ಮಿ.ರಾಷ್ಟ್ರವಾದಿ ಪತ್ರಕರ್ತೆ ನಿಮ್ಮ ಪ್ರಿಯ ನರೇಂದ್ರ ಮೋದಿ ಆಡಳಿತದ ಬಗ್ಗೆ ಕೆಲ ಪ್ರಶ್ನೆಗಳಿಗೆ ಪತ್ರಕರ್ತೆಯಾಗಿ ಅಲ್ಲ, ಒಬ್ಬ ಮನುಷ್ಯರಾಗಿ ಉತ್ತರಿಸುವಿರಾ?
ಮಾನ್ಯರೇ, ಲಕ್ಷ್ಮಿ ಎಂಬ ಈ ರಾಷ್ಟ್ರವಾದಿ ಬಿರುದಾಂಕಿತ ಪತ್ರಕರ್ತೆ ಬಗ್ಗೆ ಕೆಲವು ಮಾತು.
ಇವರು ನಿನ್ನೆ TV-5 ಆ್ಯಂಕರ್ ಕೆಲಸ ಬಿಟ್ಟು ಬಂದಿದ್ದರ ಬಗ್ಗೆ ಈ ಪೋಸ್ಟ್ ಬರೆಯುತ್ತಿಲ್ಲ. ರಾಷ್ಟ್ರವಾದಿ ಪತ್ರಕರ್ತೆ ಎಂದು ಭಕ್ತರಿಂದ ಹೊಗಳಿಕೆ ಪಡೆಯುತ್ತಿರುವುದಕ್ಕೂ ಇದಲ್ಲ, ಒಬ್ಬ ಪತ್ರಕರ್ತೆ ಎಂದೂ ಅಲ್ಲ. ಆದರೆ ಆ ಹೆಸರಿನಲ್ಲಿ ತನ್ನೊಳಗೆ ತುಂಬಿಕೊಂಡಿರುವ ಸಾಮಾಜಿಕ ಅಜ್ಞಾನ, ರಾಜಕೀಯ ದಡ್ಡತನ ಮತ್ತು ಅವಿವೇಕದ ಬಗ್ಗೆ ಬರೆಯುತ್ತಿದ್ದೇನೆ. ಷೇರ್ ಮಾಡಿ ತಲುಪಿಸಿ…
ಮೊದಲಿಗೆ ಮಿ. ರಾಷ್ಟ್ರವಾದಿ ಪತ್ರಕರ್ತೆಯವರೇ “ಏನೂ ಆಧಾರಗಳಿಲ್ಲದೆ ದೇಶದ ಪ್ರಧಾನಿಯನ್ನು ಸುಮ್ಮನೆ ಟೀಕಿಸುವುದು ಸರಿಯಲ್ಲ ಎನಿಸಿ ಕೆಲಸ ಬಿಟ್ಡು ಬಂದೆ” ಎಂಬುದರಿಂದಲೇ ನಿಮಗೆ ಪತ್ರಿಕಾ ಧರ್ಮದ ABCD ಇರಲಿ, ಸಾಮಾನ್ಯ ಜ್ಞಾನದ ಕಿಂಚಿತ್ ಅರಿವೇ ಇಲ್ಲ ಎಂದು ಅನ್ನಿಸ್ತಿದೆ. ಇಲ್ಲದಿದ್ದರೆ ನೀವು ಒಳಗೆ ಈ ಸರ್ಕಾರ ಮತ್ತು ಮೋದಿ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ ಹೊಂದಿದ್ದೀರಿ ಎಂದು ಯಾರಿಗೇನು ತಿಳಿಯದೆ ಇರದು
ನಿಮ್ಮ ಈ ದೂರಿಗೆ ಪ್ರಾಮಾಣಿಕವಾಗಿ ಉತ್ತರಿಸಬೇಕು ಎನಿಸಿ ಈ ಪ್ರತಿಕ್ರಿಯೆಯೇ ಹೊರತು ನೀವ ದೊಡ್ಡ ಪತ್ರಕರ್ತೆ ಎಂದಲ್ಲ.
ಮೊಟ್ಟ ಮೊದಲಿಗೆ ಪ್ರಧಾನಿಯನ್ನ ಪ್ರಶ್ನಿಸಬಾರದು ಎಂದು ಹೇಳಲು ದೇಶವೇನು ರಾಜಾಳ್ವಿಕೆಯಲ್ಲಿ ನಡೆಯುತ್ತಿದೆಯೇ. ಮಿ.ರಾಷ್ಟ್ರವಾದಿ ಪತ್ರಕರ್ತೆಯವರೇ? ಮೋದಿವರೇನು ಚಕ್ರಾಧಿಪತಿಯೇ ಪ್ರಶ್ನಿಸಬಾರದು ಎನ್ನಲು ಮಿ.ರಾಷ್ಟ್ರವಾದಿ ಪತ್ರಕರ್ತೆಯವರೇ?
ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಇದೆ. ಅದರ ಆಧಾರದಲ್ಲಿ ಜನರು ಜನಪ್ರತಿನಿಧಿಗಳನ್ನು ಆರಿಸಿ ಕಳಿಸಿದ್ದಾರೆ. ಅವರು ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಶ್ನಿಸಲು, ವಿರೋಧಿಸಲು, ಪ್ರತಿಭಟಿಸಲು ಕೊನೆಗೆ ಮನೆಗೆ ಕಳಿಸಲು ಸಂವಿಧಾನವೇ ಪ್ರಜಾ ಪ್ರಭುವಾದ ಮತದಾರನಿಗೆ ಹಕ್ಕು ನೀಡಿದೆ. ಇದು ನಿಮಗೆ ತಿಳಿಯದೇ ಮಿ. ರಾಷ್ಟ್ರವಾದಿ ಪತ್ರಕರ್ತೆ?
ಕಳೆದ ಏಳು ವರ್ಷದಿಂದ ಜನ ಬಿಜೆಪಿ ಮತ್ತು ಮೋದಿಯವರ ದುರಾಡಳಿತದಿಂದ ಎಷ್ಟೆಲ್ಲ ಕಷ್ಟ ಅನುಭವಿಸಿದರೂ ನಿಮ್ಮ ಗಮನಕ್ಕೇ ಬಂದಿಲ್ಲವೇ!?
ಸದ್ಯ ಎದುರಿಸುತ್ತಿರುವ ಕೋರೊನಾ ಬಿಕ್ಕಟ್ಟನ್ನಾದರೂ ಮೋದಿ ಮತ್ತು ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಂಡು ನಿಮ್ಮ ಸರ್ಕಾರ ಎದುರಿಸಿದೆಯೇ?
ಪವಿತ್ರ ಗಂಗಾನದಿ ಬಯಲು ಇದಕ್ಕೆ ದೊಡ್ಡ ಉದಾಹರಣೆ. ಹೆಣಗಳ ಜಾತ್ರೆ ಅಲ್ಲಿ ನಡೀತಿದೆ. ನಿಮ್ಮ ಸರ್ಕಾರದ ಗಂಗಾ ಶುದ್ದೀಕರಣ ಅಂದರೆ ಇದೇನಾ ಮಿ.ರಾಷ್ಟ್ರವಾದಿ ಪತ್ರಕರ್ತೆ?
ದೇಶದ ಜನತೆಯ ವಿಚಾರ ಬಿಡಿ, ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ಬಂದು ತಮ್ಮ ತಂದೆ, ತಾಯಿ, ಪ್ರಿಯರನ್ನ ಆಮ್ಲಜನಕ, ಹಾಸಿಗೆ ವೆಂಟಿಲೇಟರ್‌ಗಳಿಲ್ಲದೆ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಳಲು ತೋಡಿಕೊಂಡರು, ಪ್ರಶ್ನಿಸಿದರು, ಕಣ್ಣೀರು ಹಾಕಿದರು, ಇನ್ನೂ ಪ್ರಶ್ನಿಸ್ತಿದ್ದಾರೆ, ಇದೆಲ್ಲ ಸುಳ್ಳೆ?
ಯಾಕೆ ನಿಮ್ಮ ಸರ್ಕಾರ ಹೀಗೆ ಮಾಡಿತು. ಏಕೆ ಹೀಗಾಯಿತು, ಚುನಾವಣೆ ಗೆಲ್ಲುವ ಉಮೇದು, ಕುಂಭಮೇಳದ ಉಮೇದು, ಇಮೇಜು ಉಳಿಸಿಕೊಳ್ಳುವ ಉಮೇದಲ್ಲದೆ ಬೇರೆ ಏನು ಎಂದು ತಿಳಿಸುವಿರಾ ಮಿ.ರಾಷ್ಟ್ರವಾದಿ ಪತ್ರಕರ್ತೆ?
ವಾಸ್ತವವಾಗಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಕರೋನಾದಿಂದ ಸತ್ತವರು 6 ಲಕ್ಷ ಮಂದಿ. ಸೋಂಕಿತರು 16 ಕೋಟಿಗೂ ಹೆಚ್ಚು. ಇದು ಕನಿಷ್ಠ ಲೆಕ್ಕಾಚಾರ. ಹೀಗೆ ದಯನೀಯವಾಗಿ ಸತ್ತವರ ಜೀವಕ್ಕೆ ಬೆಲೆ ಇಲ್ಲವೇ?
ಮೋದಿ ಮತ್ತು ಬಿಜೆಪಿಯವರಂತೆ ನಿಮಗೂ ಜನರ ಪ್ರಾಣ ತೃಣ ಸಮಾನ ಅನ್ನಿಸ್ತಾ ಇದೆಯಾ ಮಿ.ರಾಷ್ಟ್ರವಾದಿ ಪತ್ರಕರ್ತೆ?
ಕೋರ್ಟ್‌ಗಳು ಈ ಸರ್ಕಾರಕ್ಕೆ ಕೊಟ್ಟ ಮತ್ತು ಈಗಲೂ ಕೊಡುತ್ತಿರುವ ತಪರಾಕಿ ಏನು ಗೊತ್ತಾ? ನಿಮಗೆ ಜನರ ಜೀವಕ್ಕಿಂತ ಚುನಾವಣೆ, ರ್ಯಾಲಿ, ಅಧಿಕಾರ ಮುಖ್ಯವೇ ಎಂದಿವೆ. ನ್ಯಾಯಾಂಗದ ಬಗ್ಗೆ ತಮಗೆ ನಂಬಿಕೆ ಇದೆಯೇ ಮಿ.ರಾಷ್ಟ್ರವಾದಿ ಪತ್ರಕರ್ತೆ?
ಕಳೆದ 7 ವರ್ಷಗಳಿಂದ ಇಂಧನ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.70ರಷ್ಟು ಕುಸಿದಾಗ ಅದರ ಅನುಕೂಲವನ್ನ ಜನರಿಗೆ ನೀಡದೆ ತೆರಿಗೆ ಮೇಲೆ ತೆರಿಗೆ ಹೇರಿದ್ರಲ್ಲ ಇದು ಯಾರು ಮಾಡಿದ್ದು ತಾಯಿ. ನಿಮ್ಮ ಮೋದಿ ನೇತೃತ್ವದ ಕೇಂದ್ರ ಸರ್ಕಾರವೋ ಅಥವಾ ಯಾವುದಾದರೂ ಪರ ದೇಶವೋ?
ಇವುಗಳಿಂದ ಕೇಂದ್ರಕ್ಕೆ ಬಂದ ಲಾಭ ಸರ್ಕಾರವೇ ನೀಡಿದ ಮಾಹಿತಿಯಂತೆ 11 ಲಕ್ಷ ಕೋಟಿ ರೂಪಾಯಿ. ಏನಾಯಿತು ಇಷ್ಟೊಂದು ಹಣ ಮಿ.ರಾಷ್ಟ್ರವಾದಿ ಪತ್ರಕರ್ತೆ? ಅಲ್ಲದೆ RBIನಲ್ಲಿದ್ದ 1.5ಲಕ್ಷ ಕೋಟಿ ಉಡಾಯಿಸಲಾಯಿತು.
ಮೋದಿ ಸರ್ಕಾರ ತಾವು ಬಂದ ಮೇಲೆ ಮಾಡಿರುವ ಸಾಲವೇ ಕಳೆದ 60 ವರ್ಷಗಳಲ್ಲಿ ದೇಶದ ಮಾಡಿದ್ದ ಸಾಲಕ್ಕಿಂತ ದುಪ್ಪಟ್ಟು, ಮೂರ್ಪಟ್ಟು? ಯಾರಿಗಾಗಿ ಸಾಲ ಮಾಡಿದರು ತಾಯಿ. ಯಾರಿಗೆ ಕೊಟ್ಟರು..!!?
ಗಾಂಧೀಜಿ ಬ್ರಿಟೀಷರು ಉಪ್ಪಿನ ಮೇಲೆ ಕರ ಹೇರಿದ್ದನ್ನ ವಿರೋಧಿಸಿ ದಂಡಿಯಾತ್ರೆ ಮಾಡಿದ್ರು. ಕರ ವಿರೋಧಿಸಿ ಸಬರಮತಿ ತೀರದಲ್ಲಿ ಹಿಡಿಯಲ್ಲಿ ಉಪ್ಪು ಹಿಡಿದು ಜನರಿಗೆ ನೀಡಿದರು. ಬ್ರಿಟೀಷರ ತೆರಿಗೆ ನೀತಿ ಉಲ್ಲಂಘಿಸಿದರು. ಇದು ಸ್ವಾತಂತ್ರ ಪೂರ್ವದ ಇತಿಹಾಸ.
ಅದರೆ ಅದೇ ಗುಜರಾತ್‌ನಿಂದ ಬಂದ ಮೋದಿಯವರು ರಾತ್ರಿ ಸಂಸತ್ ನಡೆಸಿ, ಹಬ್ಬ ಮಾಡಿ GST ಜಾರಿಗೊಳಿಸಿ ಜನರ ಮೇಲೆ ಶೇ. 28 ತೆರಿಗೆ ಹೇರಿದರು ಗೊತ್ತೇ? ಇದು ಬ್ರಿಟೀಷ್ ಸರ್ಕಾರ ಹೇರಿದ್ದಲ್ಲ, ನಮ್ಮ ಸರ್ಕಾರ, ನಾವೇ ಆಯ್ಕೆ ಮಾಡಿದ ಸರ್ಕಾರ, ಸ್ವತಃ ತನ್ನದೇ ಪ್ರಜೆಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಿದ್ದನ್ನ ಹೇಗೆ ಸಮರ್ಥಿಸುತ್ತೀರಿ ಮಿ.ರಾಷ್ಟ್ರವಾದಿ ಪತ್ರಕರ್ತೆ?
ನೋಟು ನಿಷೇಧ ಯಶಸ್ವಿ ಆಯ್ತೇ..?
ಎಷ್ಟು ಲಕ್ಷ ಕೋಟಿ ಕಪ್ಪು ಹಣ ಸಿಕ್ತು.
ಕನಿಷ್ಠ 250 ಜನ ಕ್ಯೂ ನಿಂತಲ್ಲೇ ಎದೆ ಹಿಡಿದುಕೊಂಡು ಸತ್ತರು. ಇದರಲ್ಲಿ ನಿವೃತ್ತ ಸೈನಿಕರು, ಬಡ ರೈತರು, ರೋಗ ಪೀಡಿತರು, ತಾಯಂದಿರು, ಸಂದ್ಯಾ ಕಾಲದಲ್ಲಿದ್ದ ವೃದ್ಧರೂ ಇದ್ದರು. ಈ ಸಾವು ಸಾವಲ್ಲವೇ, ಇದು ನಿಮ್ಮ ಮೋದಿ ತೆಗೆದುಕೊಂಡ ದುಡುಕಿನ ನಿರ್ಧಾರದಿಂದ ಆಗಿದ್ದಲ್ಲವೇ ಮಿ.ರಾಷ್ಟ್ರವಾದಿ ಪತ್ರಕರ್ತೆ..?
ಹೀಗೆ ಕ್ಯೂ ನಿಂತು ಸತ್ತವರಲ್ಲಿ ಎಷ್ಟು ಜನ IAS, IPS, ministers, MLAಗಳು ಇದ್ದರು ಹೇಳುವಿರಾ? ಮೋದಿ, ಶಾ ಕೂಡ ಕ್ಯೂ ನಿಂತಿದ್ದರೇ? ಎಷ್ಟು ಜನ ತಮ್ಮ ಹಣ ತಾವು ತೆಗೆದುಕೊಳ್ಳಲು ಕ್ಯೂ ನಿಂತಿದಲ್ಲೇ ಅಸುನೀಗಿದರು ಗೊತ್ತೇ..? ಅವರ ಬಗ್ಗೆ ನೀವು ಎಂದಾದರೂ ಮಾತನಾಡಿದ್ರಾ?
ಪಾರ್ಶ್ವವಾಯು ಪೀಡಿತ ರೋಗಿಯೊಬ್ಬರು ಚಿಕಿತ್ಸೆಗಾಗಿ ಬ್ಯಾಂಕ್‌ಗೆ ಹಣ ಪಡೆಯಲು ತನ್ನ ಪತ್ನಿಯ ತೋಳ ಆಸರೆಯಲ್ಲಿ ಬಂದು ಬರೋಬ್ಬರಿ ಎರಡು ಗಂಟೆ ಕಾಲ ಬ್ಯಾಂಕ್ ಹೊರಗೆ ಕ್ಯು ನಿಂತು ತಮ್ಮ ಹಣ ತಾವು ಪಡೆಯಲಾಗದೆ ಕಣ್ಣೀರು ಸುರಿಸಿದರು, ಎದೆ ಬಡಿದುಕೊಂಡು ಅತ್ತರು. ಇದು ತಪ್ಪು ಅನಿಸಲಿಲ್ಲವೇ ನಿಮಗೇ?
ಬುಕ್ ಆಗಿದ್ದ ನೂರಾರು ಮದುವೆಗಳು ಕ್ಯಾನ್ಸಲ್ ಆದವು. ಇದರಿಂದಾಗಿ ಇದನ್ನೇ ನಂಬಿಕೊಂಡು ಬದುಕುವ ಬಡ ಕಾರ್ಮಿಕರು ಈಗಿನಂತೆ ಆಗಲೂ ಕೆಲಸ ಕಳೆದುಕೊಂಡರು, ಮೋದಿ ಸರ್ಕಾರ ಈಗಿನಂತೆ ಆಗಲೂ ನೀಡಿದ್ದು ಕೇವಲ ಭರವಸೆ. 50 ದಿನಗಳಲ್ಲಿ ಸರಿ ಹೋಗದಿದ್ದರೆ ನೇಣ ಹಾಕಿ ಎಂಬ ಭರವಸೆ. ಕೊನೆಗೆ ಬಡತನದಿಂದ ನೇಣ ಹಾಕಿಕೊಂಡವರು ಬಡ ಜನರು. ಇದು ಗೊತ್ತೆ ಮಿ.ರಾಷ್ಟ್ರವಾದಿ ಪತ್ರಕರ್ತೆ?
ಇವರೆಲ್ಲಾ ಸರ್ಕಾರದಿಂದ ಸಾಲ ಕೇಳಿರಲಿಲ್ಲ, ಸಹಾಯಧನ ಕೇಳಿರಲಿಲ್ಲ. ಪ್ಯಾಕೇಜ್ ಕೇಳಿರಲಿಲ್ಲ. ಬದಲು ತಮ್ಮ ಹಣ, ತಾವು ಬೆವರು ಸುರಿಸಿ ಸಂಪಾದಿಸಿದ ಹಣ ನಮಗೆ ಕೊಡಿ ಎಂದು ಕೇಳಿದರು ಅಷ್ಟೆ. ಈ ಬಗ್ಗೆ ಮಹಾನ್ ಪತ್ರಕರ್ತೆಯಾದ ನಿಮಗೆ ಗೊತ್ತೇ?
ಪತ್ರಕರ್ತೆಯಾಗಿ ಬೇಡ, ಮನುಷ್ಯತ್ವ ಇರುವ ಮನುಷ್ಯಳಾಗಿ ಇದು ಸರಿ ಅನ್ನಿಸುತ್ತದೆಯೇ ನಿಮಗೆ?
ನೋಟು ನಿಷೇಧದಿಂದಾಗಿ ವ್ಯವಹಾರ ಮಾಡಲಾಗದೆ ಸಾವಿರ ಸಾವಿರ ಕೋಟಿ ಆರ್ಡರ್‌ಗಳು ರಾತ್ರೋರಾತ್ರಿ ಕ್ಯಾನ್ಸಲ್ ಆದವು. ಉದಾಹರಣೆಗೆ ಅಗತ್ಯ ವಸ್ತು ಪೂರೈಸುವ ಖಾಸಗಿ ಕಂಪನಿಗಳ ಸಾವಿರಾರು ಕೋಟಿ ರೂಪಾಯಿ ಆರ್ಡರ್‌ಗಳನ್ನು ರಕ್ಷಣಾ ಇಲಾಖೆ ಒಂದೇ ಒಂದು ಮೇಲ್‌ನಲ್ಲಿ ಕ್ಯಾನ್ಸಲ್ ಮಾಡಿತು. ಇದರಿಂದ ಆ ವ್ಯವಹಾರವಷ್ಟೇ ಕ್ಯಾನ್ಸಲ್ ಅಗಲಿಲ್ಲ, ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಮಂದಿ ಕೆಲಸಗಳಿಲ್ಲದೆ ಮನೆಯಲ್ಲಿ ಕೂರಬೇಕಾಯಿತು. ಉದ್ಯೋದ ಅಗತ್ಯ ಎಷ್ಡು ಎಂಬುದು ನಿಮಗೆ ಗೊತ್ತು. ಹೇಳಿ ಇದು ಸರಿಯೇ?
ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯೂ ಆಗಿದ್ದ ಮೋದಿಯವರು 2014ರಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. 7 ವರ್ಷದಲ್ಲಿ ಒಟ್ಟಾರೆ 14 ಕೋಟಿ ಉದ್ಯೋಗ ನೀಡಬೇಕಿತ್ತು, ಕೊಟ್ಟರೇ? ಅಥವಾ ಹಿಂದಿನವರು ನೀಡಿದ್ದ 14 ಕೋಟಿ ಉದ್ಯೋಗ ನಷ್ಟ ಮಾಡಿದರೇ?
ಕೊರೋನಾ ಬರುವುದಕ್ಕೆ ಮೊದಲೇ ವಾಹನ ಮಾರಾಟ, ರಿಯಲ್ ಎಸ್ಟೇಟ್, ಯಂತ್ರೋದ್ಯಮಗಳ ವ್ಯಾಪಾರ, ಖರೀದಿ ಕುಸಿದು ದೇಶ 45 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಆರ್ಥಿಕ ಸಮೀಕ್ಷಾ ಸಂಸ್ಥೆಗಳು ಹೇಳಿದವು. 5 ರೂಪಾಯಿ ಪಾರ್ಲೆಜಿ ಬಿಸ್ಕೆಟ್ ಖರೀದಿಸಲು ಜನರು ಹಿಂದೆ ಮುಂದೆ ನೊಡುತ್ತಿದ್ದಾರೆ, ಅರ್ಥಾತ್ ಖರೀದ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಈ ಕಾರ್ಖಾನೆಗಳೇ ಹೇಳಿದ್ವು.
ಆದರೆ ಮೋದಿಜಿ ಮತ್ತು ಅವರ ತಂಡ ಇದರ ಬಗ್ಗೆ ಗಮನ ಹರಿಸಲೇ ಇಲ್ಲ, ವಿಮಾನದಲ್ಲಿ ಹಾರಾಡುವುದು ಕಡಿಮೆ ಆಯಿತೇ?
ಕೊರೋನಾವನ್ನು ದೇಶಕ್ಕೆ ರತ್ನಗಂಬಳಿ ಹಾಕಿ ಸ್ವಾಗತಿಸಲಾಯಿತು. ತಮ್ಮ ಎಲ್ಲ ವೈಫಲ್ಯಗಳನ್ನು ಅದರ ಮೇಲೆ ಹೇರಿಬಿಡಲು ಯೋಜಿಸಲಾಯಿತು. ಹಾಗೇ ಮಾಡಲಾಯಿತೂ ಕೂಡ. ಆದರೆ ಈಗ ಕರೋನಾ ಹೋಗುತ್ತಿಲ್ಲ. ಎಲ್ಲವೂ ತನ್ನ ಕೈಯಲ್ಲೇ ಇರಬೇಕು ಎನ್ನುವ ಮೋದಿ, ಶಾ ಅವರ ನೀತಿಗಳು ಮಕಾಡೆ ಮಲಗಿವೆ. ಇದರಿಂದ ವಿಚಲಿತಗೊಂಡು ಈಗ ವಿಪಕ್ಷಗಳ ಮೇಲೆ ದೂರು ಹೇಳಿ ಪಲಾಯನ ಮಾಡುವುದು ಸರಿಯೇ? ವಿಪಕ್ಷಗಳು ಹಾಗೆ ಮಾಡಿದ್ದರೂ ಒಂದು ಜವಾಬ್ದಾರಿ ಇರುವ ಸರ್ಕಾರ, ಪೂರ್ಣ ಬಹುಮತ, 56 ಇಂಚಿನ ಎದೆಗಾರಿಕೆ ಇರುವ ಸರ್ಕಾರ ಹೀಗೆ ಲಜ್ಜೆಗೇಡಿತನದ ಪಲಾಯನ ಮಾರ್ಗ ಹಿಡಿಯೋದು ಸರಿಯೇ?
ದೇಶದ ಶಾಂತಿ, ಸುವ್ಯವಸ್ಥೆ, ಸಾಂವಿಧಾನಿಕ ಸಂಸ್ಥೆಗಳ ಗತಿ ಏನಾಗಿದೆ ಗೊತ್ತಾ?
ಮಾರುಕಟ್ಡೆಯಲ್ಲಿ ತರಕಾರಿ ಬಿಕರಿ ಮಾಡುವುದಕ್ಕಿಂತಲೂ ಅಗ್ಗವಾಗಿ ಬಿಕರಿ ಆಗಿಬಿಟ್ಡಿವೆ. ಸಿಬಿಐ, ಸಿಇಸಿ, ಇಡಿ, ಇಸಿ ಯಾವೊಂದು ಸಂಸ್ಥೆಯೂ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಇಲ್ಲವಾಗಿದೆ. ಬದಲು ಇವನ್ನು ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯುವ ಅಸ್ತ್ರವಾಗಿ ಬಳಸಲಾಗುತ್ತಿದೆ.
ದಲಿತರು, ಅಲ್ಪಸಂಖ್ಯಾತರು, ಮಸೀದಿ, ಚರ್ಚ್‌ಗಳ ಮೇಲೆ ನಡೆದ ದಾಳಿಗಳೆಷ್ಟು. ನಾಯಿ ನರಿಗಳಂತೆ ಜನರನ್ನು ಹೊಡೆದು ಕೊಲ್ಲಲಾಯಿತು. ಮಾತು ಮಾತಿಗೆ ಟ್ವೀಟ್ ಮಾಡುವ, ಪ್ರತಿ ತಿಂಗಳೂ ಮನ್ ಕಿ ಬಾತ್ ಹಂಚಿಕೊಳ್ಳುವ ನಿಮ್ಮ ನೆಚ್ಚಿನ ಪ್ರಧಾನಿಯವರು ಕನಿಷ್ಠ ಒಂದು ಪತ್ರಿಕಾಗೋಷ್ಠಿ ಮಾಡಿ ಈ ಬಗ್ಗೆ ದೇಶದ ಜನರಿಗೆ ನೇರವಾಗಿ, ಹೇಗಿದ್ದೀರಿ? ಸತ್ತಿದ್ದೀರಾ? ಬದುಕಿದ್ದೀರಾ ಎಂದು ಕೇಳಿದರೇ? ಮಾತನಾಡಿದರೇ? ಅದನ್ನಾದರೂ ಮಾಡಬಹುದಿತ್ತಲ್ಲವೇ? ಏಕಮುಖವಾಗಿ ಭಾಷಣ ನಾಯಕ ನಾಯಕನೇ? ಉತ್ತಮ ನಾಯಕನ ಲಕ್ಷಣವೇ ಇದು? ಇದು ನಿಮಗೆ ಮಾದರಿಯೇ?
ದೇಶದ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಿಸಲು ಮನಮೋಹನ್ ಸಿಂಗ್ ಪ್ರಾಧಾನ್ಯತೆ ನೀಡಿದರು. ಉದಾರೀಕರಣ ನೀತಿ ತಂದರು. ಖಾಸಗಿ ವಿವಿಗಳು, ಏರ್‌ಲೈನ್ಸ್‌ಗಳ, ಖಾಸಗಿ ಮಾಧ್ಯಮಗಳಿಗೆ ಅವಕಾಶ ನೀಡಲಾಯಿತು. ಇದರ ಫಲದಿಂದ ಮಾಧ್ಯಮ ಕ್ಷೇತ್ರದಲ್ಲೂ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾದವು. ( ಖಾಸಗೀಕರಣದಿಂದ ದೇಶಕ್ಕಾದ ತೊಂದರೆಗಳೂ ಇವೆ.)
ಕೆಲಸ ಇಲ್ಲದೆ ಮನೆಯಲ್ಕಿ ಕೂತಿದ್ದ ನಿಮ್ಮಂತವರಿಗೆ ಈ ಮಾಧ್ಯಮ ಸಂಸ್ಥೆಗಳು ಕರೆದು 6 ರಿಂದ 7 ಅಂಕಿಗಳ ವರೆಗೆ ಸಂಬಳ ನೀಡಿದವು. ಎಲ್ಲವನ್ನೂ ಪಡೆದ ನೀವು ಪ್ರತಿಯಾಗಿ ಏನು ಮಾಡಿದ್ರಿ. ನಿಮ್ಮ ಪುರಾತನ, ಸನಾತನ ಬುದ್ದಿಯನ್ನ ಬಿಡಲೇ ಇಲ್ಲ, ಉದ್ಯೋಗ ಸೃಷ್ಟಿಸಿ ಕೆಲಸ ನೀಡಿ, ಹೆಣ್ಣು ಮಕ್ಕಳು ದುಡಿಮೆ ಮಾಡಿ ಆರ್ಥಿಕ ಸ್ವಾತಂತ್ರ ಗಳಿಸಿಕೊಂಡು ಸ್ವಾಭಿಮಾನದಿಂದ ಜೀವನ ಮಾಡಬೇಕು ಎಂದು ಕನಸಿದ ನಾಯಕ ಮನಮೋಹನ್ ಸಿಂಗ್ ವಿರುದ್ಧವೇ ಅಪಪ್ರಚಾರ ಮಾಡಿ, ಸುಳ್ಳು ಸುದ್ದಿ ಮಾಡಿ ಮೋದಿ ಮಾತಿಗೆ ತಲೆದೂಗಿದಿರಿ ಅಲ್ಲ್ವೇ?
ಮನಮೋಹಮ್ ಸಿಂಗ್ ಸಾಧಿಸಿದ ಶೇ.9ರ ವರೆಗಿನ ಪ್ರಗತಿ ದರ ಮಣ್ಣು ಪಾಲಾಗುತ್ತಿದ್ದಾಗ ಮೋದಿಜಿಯನ್ನು ಪ್ರಶ್ನೆ ಮಾಡೋದನ್ನ ಬಿಟ್ಟು ದೇವಸ್ಥಾನದಲ್ಲಿ ಭಿಕ್ಷೆ ಬೇಡುವುದಾಗಿ ಹೇಳ್ತಾ ಇದೀಯಲ್ಲ ತಾಯಿ!
ಹೆಣ್ಣು ಮಕ್ಕಳು ಶಿಕ್ಷಣ, ಉದ್ಯೋಗ ಪಡೆದು ಸ್ವಾಭಿಮಾನದಿಂದ ಬದುಕಬೇಕು ಎಂದು ಕನಸಿದ ಸಿಂಗ್ ನಿಮಗೆ ಬೇಡವಾದರು, ಹೆಣ್ಣು ಮನೆಯ ಹೊಸಿಲೊಳಗೆ ಇರಬೇಕು, ಸಂಸಾರ ನಿಭಾಯಿಸಬೇಕು ಸಂಸ್ಕೃತಿ ಕಾಪಾಡಬೇಕು ಎನ್ನುವವರು ಮುಖ್ಯರಾದರು ಅಲ್ಲವೇ..?
ಹೆಣ್ಣು ಮಕ್ಕಳು ಗಂಡನ ಪಾದ ಪೂಜೆ ಮಾಡುತ್ತಾ, ತುಳಸಿ ಪೂಜೆ ಮಾಡಿಕೊಂಡು ಮನೆಯಲ್ಲಿ ಇರಬೇಕು, ಮಕ್ಕಳನ್ನು ಹೆರುತ್ತಾ ಭಾರತೀಯ ಸಂಸ್ಕೃತಿ ರಕ್ಷಿಸಬೇಕು ಎನ್ನುವವರ ಮಾತಿಗೆ ನೀವು ತಲೆ ದೂಗುತ್ತೀದ್ದೀರಿ ಎಂದರೆ ನಿಮಗೆ ಸ್ವಾತಂತ್ರ ಬೇಕಿಲ್ಲ ಅನ್ನಿಸ್ತಿದೆ?
ಸ್ವಾತಂತ್ರವನ್ನು ಕಾಲಲ್ಲಿ ಒದ್ದವರು ಗುಲಾಮಗಿರಿ ಅನುಭವಿಸಲೂ ಸಿದ್ದರಿರಬೇಕು ಎಂಬುದನ್ನ ಮರೆಯದಿರಿ? ಆ ನಂತರ ನಿಮಗೆ ಯೋಗ್ಯವಾದದ್ದು ಅಡುಗೆ ಮನೆ, ಬೆಡ್ ರೂಂ ಅಷ್ಟೆ ಎಂದು ನೀವೆ ಆಯ್ಕೆ ಮಾಡಿಕೊಂಡಿದ್ದೀರಿ ಅಲ್ಲವೇ ಮಿ. ರಾಷ್ಟ್ರವಾದಿ ಪತ್ರಕರ್ತೆ
ಇಷ್ಟೇ ನಿಮ್ಮ ಯೋಗ್ಯತೆ.? ಅನುಭವಿಸಿ.
ಗೋವಿಂದರಾಜ್ ಬೈಚಕುಪ್ಪೆ, ರಂಗಕರ್ಮಿ



