ಜನಪ್ರಿಯತೆಯ ಉತ್ತುಂಗಕ್ಕೇರಬೇಕೆಂದು ಪೊಲೀಸ್ ಅತಿಥಿಯಾದ

3 years ago

#sosialmedia #craze #arrest #popularity

ಬೆಂಗಳೂರು: ಸೋಷಿಯಲ್‌ ಮೀಡಿಯಾದ ಷೇರಿಂಗ್ ಗೀಳಿಗೆ ಬಿದ್ದ ಕೆಲವರು ಮಾಡುವ ಅನಾಹುತಗಳು ಅಷ್ಟಿಷ್ಟಲ್ಲ. ದಿನ ಬೆಳಗಾಗುವುದರೊಳಗೆ ಜನಪ್ರಿಯತೆಯ ಉತ್ತುಂಗಕ್ಕೇರಬೇಕೆಂದು ಮಾಡಬಾರದ್ದನ್ನು ಮಾಡಲು ಹೋಗಿ ಅಪಾಯ ತಂದಿಟ್ಟುಕೊಳ್ಳುತ್ತಾರೆ.

ಕೆಲವು ದಿನಗಳ ಹಿಂದೆ ಮೆಟ್ರೋದ ಎಸ್ಕಲೇಟರ್‌ ಬಳಿ ವೃದ್ಧೆಯೊಬ್ಬರ ಬಳಿ ಕುಚೇಷ್ಟೆ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಯುವಕನೊಬ್ನ ಇದೀಗ ಮೆಟ್ರೋ ರೈಲಿನೊಳಗೆ ಕರೆಂಟ್‌ ಶಾಕ್‌ ಹೊಡೆದಂತೆ ನಟಿಸಿ ಆತಂಕ ಸೃಷ್ಟಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿಯನ್ನು ಪ್ರಜ್ವಲ್ (23) ಎಂದು ಗುರುತಿಸಲಾಗಿದೆ ಈತ ಸೋಷಿಯಲ್‌ ಮೀಡಿಯಾ ಬಳಕೆದಾರನಾಗಿದ್ದು, ತನ್ನ ಒಂದು ವಿಡಿಯೊಗೋಸ್ಕರ ಚಿತ್ರವಿಚಿತ್ರವಾಗಿ ಆಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಾಂಕ್ ವಿಡಿಯೊಗಳನ್ನು ಪೋಸ್ಟ್ ಮಾಡುವ ಪ್ರಜ್ವಲ್‌, ಈ ಬಾರಿ ಇದಕ್ಕಾಗಿ ಮೆಟ್ರೋ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅಲ್ಲಿಗೆ ಬಂದ ಪ್ರಜ್ವಲ್‌, ಎಸ್ಕಲೇಟರ್‌ ಬಳಿ ಬಂದಿದ್ದಾನೆ. ಅಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಹೆದರಿಸಲು ಪ್ರಯತ್ನಿಸಿದ್ದ. ಇದನ್ನು ವಿಡಿಯೊ ಮಾಡಿಕೊಂಡಿದ್ದ. ಇದಾದ ಬಳಿಕ ಚಲಿಸುತ್ತಿರುವ ಮೆಟ್ರೋದಲ್ಲಿ ಕರೆಂಟ್‌ ಶಾಕ್‌ ಹೊಡೆದವನಂತೆ ನಾಟಕ ಮಾಡಿದ್ದಾನೆ. ಇದರಿಂದ ಅಕ್ಕಪಕ್ಕದವರು ಗಾಬರಿಯಾಗಿದ್ದಾರೆ. ಸಹ ಪ್ರಯಾಣಿಕರು ಆತನನ್ನೇ ದಿಟ್ಟಿಸಿ ನೋಡಿದ್ದಾರೆ. ತನಗೆ ಮೆಟ್ರೋ ಕಂಬಿಯಿಂದ ಏನೋ ಆಗಿದೆ ಎಂಬಂತೆ ಅದನ್ನೇ ನೋಡಿ ಇನ್ನೊಂದು ಕಡೆ ಬಂದು ನಿಂತಿದ್ದಾನೆ. ತನಗೆ ತಲೆ ಸುತ್ತಿದಂತೆ ನಟಿಸಿದ್ದಾನೆ. ಈ ವಿಡಿಯೊವನ್ನು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದು, “ಹೆಂಗೆ ಹೆಂಗಿದೆ ಓಪನಿಂಗ್‌ ಥ್ರಿಲ್‌” ಎಂದು ಹೇಳಿಕೊಂಡಿದ್ದಾನೆ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಜಾಲತಾಣಗಳಲ್ಲಿ ಈ ವಿಡಿಯೋ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.

Leave a Reply