ್ಲಿ ಸಿಲುಕಿದ್ದ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.

ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಮೀನಿನ ಮಾಲೀಕತ್ವ ಕುರಿತಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಜಮೀನು ಒತ್ತುವರಿಯ ಆರೋಪ ಪ್ರಕರಣ ಕುರಿತಂತೆ ತನಿಖೆ ನಡೆಸಲು ರಚಿತಗೊಂಡಿರುವ ಎಸ್‌ಐಟಿ ನೇಮಕ ರದ್ದುಪಡಿಸುವಂತೆ ಕೋರಿ ಕೇಂದ್ರ ಕುಮಾರಸ್ವಾಮಿ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್  ವಿಚಾರಣೆ ನಡೆಸಿದರು. ಈ ವೇಳೆ ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದ ಮಂಡಿಸಿದರು. ನ್ಯಾಯಪೀಠ ಎಸ್‌ಐಟಿ ನೇಮಕ ಆದೇಶಕ್ಕೆ ಮುಂದಿನ‌ ವಿಚಾರಣೆತನಕ ಮಧ್ಯಂತರ ತಡೆ ನೀಡಿತು. ಸರ್ಕಾರದ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ಬಳಿಯ ಸುಮಾರು 14 ಎಕರೆ ಸರಕಾರಿ ಭೂಮಿಯ ಅನಧಿಕೃತ ಒತ್ತುವರಿ ತೆರವುಗೊಳಿಸುವ ಸಂಬಂಧ ಸರಕಾರ ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿತ್ತು.

ಕರ್ನಾಟಕ ಭೂ ಕಂದಾಯ ಕಾಯಿದೆ, ಕರ್ನಾಟಕ ಭೂ ಕಂದಾಯ ನಿಯಮಗಳು, ಕರ್ನಾಟಕ ಭೂ ಮಂಜೂರಾತಿ ನಿಯಮ ಮತ್ತು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ ಉಲ್ಲಂಘನೆ ಮತ್ತು ಜಲಕಾಯ, ಜಲಮೂಲ ಪ್ರದೇಶಗಳು, ಸರ್ಕಾರಿ ಖರಾಬು/ಗೋಮಾಳ ಒತ್ತುವರಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲು
ಸೂಚನೆ ನೀಡಿತ್ತು.

ಏನಿದು ಪ್ರಕರಣ?: ರಾಮನಗರ ಜಿಲ್ಲೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಮಾಜ ಪರಿವರ್ತನಾ ಸಮುದಾಯವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. 2020ರಲ್ಲಿ ಲೋಕಾಯುಕ್ತ ವರದಿ ಅನುಸಾರ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶಿಸಿತ್ತು. ಆದರೆ, ಸರ್ಕಾರ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐಟಿ ರಚಿಸಿದ್ದು, ಇದನ್ನು ರದ್ದುಗೊಳಿಸುವಂತೆ ಕುಮಾರಸ್ವಾಮಿ ಕೋರಿದ್ದರು.

ಸಮಾಜ ಪರಿವರ್ತನಾ ಸಮುದಾಯವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ ಆದೇಶವನ್ನು ಸರ್ಕಾರ ಜಾರಿಗೊಳಿಸಿಲ್ಲ ಎಂದು ಅವರು ದೂರಿದ್ದರು. ಸರ್ಕಾರಿ ಭೂಮಿ ಒತ್ತುವರಿ ಪತ್ತೆ ಮಾಡಲು ಎಸ್‌ಐಟಿ ರಚಿಸಿರುವುದು ಕಾನೂನಿಗೆ ಅನುಗುಣವಾಗಿಲ್ಲ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು ಎಂದು ಪ್ರಶ್ನಿಸಿ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಸದ್ಯ ಹೈಕೋರ್ಟ್‌ ಅವರ ಅರ್ಜಿ ಪುರಸ್ಕರಿಸಿದೆ.

Leave a Reply