ಪರಿಶಿಷ್ಟ ಜಾತಿ/ಪಂಗಡ ಸಂಶೋಧನಾ ವಿದ್ಯಾರ್ಥಿಗಳ ಪರ ದನಿ ಎತ್ತಿದ ನಂಜನಗೂಡು ಶಾಸಕ ಬಿ.ಹರ್ಷವರ್ಧನ್!

5 years ago

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶೇಷ ಘಟಕದ ಮೂಲಕ ಪ್ರತಿ ವರ್ಷ ಕೇವಲ 20 ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಮಾತ್ರ ಶಿಷ್ಯವೇತನ ನೀಡುತ್ತಿದ್ದು, ಉಳಿದ ಸಂಶೋಧನಾ ವಿದ್ಯಾರ್ಥಿಗಳು ಶಿಷ್ಯವೇತನದಿಂದ ವಂಚಿತರಾಗಿ ತಮ್ಮ ಸಂಶೋಧನೆಯನ್ನು ಮುಂದುವರಿಸುವುದು ಕಷ್ಟವಾಗಿದೆ.

ಎಲ್ಲಾ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಶೀಷ್ಯವೇತನ ನೀಡಲು ಹಣವಿಲ್ಲವೆಂದು ಮೈಸೂರು ವಿ.ವಿ.ಯ ಆಡಳಿತ ವಗ೯ವು ತಿಳಿಸಿರುತ್ತದೆ. ರಾಜ್ಯದಲ್ಲಿ ಎಸ್.ಸಿ.ಪಿ/ ಟಿ.ಎಸ್.ಪಿ. ಯೋಜನೆಯಲ್ಲಿ ಬಳಕೆಯಾಗದ ಹಲವು ಕೋಟಿ ಹಣ ಉಳಿದಿದ್ದು, ಅದನ್ನು ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಮಂಜೂರು ಮಾಡಿಸಿಕೊಡುವ ಮೂಲಕ  ಮೈ.ವಿ.ವಿಯ ಎಸ್.ಸಿ./ ಎಸ್.ಟಿ ವಿದ್ಯಾರ್ಥಿಗಳ ಸಂಶೋಧನಾ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವ ಹಾಗೂ ಹಲವು ಸಮಸ್ಯೆಗಳ ಕುರಿತು ಸಂಶೋಧಕರ ಸಂಘ(ರಿ)ದ ವಿದ್ಯಾರ್ಥಿಗಳು ನಂಜನಗೂಡು ಮೀಸಲು ಕ್ಷೇತ್ರದ ಶಾಸಕ ‘ಬಿ.ಹರ್ಷವರ್ಧನ್’ ಅವರು ಮನವಿ ಸಲ್ಲಿಸಿದ್ದರು.

ಮೈಸೂರು ವಿ.ವಿ.ಯ ಸಂಶೋಧಕರ ಸಂಘ(ರಿ)ದ ಮನವಿಯನ್ನು ಆಧರಿಸಿ ಇಂದು ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು  ಶಾಸಕ ಬಿ.ಹರ್ಷವರ್ಧನ್ ಅವರು ಬೆಂಗಳೂರಿನ ಕಛೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕುಲಪತಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರದಲ್ಲೇ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೂ ತಾವು ಸಂಶೋಧನೆಗೆ ಪ್ರವೇಶ ಪಡೆದ (PR Copy) ದಿನದಿಂದಲೇ ಶಿಷ್ಯ ವೇತನ ನೀಡಬೇಕೆಂದು ಆಗ್ರಹಿಸಿದ್ದಾರೆ ಹಾಗೂ ಸಮಾಜಕಲ್ಯಾಣ ಇಲಾಖೆ ಯಿಂದ  ಮೈ ವಿ.ವಿ ಪರಿಶಿಷ್ಟಜಾತಿ/ಪರಿಶಿಷ್ಟಪಂಗಡ ಘಟಕಕ್ಕೆ ಅನುದಾನವನ್ನು ಕೊಡಿಸುವ ಭರವಸೆ ನೀಡಿದ್ದಾರೆ.

ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀರಾಮುಲು ಮುಂತಾದವರಿಗೂ ಮನವಿ ಸಲ್ಲಿಸಿದ್ದಾರೆ.

ಪ್ರತಿವರ್ಷ ಸುಮಾರು 360 ಕೋಟಿಗೂ ಅಧಿಕ ಬಜೆಟ್ ಮಂಡಿಸುವ ಮೈಸೂರು ವಿಶ್ವ ವಿದ್ಯಾನಿಲಯವು ಎಲ್ಲಾ ಎಸ್.ಸಿ/ ಎಸ್.ಟಿ. ಸಂಶೋಧನಾ ವಿದ್ಯಾರ್ಥಿಗಳಿಗೂ ಶಿಷ್ಯ ವೇತನ ನೀಡದೆ ನಿರ್ಲಕ್ಷಿಸುತ್ತಿರುವುದೇಕೇ? ಪರಿಶಿಷ್ಟ ವಿದ್ಯಾರ್ಥಿಗಳು ಎಂಬ ತಾತ್ಸಾರವೇ? ಎಂಬ ಪ್ರಶ್ನೆಗಳಿವೆ. ಏನೇ ಆಗಲಿ ಈ ಕುರಿತು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಪಂದಿಸಿ ಅವರ ಪರವಾಗಿ ಧ್ವನಿ ಎತ್ತಿರುವ ನಂಜನಗೂಡು ಮೀಸಲು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರು ಮಹತ್ವದ ಕೆಲಸ ನಿರ್ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.

  • – ಪ್ರಜ್ವಲ್ ಶಶಿ ತಗಡೂರು  

Leave a Reply