ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸ್ಥಾನಗಳಿಸಬೇಕು ಎಂದು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಇತರೆ ಪಕ್ಷಗಳ ಮುಖಂಡರನ್ನು ತನ್ನತ್ತ ಸೆಳೆಯುತ್ತಿದೆ. ಇಂತಹ ಸಮಯದಲ್ಲಿ ಸಾಕಷ್ಟು ಎಚ್ಚರವಹಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಲಿ, ಆ ವೇಳೆ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡಬೇಕು. ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕು. ಹೊಸಬರ ಸೇರ್ಪಡೆಯ ವೇಳೆ ಹಲವರು ಪಕ್ಷ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಪಕ್ಷಕ್ಕೆ ಯಾರ ಅಗತ್ಯವಿದೆ. ಯಾರಿಂದ ಲಾಭವಾಗುತ್ತಿದೆ ಎಂಬುದನ್ನು ಮುಖಂಡರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವಂತೂ ಹೋಗುವವರನ್ನು ತಡೆಯುವುದಿಲ್ಲ, ಬರುವವರನ್ನು ಬೇಡ ಎನ್ನುವುದಿಲ್ಲ ಎಂದರು.
ಕಾಂಗ್ರೆಸ್ನಿಂ ದ ಒಂದಿಷ್ಟು ನಾಯಕರು, ಶಾಸಕರು ಹೊರ ಹೋಗುತ್ತಾರೆ ಎಂಬುದು ಆಧಾರರಹಿತ. ವಿರೋಧಪಕ್ಷದಲ್ಲಿದ್ದಾಗ ಕಾಂಗ್ರೆಸ್ನನಲ್ಲಿದ್ದು ಅಧಿಕಾರ ಬಂದಾಗ ಹೊರಹೋಗುವವರನ್ನು ಹುಚ್ಚರೆನ್ನಬೇಕಾಗುತ್ತದೆ ಎಂದರು.
ಬಿಜೆಪಿಯಲ್ಲಿರುವ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗಳಿವೆ. ನಮ್ಮ ಮೂಲ ಉದ್ದೇಶ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದಾಗಿದೆ. ರಾಜಕಾರಣ ನಿಂತ ನೀರಲ್ಲ. ಚಲನಶೀಲತೆಯಿಂದ ಕೂಡಿದೆ. ಇಲ್ಲಿ ಮಾತ್ರ ಅತಿವೇಗದ ಬದಲಾವಣೆ ಕಾಣಲು ಸಾಧ್ಯ. ಯಾವುದೇ ಬದಲಾವಣೆಯಾದರೂ ಅದು ಭವಿಷ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿರುತ್ತದೆ ಎಂದರು.



