ವಾಣಿ ಜಯರಾಂ ಅವರ ನಿಧನ ದೇಶಕ್ಕೇ ದೊಡ್ಡ ನಷ್ಟ: ಡಾ.ಮಹೇಶ ಜೋಶಿ 

3 years ago

ಬೆಂಗಳೂರು: ದೇಶ ಕಂಡ ಅಪರೂಪದ ಗಾಯಕಿ ವಾಣಿ ಜಯರಾಂ ಅವರು ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಇತ್ತೀಚಿಗೆ ತಾನೇ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಭಾರತ ಸರಕಾರ ಪ್ರಕಟಿಸಿದಾಗ ಅವರನ್ನು ಅಭಿನಂದಿಸಿದ್ದಾಗಿಯೂ ಇಷ್ಟು ಬೇಗ ಅವರ ನಿಧನ ವಾರ್ತೆ ಬರ ಬಹುದು ಎಂದು ಕನಸು ಮನಸಿನಲ್ಲೂ ಚಿಂತಿಸಿರಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಕಂಬನಿ ಮಿಡಿದಿದ್ದಾರೆ.

1945ರ ಜನವರಿ ೩೦ರಂದು ಜನಿಸಿದ್ದ ವಾಣಿ ಜಯರಾಂ ಅವರ ನಿಜವಾದ ಹೆಸರು ಕಲೈವಾಣಿ. ಅವರು ಒಂದು ರೀತಿಯಲ್ಲಿ ಬಾಲ ಪ್ರತಿಭೆ ಅನ್ನಿಸಿ ಕೊಂಡವರು. ಎರಡನೇ ವರ್ಷಕ್ಕೆ ಸಂಗೀತದತ್ತ ಆಸಕ್ತಿ. ಏಳನೇ ವಯಸ್ಸಿಗೆ ದೇಶಿಕಾಚಾರ್ ಅವರ ಕೃತಿಗಳ ಸ್ಪುಟವಾದ ಗಾಯನ, ಎಂಟನೇ ವರ್ಷಕ್ಕೆ ಆಕಾಶ ವಾಣಿಯಲ್ಲಿ ಕಾರ್ಯಕ್ರಮ. ಹತ್ತನೇ ವಯಸ್ಸಿಗೆ ಮೂರು ಗಂಟೆಗಳ ಸಂಗೀತ ಕಚೇರಿ. ಹೀಗೆ ಅವರ ಬಾಲ್ಯದ ಸಾಧನೆಗಳ ಪಟ್ಟಿ ಕೂಡ ದೊಡ್ಡದು ಎಂದಿದ್ದಾರೆ.

ವಾಣಿ ಜಯರಾಂ ಕಡಲೂರು ಶ್ರೀನಿವಾಸ ಅಯ್ಯಂಗಾರ್, ಟಿ.ಆರ್.ಬಾಲಸುಬ್ರಹ್ಮಣ್ಯಂ, ಆರ್,ಎನ್.ಮಣಿ ಅವರಿಂದ ಕರ್ನಾಟಕಿ ಸಂಗೀತದಲ್ಲಿ ಪರಿಣತಿ ಪಡೆದರು. ಓದಿನಲ್ಲಿ ಕೂಡ ಮುಂದಿದ್ದ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಆದರು. 1969ರಲ್ಲಿ ಜಯರಾಂ ಅವರನ್ನು ವಿವಾಹ ಆಗಿದ್ದು ಅವರ ಜೀವನದ ದೊಡ್ಡ ತಿರುವು. ಸ್ವತ: ಸಿತಾರ್ ವಾದಕರಾದ ಜಯರಾಂ ಪತ್ನಿಯ ಪ್ರತಿಭೆಗೆ ಬೆಂಬಲವಾಗಿ ನಿಂತರು ಎಂದಿದ್ದಾರೆ.

ಉನ್ನತ ಹುದ್ದೆಯಲ್ಲಿ ಇದ್ದ ಪತಿಯ ಜೊತೆ ಸೇರುವ ಸಲುವಾಗಿ ವಾಣಿ ಮುಂಬೈಗೆ ವರ್ಗಾವಣೆ ಪಡೆದುಕೊಂಡರು. ಇದು ಅವರ ಜೀವನದ ಇನ್ನೊಂದು ತಿರುವಿಗೆ ಕಾರಣ ಆಯಿತು. ಇಲ್ಲಿ ಅವರು ‘ಪಾಟಿಯಾಲ ಘರಾಣ’ದ ಸಾಧಕ ಉಸ್ತಾದ್ ಅಬ್ದುಲ್ಲ ರೆಹಮಾನ್ ಖಾನ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿತರು. ಈ ಸಂದರ್ಭದಲ್ಲಿಯೇ ಅವರಿಗೆ ವಸಂತ ದೇಸಾಯಿ ಅವರ ಪರಿಚಯ ಆಗಿದ್ದು. ಅವರ ಮೂಲಕ ಕುಮಾರ ಗಂಧರ್ವ ಅವರ ಜೊತೆಗಿನ ‘ಋಣಾನುಬಂಧಚ’ ಆಲ್ಭಂ ಹೊರಗೆ ಬಂದಿತು. ಇದು ಅವರಿಗೆ ಖ್ಯಾತಿಯನ್ನು ತಂದಿತು ಎಂದಿದ್ದಾರೆ.

ಚಿತ್ರಗೀತೆಗಳ ಕುರಿತು ಎಂದಿಗೂ ಆಸಕ್ತರಾಗದ ವಾಣಿ ಜಯರಾಂ ಪಂಡಿತ್ ರವಿಶಂಕರ್ ಅವರು ಸಂಗೀತ ನೀಡಿದ್ದಾರೆ ಎನ್ನುವ ಕಾರಣಕ್ಕೆ ‘ಮೀರಾ’ ಚಿತ್ರಕ್ಕೆ ಹಾಡಿದರು. ಇದರ ಗೀತೆಗಳು ಜನಪ್ರಿಯತೆಯನ್ನು ಪಡೆದವು. ‘ಗುಡ್ಡಿ’ ಚಿತ್ರದ ‘ಬೋಲಾರೆ ಪಾಪಿಹರ’ ಗೀತೆ ಅವರನ್ನು ದೇಶದೆಲ್ಲಡೆ ಜನಪ್ರಿಯಗೊಳಿಸಿತು. ಅಲ್ಲಿಂದ ಮುಂದೆ ವಾಣಿ ಜಯರಾಂ ಅವರ ಕಂಠಸಿರಿ ಎಂಟು ಭಾಷೆಗಳ ಚಿತ್ರಗೀತೆಗಳಿಗೂ ಸಿಕ್ಕಿತು ಎಂದು ಅವರು ಸ್ಮರಿಸಿದ್ದಾರೆ

ಕನ್ನಡಕ್ಕೆ ವಾಣಿ ಜಯರಾಂ ಅವರನ್ನು ಕರೆ ತಂದಿದ್ದು ಆರ್.ಎನ್.ಜಯಗೋಪಾಲ್ ಅವರ ನಿರ್ದೇಶನದ ‘ಕೆಸರಿನ ಕಮಲ’ ಚಿತ್ರದಲ್ಲಿ ಅವರು ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಮೊದಲು ಹಾಡಿದರು. ‘ನಗು ನೀ ನಗು’ ಎಂಬ ಈ ಚಿತ್ರದ ಗೀತೆ ವಿಶಿಷ್ಟವಾಗಿ ಮೂಡಿ ಬಂದಿತ್ತು. ವಾಣಿ ಜಯರಾಂ ಕನ್ನಡದಲ್ಲಿ ಹಾಡಿರುವ ಕೆಲವು ಗೀತೆಗಳು ಅವರ ಗಾಯನದ ವಿಸ್ತಾರಕ್ಕೆ ಸಾಕ್ಷಿಯಾಗಿವೆ. ಸವಿ ನೆನಪುಗಳು ಬೇಕು (ಅಪರಿಚಿತ) ದಾರಿ ಕಾಣದಾಗಿದೆ ರಾಘವೇಂದ್ರನೆ (ದೀಪಾ) ಹೋದೆಯಾ ದೂರ ಓ ಜೊತೆಗಾರ (ಅನುಭವ) ಮುತ್ತು ಮಳೆಗಾಗಿ (ಬೆಳುವಲದ ಮಡಿಲಲ್ಲಿ) ಹ್ಯಾಪಿಯಸ್ಟ್ ಮೂಮೆಂಟ್ (ಬಿಳಿ ಹೆಂಡ್ತಿ) ಒಂದೊಂದೂ ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿತ್ತು ಎಂದು ನಾಡೋಜ.ಡಾ.ಮಹೇಶ ಜೋಶಿ ಬಣ್ಣಿಸಿದ್ದಾರೆ.
ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಅಪೂರ್ವ ರಾಗಂಗಳ್(1975), ಶಂಕರಾಭರಣಂ(1980) ಸ್ವಾತಿ ಕಿರಣಂ(1991) ಪಡೆದಿರುವ ವಾಣಿ ಜಯರಾಂ ಚಿತ್ರರಂಗದಲ್ಲಿ ಇದ್ದರೂ ಅದರ ಆಕರ್ಷಣೆಗೆ ಒಳಗಾಗಲಿಲ್ಲ. ಶಾಸ್ತ್ರೀಯ ಸಂಗೀತದ ಸಾಧನೆ ಕೈ ಬಿಡಲಿಲ್ಲ ಎಂದಿರುವ ನಾಡೋಜ.ಡಾ.ಮಹೇಶ ಜೋಶಿಯವರು ವಾಣಿ ಜಯರಾಂ ಅವರ ಜೊತೆಗೆ ತಮಗಿದ್ದ ನಿಕಟ ಒಡನಾಟವನ್ನು ನೆನೆದು ಸಂಗೀತದ ಚಿಕಿತ್ಸೆ ಕುರಿತು ಅವರಿಗೆ ವಿಶ್ವಾಸ ಇದಕ್ಕಾಗಿ ಅನೇಕ ಪ್ರಯೋಗಗಳನ್ನೂ ಮಾಡಿದ್ದನ್ನು ಸ್ಮರಿಸಿ ಅದಕ್ಕಾಗಿ ವಾಣಿ ಜಯರಾಂ ಚೆನ್ನೈನಲ್ಲಿ ಇದಕ್ಕಾಗಿ ಸಂಶೋಧನಾ ಕೇಂದ್ರವನ್ನೇ ಕಟ್ಟಿದ್ದರು ಕ್ಯಾನ್ಸರ್ ರೋಗಿಗಳ ಕೊನೆದಿನಗಳಲ್ಲಿ ಸಂಗೀತದ ಮೂಲಕ ಅವರ ನೋವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದರು ಸಂಗೀತ ಸೇವೆಯಷ್ಟೇ ಅವರ ಸಾಮಾಜಿಕ ಕಳಕಳಿ ಕೂಡ ಮುಖ್ಯ ಎಂದಿದ್ದಾರೆ.

ವಾಣಿ ಜಯರಾಂ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಪಾರ ಶೋಕವನ್ನು ವ್ಯಕ್ತ ಪಡಿಸುತ್ತದೆ ಎಂದಿರುವ ಅವರು ದೇಶ ಅವರ ಸಂಗೀತದ ಕೊಡುಗೆಗಳನ್ನು ಸದಾ ಸ್ಮರಿಸುತ್ತದೆ, ಅವರ ನೆನಪುಗಳನ್ನು ಉಳಿಸುವ ಸಾರ್ಥಕ ಕೆಲಸಗಳಾಗ ಬೇಕು ಎಂದಿದ್ದಾರೆ.

Leave a Reply