ಗೋಮಾಂಸ ರಫ್ತು: ಅಂಕಿಅಂಶ ನೀಡಲು ಸರ್ಕಾರದ ಹಿಂದೇಟು

3 years ago

ಬೆಂಗಳೂರು: ರಾಜ್ಯದಿಂದ ಗೋವಾಕ್ಕೆ ಜಾನುವಾರುಗಳ ಮಾಂಸ ಕಳುಹಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಪಟ್ಟಂತಹ ಅಂಕಿ ಅಂಶಗಳನ್ನು ನೀಡಲು ಹಿಂದೇಟು ಹಾಕಿದೆ.

ವಿಧಾನಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಹರೀಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಜಾನುವಾರು ಮಾಂಸ ರಫ್ತು ಮಾಡುವ ಅಂಕಿಅಂಶ ಮಾಹಿತಿಗಳನ್ನು ನಿರ್ವಹಣೆ ಮಾಡುವುದಿಲ್ಲ. ಆದಾಗ್ಯೂ ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ, ಆರ್ಥಿಕ ಇಲಾಖೆಗಳಿಂದ ಮಾಹಿತಿ ಕೋರಲಾಗಿತ್ತು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಗೋವಾಕ್ಕೆ ಮಾಂಸ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ರಫ್ತಿಗೆ ಸಂಬಂಧಪಟ್ಟ ವಿವರಗಳಿಲ್ಲ. ಧನ ಮತ್ತು ಎಮ್ಮೆ ಮಾಂಸ ರಫ್ತು ಮಾಹಿತಿ ಶೂನ್ಯ ಎಂದು ಆರ್ಥಿಕ ಇಲಾಖೆ ವರದಿ ನೀಡಿದೆ ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧವಾಗಿದ್ದರೂ ನೆರೆ ರಾಜ್ಯಕ್ಕೆ ಮಾಂಸ ರವಾನೆಯಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಹರೀಶ್‍ಕುಮಾರ್ ಉತ್ತರ ನೀಡಿದ ಆರ್ಥಿಕ ಇಲಾಖೆಗೆ ಬಹುಮಾನ ನೀಡಬೇಕು ಎಂದು ವ್ಯಂಗ್ಯವಾಡಿದರು.

ಗೋವಾ ವಿಧಾನಸಭೆಯಲ್ಲಿ ಪ್ರತಿದಿನ 2 ಟನ್ ಮಾಂಸ ಪೂರೈಕೆಯಾಗುತ್ತಿದೆ ಎಂದು ಅಲ್ಲಿನ ಸದಸ್ಯರು ತಿಳಿಸಿದ್ದಾರೆ. ಆ ಮಾಂಸ ಗಡಿ ಜಿಲ್ಲೆ ಬೆಳಗಾವಿಯಿಂದಲೇ ಸರಬರಾಜು ಆಗುತ್ತಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಡುತ್ತಿದೆ ಎಂದು ಆಕ್ಷೇಪಿಸಿದರು.

ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಚರ್ಮಗಂಟು ರೋಗದಿಂದಾಗಿ 30297 ಜಾನುವಾರುಗಳು ಮೃತಪಟ್ಟಿವೆ. ರಾಜ್ಯದಲ್ಲಿ 147 ಗ್ರಾಮವಾರು ಜಾತ್ರೆಗಳು, 101 ಜಾನುವಾರು ಸಂತೆಗಳು ನಡೆಯುತ್ತಿವೆ. ಚರ್ಮಗಂಟು ರೋಗದಿಂದಾಗಿ ತಾತ್ಕಾಲಿಕವಾಗಿ ಇವುಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.

ಫೆಬ್ರವರಿ 7ರವರೆಗೆ ರಾಜ್ಯದಲ್ಲಿ 3,25,253 ಜಾನುವಾರುಗಳು ರೋಗಕ್ಕೆ ತುತ್ತಾಗಿವೆ. 30,297 ಜಾನುವಾರುಗಳು ಮರಣ ಹೊಂದಿವೆ. 2,57,084 ಜಾನುವಾರುಗಳು ಗುಣಮುಖವಾಗಿವೆ. 101121 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಮೃತಪಟ್ಟ ಜಾನುವಾರುಗಳ ಪೈಕಿ ಕರುವಿಗೆ 5 ಸಾವಿರ, ಹಸುವಿಗೆ 20 ಸಾವಿರ, ಎಮ್ಮೆಗೆ 30 ಸಾವಿರ ಪರಿಹಾರ ಘೋಷಿಸಲಾಗಿದ್ದು, ಈವರೆಗೂ 17,564 ಜಾನುವಾರುಗಳ ಮಾಲೀಕರಿಗೆ 37 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಮತ್ತೆ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

Leave a Reply