ಜಿಟಿ ಜಿಟಿ ಮಳೆಗೆ ಕೆಸರಿನ ಗದ್ದೆಯಂತಾದ ಸಾವಳಗಿ-ತುಬಚಿ ರಸ್ತೆ

4 years ago

ಬಾಗಲಕೋಟೆ: ಸಾವಳಗಿ – ತುಬಚಿ ಗ್ರಾಮದ ಹೃದಯಭಾಗದಲ್ಲಿರುವ ರಸ್ತೆಗಳಲ್ಲಿ ಒಂದಾದ ರಸ್ತೆ ಎಂದರೆ ಸಾವಳಗಿ – ತುಬಚಿ ರಸ್ತೆ ಕಳೆದ ಒಂದು ವರ್ಷದ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅನುಧಾನದಲ್ಲಿ ಬಾಗಲಕೋಟ ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಗುದ್ದಲಿ ಪೂಜೆ ಮೂಲಕ ನಿರ್ಮಾಣವಾಗಿತ್ತು.

ಎಮ್.ಆರ್.ಎಲ್-43 ತುಬಚಿಯಿಂದ ಸಾವಳಗಿ-ತುಂಗಳ ರಸ್ತೆವರೆಗಿನ 697.20 ಲಕ್ಷಗಳ ವೆಚ್ಚದ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿಯು ಪ್ರಾರಂಭವಾಗಿ ಒಂದು ವರ್ಷವೇ ಕಳೆದಿದೆ. ಇದೆ ರಸ್ತೆಯು ಸಾವಳಗಿ – ತುಂಗಳ ರಸ್ತೆಯಿಂದ ಪ್ರಾರಂಭವಾಗಬೇಕಿದ್ದರು ಕೂಡಾ ಸಾವಳಗಿ ಗ್ರಾಮದ ಕಡೆಯ ಅಂದಾಜು 2 ಕಿ.ಮೀ ರಸ್ತೆಯಾಗಿರುವದಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ರಾಜಕೀಯ ಮುಖಂಡರಿಗೆ ವಿಚಾರಿಸಿದರೆ ಸರಿಯಾಗಿ ಸ್ಪಂದಿಸದೇ ಇರುವದು ವಿಪರ್ಯಾಸದ ಸಂಗತಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮದ ವಿದ್ಯಾನಗರ ಹಾಗೂ ಕುರುಬರ ಮಡ್ಡಿ ಎಂಬಲ್ಲಿ ವಾಸಿಸುವ ನೂರಾರು ಕುಟುಂಬಗಳು ಇದೇ ರಸ್ತೆಯನ್ನು ನೆಚ್ಚಿಕೊಂಡು ನಿತ್ಯ ಸಂಚರಿಸುತ್ತವೆ. ರಸ್ತೆ ಮೇಲೆ ಕಾಲಿಟ್ಟರೆ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಶಪಿಸುವ ಹಾಗೇ ರಸ್ತೆ ಹದಗೆಟ್ಟು ಹೋಗಿವೆ. ಗ್ರಾಮದ 30% ಕೃಷಿ ಭೂಮಿ ಇದೆ ರಸ್ತೆಗೆ ಹೊಂದಿಕೊಂಡಿರುವುದರಿಂದ ರೈತರು ದಿನನಿತ್ಯ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಶಾಲಾ ಮಕ್ಕಳು, ಗರ್ಭಿಣಿ ಮಹಿಳೆಯರು ಹಾಗೂ ವೃದ್ಧರು ಈ ರಸ್ತೆಯಲ್ಲಂತೂ ನಡೆದಾಡುವ ಹಾಗಿಲ್ಲ. ಅನೇಕ ಬಾರಿ ಬೈಕ್ ಗಳು ಸ್ಕೀಡ್ ಆಗಿ ಸಣ್ಣಪುಟ್ಟ ಅಪಘಾತಗಳು ಆಗಿರುವ ಉದಾಹರಣೆ ಇವೆ.

ಮುಖ್ಯವಾಗಿ ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಾಣವಾಗಬೇಕಾಗಿದೆ. ಈ ಪ್ರದೇಶದಲ್ಲಿ 100ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದರೂ ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಮುಖ್ಯ ರಸ್ತೆ ಮೇಲೆ ಚರಂಡಿ ನೀರು ಸಂಗ್ರಹವಾಗುತ್ತಿದೆ. ಅದರಲ್ಲೂ ಮಳೆ ಬಂದರೇ ಸಾಕು ಮುಖ್ಯ ರಸ್ತೆ ಕೆಸರು ಗದ್ದೆಯಂತೆ ಆಗುತ್ತದೆ.

ಪ್ರತಿ ಚುನಾವಣೆ ಸಂಧರ್ಭದಲ್ಲಿ ಮತದಾರರು ಈ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸುಧಾರಸಬೇಕೆಂಬ ಬೇಡಿಕೆ ಇಟ್ಟರೂ ಜನಪ್ರತಿನಿಧಿಗಳು ಕೇವಲ ಆಶ್ವಾಸನೆಗೆ ಸೀಮಿತವಾಗಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು ಮನಸ್ಸು ಮಾಡಿದರೆ  ಗ್ರಾಮ ಪಂಚಾಯತಿ ಅನುದಾನದಲ್ಲಿಯೆ ರಸ್ತೆ ಸುಧಾರಿಸಬಹುದು. ಆದರೆ ಗ್ರಾಮ ಪಂಚಾಯತಿ ಸದಸ್ಯರಂತು ಗೆದ್ದು ಬಂದ ನಂತರ ಇತ್ತ ಕಡೆ ತಲೆ ಕೂಡಾ ಹಾಕುವದಿಲ್ಲ ಎನ್ನುವದು ಇಲ್ಲಿನ ನಿವಾಸಿಗಳ ಮಾತಾಗಿದೆ.

ಸ್ಥಳೀಯ ನಾಯಕರ ನಿರ್ಲಕ್ಷ್ಯದಿಂದ ಸಾವಳಗಿ-ತುಂಗಳ ರಸ್ತೆಯಿಂದ ಪ್ರಾರಂಭವಾಗಬೇಕಾಗಿದ್ದ ರಸ್ತೆಯು ತುಬಚಿ ಗ್ರಾಮದಿಂದ ಪ್ರಾರಂಭವಾಗಿದೆ. ಇದು ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಅವರು ರಸ್ತೆ ಪೂಜೆ ಮಾಡಿದಾಗಲೇ ಸ್ಥಳೀಯ ನಾಯಕರಿಗೆ ಗೊತ್ತಿದ್ದರು ಸುಮ್ಮನಾಗಿರುವದು ರಾಜಕೀಯ ಕುತಂತ್ರವಾಗಿದೆ.

ಈಗಲಾದರೂ ಸ್ಥಳೀಯ ನಾಯಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವ ಮೊದಲೇ ರಸ್ತೆಯನ್ನು ಸುಧಾರಿಸಬೇಕಾಗಿದೆ ಎಂಬುವದು ಪ್ರಜ್ಞಾವಂತ ಜನರ ಮಾತಾಗಿದೆ.

Leave a Reply