ಇಲ್ಲಿಯ ತನಕ ರಾಜ್ಯದಲ್ಲಿ ಹಂಪಿ ಉತ್ಸವ, ದಸರಾ ಉತ್ಸವ ಮತ್ತು ಬೆಳಗಾವಿಯಲ್ಲೊಂದು ಉತ್ಸವ ಹೀಗೆ ನಾಲೈದು ಉತ್ಸವಗಳನ್ನು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆಚರಿಸಲಾಗುತ್ತಿತ್ತು. ಇವುಗಳು ಆ ಉತ್ಸವಗಳ ಘನತೆ, ಗಾಂಭೀರ್ಯವನ್ನು ಕಾಪಾಡಿಕೊಂಡು ಬಂದಿದ್ದವು.
ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಉತ್ಸವಗಳು ಆರಂಭವಾಗಿವೆ. ಬಹುಶಃ ಚುನಾವಣೆಯ ದೃಷ್ಟಿಯಿಂದ ಜನರನ್ನು ಆಕರ್ಷಿಸುವ ಸಲುವಾಗಿ ಇಂತಹ ಉತ್ಸವಗಳನ್ನು ಆಚರಿಸುತ್ತಿದ್ದಾರೆ. ಉತ್ಸವಗಳಿಗೆ ನಟ, ನಟಿಯರನ್ನು ಮತ್ತು ದುಬಾರಿ ಸಂಭಾವನೆಯ ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸಿ ಜನರನ್ನು ರಂಜಿಸುತ್ತಿದ್ದಾರೆ.
ಇದರ ನಡುವೆ ತಮ್ಮ ಸಾಧನೆಗಳ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಜನರು ಆಹಾರ ಪದಾರ್ಥಗಳ ಬೆಲೆಗಳು ಮತ್ತು ದಿನಬಳಕೆ ವಸ್ತುಗಳ ಬೆಲೆಗಳು ದುಬಾರಿಯಾಗಿ ಬದುಕು ನಡೆಸುವುದು ದುಸ್ತರವಾಗಿದೆ.
ಹಲವಾರು ರೀತಿಯ ಕಾನೂನುಗಳು ವ್ಯಾಪಾರಸ್ಥರ ಬದುಕನ್ನು ಹಿಂಡಿ ಹಿಪ್ಪೆ ಮಾಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯದ ಬೊಕ್ಕಸದ ಕೋಟ್ಯಂತರ ರೂಪಾಯಿ ಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ತಮ್ಮ ಪ್ರಚಾರಕ್ಕಾಗಿ, ತಮ್ಮ ವೈಯಕ್ತಿಕ ಪ್ರತಿಷ್ಠೆಗಳಿಗಾಗಿ ಉತ್ಸವಗಳನ್ನು ಮಾಡುತ್ತಾ ತೆರಿಗೆದಾರರ ಹಣವನ್ನು ಪೋಲು ಮಾಡುವುದು ಸರಿಯಲ್ಲ.
ಹಲವಾರು ರೀತಿಯ ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ನೆರವುಗಳನ್ನು ಒದಗಿಸಲು ಆರ್ಥಿಕ ಇಲಾಖೆಯ ಹತ್ತಾರು ಷರತ್ತುಗಳನ್ನು ವಿಧಿಸುವ ಇವರುಗಳು ಇಂತಹ ಉತ್ಸವಗಳಿಗೆ ಅನುಮೋದನೆ ನೀಡಲು ಯಾವ ತಕರಾರು ತೆಗೆಯದಿರುವುದು ಆಳುವ ಜನರ ಮನಸ್ಥಿತಿಗೆ ಆಳುವ ಮನಸ್ಥಿತಿಗೆ ಸಾಕ್ಷಿಯಾಗಿದೆ.
ಯಾವುದಕ್ಕೂ ಒಂದು ರೀತಿ ನಿಯಮವಿಲ್ಲ. ಇಂತಹ ಉತ್ಸವಗಳನ್ನು ನಡೆಸುವ ಬದಲಿಗೆ ಜಿಲ್ಲೆಗಳ ರಚನೆಯ ನೆನಪಿನಲ್ಲಿ ಶಾಲಾ ಕೊಠಡಿಗಳನ್ನು, ರಂಗ ಮಂದಿರಗಳನ್ನು, ಆಸ್ಪತ್ರೆಗಳನ್ನು, ಕ್ರೀಡಾಂಗಣಗಳನ್ನು, ಸಂಶೋಧನ ಸಂಸ್ಥೆಗಳನ್ನು ಸ್ಥಾಪಿಸಿ ಸಾರ್ಥಕವಾದ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಿ.
– ಕೆ.ಎಸ್. ನಾಗರಾಜ್, ಬೆಂಗಳೂರು




