ಬಾಗಲಕೋಟೆ: ಹುನ್ನೂರಿನ ಪ್ರಮುಖ ವರ್ತಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಐವರು ಸುಪಾರಿ ಹಂತಕರನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಣದಾಳದ ಕಿರಣ ಭೀಮಪ್ಪ ಚಿಗರಿ, ಬಸ್ತವಾಡದ ಸಿದ್ದಪ್ಪ ಶಿವಪ್ಪ ಲಟ್ಟೆ, ಕಣದಾಳದ ಪರಶುರಾಮ ಭರಮಪ್ಪ ಕರಿಹೊಳೆ ಹಾಗೂ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಿದ್ದಾರ್ಥ ಶಿವಾನಂದ ಹಿರೇಮಠ, ರಬಕವಿ –ಬನಹಟ್ಟಿ ತಾಲೂಕಿನ ಕುಲಹಳ್ಳಿಯ ದಾನೇಶ ಮಾರುತಿ ಭಜಂತ್ರಿ ಬಂಧಿತ ಆರೋಪಿಗಳಾಗಿದ್ದಾರೆ.
ಜಮಖಂಡಿಯ ರುದ್ರಾಸ್ವಾಮಿ ಪೇಠ ಗಲ್ಲಿಯ ಸಂಜು ವಿಠ್ಠಲ ಕಡಕೋಳ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಉಳಿದಂತೆ ಜಮಖಂಡಿ ಗ್ರಾಮೀಣ ಪೊಲೀಸರು ಈ ಹಂತಕರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸುಪಾರಿ ಕಿಲ್ಲರ್ಗಳಿಂದ ಪಿಸ್ತೂಲ್, ಲಾಂಗ್ ಹಾಗೂ 5,335 ನಗದು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ತಾಲೂಕಿನ ಮುತ್ತೂರ ಪುನರ್ವಸತಿ ಕೇಂದ್ರದಲ್ಲಿ ಆರು ಜನರು ಸೇರಿ ಕೊಲೆಗೆ ಸಂಚು ರೂಪಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ವರ್ತಕರೊಬ್ಬರನ್ನು ಕೊಲೆ ಮಾಡಲು ಉದ್ದೇಶಿಸಿದ್ದರ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.




