ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಆಸಿಡ್ ದಾಳಿಯಲ್ಲೂ ನಂಬರ್ ಒನ್ ಸ್ಥಾನ ಗಳಿಸುವ ಮೂಲಕ ಕುಖ್ಯಾತಿಯಾಗಿದೆ. ಕಳೆದ 2022ರಲ್ಲಿ ನಡೆದ ಮಹಿಳೆಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಗಳ ಪೈಕಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ.
ಬೆಂಗಳೂರು ನಗರ ಪೊಲೀಸರು ಆಸಿಡ್ ದಾಳಿ ನಡೆದ ಆರು ಪ್ರಕರಣ ದಾಖಲಿಸಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎನ್ಸಿಆರ್ಬಿ ಡೇಟಾದಲ್ಲಿ ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆದ ಆಸಿಡ್ ದಾಳಿ ಪ್ರಕರಣಗಳ ಪೈಕಿ, ಕಳೆದ ವರ್ಷ ಎಂಟು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾಗುವುದರೊಂದಿಗೆ ಬೆಂಗಳೂರಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಸಿಕ್ಕಿದೆ.
7 ಮಹಿಳೆಯರು ಆಸಿಡ್ ದಾಳಿಗೆ ಬಲಿಯಾಗುವುದರೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ ಮತ್ತು ಅಹಮದಾಬಾದ್ ನಲ್ಲಿ ಐದು ಪ್ರಕರಣ ವರದಿಯೊಂದಿಗೆ ಮೂರನೇ ಸ್ಥಾನದಲ್ಲಿ ಎಂದು ಅಂಕಿಅಂಶಗಳು ತಿಳಿಸಿವೆ. ಹೈದರಾಬಾದ್ ಮತ್ತು ಅಹಮದಾಬಾದ್ ನಲ್ಲಿ ಇಂತಹ ಎರಡು ಪ್ರಕರಣಗಳು ನಡೆದಿವೆ.
ಕಳೆದ ವರ್ಷ 24 ವರ್ಷದ ಎಂಕಾಂ ಪದವೀಧರೆ ಯುವತಿ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಹಲವು ವರ್ಷಗಳಿಂದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ ಆರೋಪಿ, ಮದುವೆ ಪ್ರಸ್ತಾವನೆ ತಿರಸ್ಕರಿಸಿದ್ದರಿಂದ ಆಕೆಯ ಮೇಲೆ ಆ್ಯಸಿಡ್ ಎರಚಿದ್ದ. ಈ ವ್ಯಕ್ತಿಯನ್ನು ಮೇ ತಿಂಗಳಲ್ಲಿ ತಿರುವಣ್ಣಾಮಲೈ ಆಶ್ರಮದಿಂದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಅಲ್ಲಿ ಆತ “ಸ್ವಾಮಿ” ವೇಷದಲ್ಲಿ ಅಡಗಿಕೊಂಡಿದ್ದ. ಜೂನ್ 2023 ರಲ್ಲಿ ಸಂತ್ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಯಿತು. ಇದೇ ರೀತಿ ಮತ್ತೊಂದು ಪ್ರಕರಣ ಜೂನ್ 10, 2022ರಂದು ನಡೆದಿತ್ತು. ಇದರಲ್ಲಿ ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆಯ ಸ್ನೇಹಿತೆಯ ಮುಖಕ್ಕೆ ವ್ಯಕ್ತಿ ಆಸಿಡ್ ಎರಚಿದ್ದ.




