ಬೆಂಗಳೂರು: ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಮನುಷ್ಯತ್ವ ಇಲ್ಲದವರು. ಸಚಿವರು, ಸಂಸದರು, ಶಾಸಕರೇ ಸಂವಿಧಾನ ವಿರೋಧಿಸುತ್ತಾರೆ. ಸಂವಿಧಾನ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ. ನನ್ನ ದೃಷ್ಟಿಯಲ್ಲಿ ಅಂಥವರು ಜನಪ್ರತಿನಿಧಿಗಳಾಗಲು ಯೋಗ್ಯರೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಹಿರಿಯ ಪತ್ರಕರ್ತ ಮಣಿ ಬರೆದಿರುವ 28 ಅಂಕಣಗಳನ್ನು ಒಳಗೊಂಡ “ಮನು ಭಾರತ” ಪುಸ್ತಕವನ್ನು ಬಿಡುಗಡೆ ಮಾಡಿ ಮಾತಾಡಿದ ಅವರು, ವಿದ್ಯಾವಂತರು ವೈಚಾರಿಕತೆ, ಜಾತ್ಯತೀತ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾವಂತರು ಎನಿಸಿಕೊಂಡವರು ಕನಿಷ್ಠ ಸಂವಿಧಾನದ ಮೂಲ ಆಶಯಗಳನ್ನಾದರೂ ಓದಿಕೊಳ್ಳಬೇಕು. ಮನುವಾದಿಗಳು ಸಂವಿಧಾನ ವಿರೋಧಿಗಳಾದ ಕಾರಣ ಅದು ಬದಲಾವಣೆ ಆಗಬೇಕು ಎನ್ನುತ್ತಾರೆ ಎಂದರು.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ನೀಡಬೇಕು ಎಂದು ಸಂವಿಧಾನ ಹೇಳಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ನಮ್ಮಲ್ಲಿ ತಾರತಮ್ಯವಿದೆ. ಮನು ಸ್ಮೃತಿ, ಶಾಸ್ತ್ರದಿಂದ ನಿರ್ಮಾಣವಾಗಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇನ್ನೂ ಮುಂದುವರಿದಿದೆ ಎಂದು ಅವರು ಕಿಡಿಕಾರಿದರು.
ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಂಬೇಡ್ಕರ್ ಅವರಷ್ಟು ಅರ್ಥ ಮಾಡಿಕೊಂಡವರು ಬೇರೆ ಯಾರೂ ಇಲ್ಲ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸಂವಿಧಾನ ರಚಿಸುವ ಕೆಲಸ ಮಾಡುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದರು ಎಂದರು.
ಸಂವಿಧಾನ ಉತ್ತಮವೇ ಅಲ್ಲವೇ ಎಂಬುದು ದೇಶದ ಆಡಳಿತದ ಚುಕ್ಕಾಣಿ ಹಿಡಿದವರಲ್ಲಿ ಅದನ್ನು ಜಾರಿ ಮಾಡುವ ಬದ್ಧತೆ ಇದ್ದಾಗ ಗೊತ್ತಾಗುತ್ತದೆ ಎಂದು ಅಂಬೇಡ್ಕರ್ ಅವರು ಹೇಳಿದ್ದರು ಎಂದರು.
ಜನರಿಗೆ ಮತದಾನದ ಹಕ್ಕಿನ ಜೊತೆಗೆ ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಸಹ ಇರಬೇಕಾಗುತ್ತದೆ. ಅವಕಾಶಗಳಿಂದ ವಂಚಿತರಾದ ಜನತೆಗೆ ಸಾಮಾಜಿಕ, ಆರ್ಥಿಕ ಶಕ್ತಿ ತುಂಬದಿದ್ದರೆ ಸಮಾನತೆಯ ಸಮಾಜ ನಿರ್ಮಾಣವಾಗುವುದಿಲ್ಲ ಎಂದರು.
ಮುಂದುವರಿದ ಜಾತಿಯಲ್ಲಿರುವ ಬಡವರಿಗೆ ಮೀಸಲಾತಿಯಲ್ಲ, ಆರ್ಥಿಕ, ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಬೇಕು. ಅದನ್ನು ನಾನು ಯಾವತ್ತೂ ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳಿಗಾಗಿ ಕ್ಷೀರಭಾಗ್ಯ, ಹಸಿದವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಆ ಯೋಜನೆಯಲ್ಲಿ ಎಲ್ಲ ವರ್ಗದ ಬಡವರು ಸೇರಿದ್ದರು. ಅದೇ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮುಂದುವರಿದ ವರ್ಗಗಳ ಬಡವರಲ್ಲಿ ಶಕ್ತಿ ತುಂಬ ಕೆಲಸ ಮಾಡಬೇಕು ಎಂದರು.
ಅಂಬೇಡ್ಕರ್ ಅವರಿಗೆ ಇದ್ದ ದೂರದೃಷ್ಟಿಯೇ ಬೇರೆ. ಅವರೊಂದಿಗೆ ಬೇರೆಯವರನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಬಸವಣ್ಣನವರಂತೆ ಅಂಬೇಡ್ಕರ್ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತ. ಅದು ಸರ್ವಕಾಲಿಕ ಮತ್ತು ಸರ್ವ ಜನರಿಗೆ ಅನ್ವಯ ಎಂದರು.
ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ. ಆದರೆ ಹಿಂದೂಗಳಲ್ಲೇ ಇರುವ ಬಡತನ, ತಾರತಮ್ಯ, ಅಸ್ಪೃಶ್ಯತೆ ನಿವಾರಣೆ ಬಗ್ಗೆ ಬಿಜೆಪಿಯವರು ಎಂದಾದರೂ ಮಾತನಾಡುವರೇ? ಅದನ್ನು ಹೇಳಿದರೆ ಸಿದ್ದರಾಮಯ್ಯ ಹಿಂದೂ ವಿರೋಧಿ,. ಮೇಲ್ಜಾತಿಯವರ ವಿರೋಧಿ ಎಂದು ಟೀಕೆ ಮಾಡುತ್ತಾರೆ ಎಂದು ತಮ್ಮ ಮನದಾಳವನ್ನು ಬಿಚ್ಚಿಟ್ಟರು.
ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿಗಳು ಕಳೆದ ಏಳು ವರ್ಷಗಳಲ್ಲಿ ಒಂದು ದಿನವೂ ವಿಶ್ಲೇಷಣೆ ಮಾಡಿಲ್ಲ. ಜಿಡಿಪಿ ಬೆಳವಣಿಗೆ, ನಿರುದ್ಯೋಗ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಅವರಲ್ಲಿ ಶಕ್ತಿ ತುಂಬುವುದು ಹೇಗೆ ಎಂಬ ಬಗ್ಗೆ ಎಂದಾದರೂ ಚರ್ಚೆ ಆಗಿದೆಯೇ? ಎಂದು ಅವರು ಪ್ರಶ‍್ನಿಸಿದರು.
ಯಾವುದೇ ಪತ್ರಕರ್ತ, ವರದಿಗಾರನ ವೃತ್ತಿ ಬದುಕು ಸಾರ್ಥಕ ಆಗಬೇಕಾದರೆ ಆತನ ಬರವಣಿಗೆ ಜನರನ್ನು ತಲುಪಬೇಕು. ಟಿವಿ ಮಾಧ್ಯಮ ಬಂದ ಬಳಿಕ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಟಿವಿಗಳಲ್ಲಿ ಅತಿ ರಂಜಿತ ವರದಿಗಳ ಪ್ರಸಾರವಾಗುವುದು ಇದಕ್ಕೆ ಕಾರಣ ಎಂದರು.
ನಿತ್ಯವೂ ನಾನು ಒಂದು ಗಂಟೆ ಕಾಲ ನಾನು ಪತ್ರಿಕೆಗಳನ್ನು ಓದುತ್ತೇನೆ. ಮಾಧ್ಯಮ ಈಗ ವ್ಯಾಪಾರೀಕರಣಕ್ಕೆ ಒಳಗಾಗಿದೆ. ವಾಸ್ತವವನ್ನು ಬಿಚ್ಚಿಡುವ, ವರದಿ ಮಾಡುವ ಕಾರ್ಯಕ್ಕಿಂತ ಜನರ ಅಭಿರುಚಿಗೆ ಅನುಗುಣವಾಗಿ ಸುದ್ದಿ ಬಿತ್ತರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ, ಆರ್ಥಿಕ ಸ್ಥಿತಿ ಮತ್ತು ನಮ್ಮ ಬದುಕನ್ನು ಸರಿಯಾಗಿ ಬಿಂಬಿಸುವ ಕೆಲಸ ಮಾಧ್ಯಮದಿಂದ ಆಗುತ್ತಿಲ್ಲ. ಸಮಾಜದ ಅಂಕುಡೊಂಕು ತಿದ್ದುವ ಬದಲಾವಣೆ ತರುವ ಕೆಲಸವನ್ನು ಮಾಧ್ಯಮಗಳು ದಿಟ್ಟತನದಿಂದ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಎಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಆಧ್ಯಕ್ಷ ಕಾಂತರಾಜು, ಡಾ.ಬಿ.ಕೆ.ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




