ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಾನ್ಸೇನ್/ತ್ಯಾಗರಾಜರು
ಮೊನ್ನೆ ಹರಿಹರ ಪ್ರಿಯಾ ಅವರಿಗೆ ಜಿಗಣಿಯಲ್ಲಿ 70ರ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು ಜಿಗಣಿ ಶಂಕರ್. ನಾವು ಸಹ ಭಾಗವಹಿಸಿದ್ದೆವು. ಆಗ ಹರಿಹರಪ್ರಿಯ ಅವರು ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯ ಜಿಗಳ ಗ್ರಾಮಕ್ಕೆ ಹೋಗಿ ಬರೋಣ ಸ್ವಾರಸ್ಯ ಇದೆ ಎಂದು ಕರೆದರು. ಅಲ್ಲಿ ಹೋಗಿ ನೋಡಿದರೆ. ಒಂದು ಅರಸರ ಕಾಲದ ಪಾಳು ಬಂಗಲೆ ಇತ್ತು. ಅದು ಮೈಸೂರು ರಾಜರಲ್ಲಿ ಎಂ ಆರ್ ಎ ಹಾಗೂ ನಂತರ ಎಂಎಲ್ಎ ಆಗಿದ್ದ ರಾಮಸ್ವಾಮಿ ರೆಡ್ಡಿ ಅವರ ಬಂಗಲೆ ಆಗಿತ್ತು.
https://youtu.be/SnI5JvyLnxI
ಕಾರಣ ಏನೆಂದರೆ, ಮೂಲ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗ್ರಾಮದವರಾದ ಭೈರವಿ ಕೆಂಪೇಗೌಡ ಎಂಬ ಅಂದಿನ ಭೈರವಿರಾಗದ ಆದ್ಯ ಸಂಗೀತಗಾರ ಮೈಸೂರು ಒಡೆಯರಿಂದ ಭೇಷ್ ಎನಿಸಿಕೊಂಡಿದ್ದವರು. ಅವರು ಎಲ್ಲೂ ನೆಲೆ ನಿಲ್ಲದೆ ಅನಾರೋಗ್ಯ ಇದ್ದಾಗ ಬೆಂಗಳೂರಿಗೆ ಬಂದು ಶ್ರೀನಿವಾಸ್ ರೆಡ್ಡಿ ಅವರ ಜೊತೆಗಿದ್ದು ಸರ್ಕಾರಿ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿಧನರಾಗಿ ಜಿಗಳ ಗ್ರಾಮದಲ್ಲಿ ಸಮಾಧಿ ಮಾಡಲಾಯಿತು. ಇದು ಅದೇ ಜಾಗವಾಗಿತ್ತು.
ಭೈರವಿ ಕೆಂಪೇಗೌಡ ತಮಿಳುನಾಡಿನ ತಿರುವಾಯೂರಿನ ಪಟ್ಟಣ ಶ್ರೀನಿವಾಸ ಅಯ್ಯರ್ ಹತ್ತಿರ ಸತತ 12 ವರ್ಷ ಅಂದರೆ ಚಾಮರಾಜೇಂದ್ರ ಒಡೆಯರ್ ಅವರು ಸ್ಕಾಲರ್ಶಿಪ್ ಕೊಟ್ಟು ಕಳುಹಿಸಿದ್ದ ಮೈಸೂರು ವಾಸುದೇವಾಚಾರ್ಯರಿಗಿಂತ ಮುಂಚೆ ಶ್ರೀಮಂತರಾದ ಕೆಂಪೇಗೌಡರು 12 ವರ್ಷ ಸಂಗೀತ ಅಭ್ಯಾಸ ಮಾಡಿ ಕರ್ನಾಟಕ ಸಂಗೀತ ಕಲಾವಿದರಾಗಿ ಹೆಸರಾದವರು.
ಇವರು ಹರಿದಾಸರ ರೀತಿ ಎಲ್ಲೂ ನೆಲೆ ನಿಲ್ಲದೆ 1937ರಲ್ಲಿ ಬೆಂಗಳೂರಿಗೆ ಬಂದವರು. ಸಂಗೀತ ವಿದ್ಯುತ್ತನ್ನು ಪಡೆದ ಇವರನ್ನು ಸಂಗೀತ ಪ್ರೇಮಿಯಾಗಿದ ರಾಮಸ್ವಾಮಿ ರೆಡ್ಡಿ ಪೋಷಿಸಿದ್ದರು. ಅನಾರೋಗ್ಯದಿಂದ ತೀರಿಕೊಂಡ ಮೇಲೆ ಜಿಗಳ ಗ್ರಾಮದಲ್ಲಿ ಮಣ್ಣುಮಾಡಲಾಗಿತ್ತು. ನಾವು ಹುಡುಕಿದಾಗ ಅವರ ಕುಟುಂಬದ ಸಮಾಧಿಗಳು ಸಿಕ್ಕವು ವಿನಃ ಅವರದೆಂದು ಹೇಳುವ ಸಮಾಧಿ ಇರಲಿಲ್ಲ. ಕರ್ನಾಟಕದ ತಾನ್ ಸೇನ್ ಅಥವಾ ತ್ಯಾಗರಾಜ, ಪಿಟೀಲು ಚೌಡಯ್ಯನವರ ಹಾಗೆ ಹೆಸರಾಗಿದ್ದ ಅಂದಿನ ಈ ಭೈರವಿ ಕೆಂಪೇಗೌಡರು ಒಕ್ಕಲಿಗ ಸಮುದಾಯದವರು. ಇಂಥವರನ್ನು ಅನಾಥವಾಗಿ ಇಲ್ಲಿ ಮಣ್ಣು ಮಾಡಿದ್ದಾರೆ. ಈ ಪುಣ್ಯಕ್ಷೇತ್ರ ನೋಡೋಣ ಎಂದು ಹರಿಹರಪ್ರಿಯ ನಾವು ಹೋಗಿದ್ದೆವು. ಅವರು ಉಳಿದಿದ್ದ ಪಾಳು ಬಂಗಲೆ ಇತ್ತು. ಅಲ್ಲಿ ಬೈರವಿ ಕೆಂಪೇಗೌಡರ ಹೆಸರಿನ ಸ್ಮಾರಕ ಮಾಡಿದರೆ ಒಳಿತು ಎಂದು ನಾವು ಅಂದುಕೊಂಡವು.
ಭೈರವಿ ಕೆಂಪೇಗೌಡರ ಕುರಿತು ಡಾ.ಎಚ್.ಎಲ್.ನಾಗೇಗೌಡ ಅವರು “ಭೂಮಿಗೆ ಬಂದ ಗಂಧರ್ವ” ಹೆಸರಿನ ಕಾದಂಬರಿಯನ್ನು ಮತ್ತು ಅದನ್ನು ಆಧರಿಸಿ ಡಾ.ಸಿ.ವೀರಣ್ಣ ಅವರು “ಗಾನಯೋಗಿ ಭೈರವಿ ಕೆಂಪೇಗೌಡ” ಹೆಸರಿನಲ್ಲಿ ನಾಟಕವನ್ನು ರಚಿಸಿದ್ದಾರೆ. ಇವರ ಕುರಿತು ಅಲ್ಲೊಂದು ಇಲ್ಲೊಂದು ಬಿಡಿ ಲೇಖನಗಳನ್ನು ಹೊರತುಪಡಿಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.
ಹೆಚ್ಚಿನ ಪ್ರಖ್ಯಾತಿ ಹೊಂದಿದ್ದವರು ಅನಾಥವಾಗಿರುವುದು ಕಲಾವಿದರು, ಸಾಹಿತಿಗಳು, ರಂಗ ಕರ್ಮಿಗಳಾಗಿರುವ ನಮಗೆ ಮನನೊಂದಿತು. ನಮ್ಮ ಜೊತೆಯಲ್ಲಿ ನಿರ್ದೇಶಕರಾದ ಹುಲಿ ಚಂದ್ರಶೇಖರಯ್ಯ, ದಲಿತ ಮುಖಂಡ ಜಿಗಣಿ ಶಂಕರ್, ರಂಗಕರ್ಮಿ ಜಿಪಿಓ ಚಂದ್ರು, ಸ್ಥಳೀಯರು ಇದ್ದರು. ಸ್ಥಳೀಯರಿಗೆ ಅವರ ಹೆಸರಿನಲ್ಲಿ ಇಲ್ಲೊಂದು ಸ್ಮಾರಕ ಅಥವಾ ಸಂಗೀತ ತರಬೇತಿ ಕಾರ್ಯಕ್ರಮಗಳು ನಡೆದರೆ ಉಚಿತವೆಂದು ತಿಳಿಸಿ ಬಂದೆವು.
– ಡಾ.ಎ.ಆರ್.ಗೋವಿಂದಸ್ವಾಮಿ, ಸಂಶೋಧಕ, ರಾಮನಗರ.




