ರಾಜ್ ಕುಮಾರ್ ಅವರ ಕುರಿತ ಮಹತ್ವದ ಅಂತರಂಗದ ಅಣ್ಣ ಕೃತಿಗಾಗಿ ಲೇಖಕ, ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 7975687773
‘ಅಂತರಂಗದ ಅಣ್ಣ’ ಓದುಗನಲ್ಲಿ ವಿಭಿನ್ನ ಅರ್ಥ ಹೊರಡಿಸುವ ಧ್ವನಿಪೂರ್ಣ ಶೀರ್ಷಿಕೆ. ಅದರ ಧ್ವನಿ, ಇದುವರೆವಿಗೂ ಕಲಾವಿದನೊಬ್ಬ ತನ್ನ ಅಭಿಮಾನಿಗಳ ಅಂತರಂಗದಲ್ಲಿ ಉಳಿದಿರುವುದು. ಹಾಗೆ ಅಭಿಮಾನಿ ದೇವರುಗಳು ಕಲಾವಿದನ ಅಂತರಂಗದಲ್ಲಿ ಶಾಶ್ವತವಾಗಿ ನೆಲೆ ನಿಂತಿರುವುದು. ಇನ್ನೊಂದು, ಇವೆರಡನ್ನೂ ಮೀರಿದಂಥ ‘ಕಲಾವಿದ ಮತ್ತು ಅಭಿಮಾನಿ ದೇವರು’ಗಳ ಅಂತರಂಗದ ಒಂದು ಧ್ಯಾನಸ್ಥ ಸ್ಥಿತಿ! ಈ ಧ್ಯಾನಸ್ಥ ಸ್ಥಿತಿಯ ಜಾಡು ಹಿಡಿದು ಪ್ರಕಾಶ್ ರಾಜ್ ಮೇಹು ಅವರ ‘ಅಂತರಂಗದ ಅಣ್ಣ’ನನ್ನು ನೋಡುತ್ತಾ ಹೋದಂತೆ ಕಾಡಿನಿಂದ ನಾಡಿಗೆ ಬಂದ ಒಂದು ‘ಧನ್ಯ ಮಿಲನ’ದ ಹೊತ್ತಲ್ಲಿ ಅಣ್ಣಾವ್ರು ಆಡಿದ ‘ಕೆಲವು ಸತ್ಯಗಳು ನಮ್ಮೊಳಗೇ ಸತ್ತು ಹೋಗುತ್ತವೆ’ ಎಂಬ ಮಾತಿನ ಒಳಾರ್ಥಕ್ಕೆ ಸಾಕ್ಷೀಕರಣದಂತೆ ಈ ಕೃತಿಯ ಅಂತರಂಗ ಧ್ವನಿಪೂರ್ಣವಾಗಿ ಧ್ವನಿಸುತ್ತದೆ.
ಒಂದು ಕೃತಿಯ ಮೌಲ್ಯ ಅದರಲ್ಲಿ ಅಡಕವಾಗಿರಬಹುದಾದ ವಸ್ತು ವಿಷಯವೇ ಆಗಿದೆ. ಆ ವಸ್ತು ವಿಷಯವನ್ನು ಲೇಖಕ ತನ್ನದೇ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಿರುವುದರಲ್ಲಿ ಅಡಗಿದೆ. ‘ಒಂದು ಸುಳ್ಳನ್ನು ನೂರು ಬಾರಿ ಉಚ್ಚರಿಸಿದರೆ’ ಅದು ನಿಜವಾಗಬಹುದಾದ ಅಪಾಯವಿದೆ. ಇಂಥ ಅಪಾಯಗಳ ಒಳ ಸುಳಿವಿಡಿದು ಪ್ರಕಾಶ್ ರಾಜ್ ಮೇಹು ತಮ್ಮ ‘ಅಂತರಂಗದ ಅಣ್ಣ’ ಕೃತಿಯಲ್ಲಿ ವ್ಯಕ್ತಿಯ ಅಂತರಂಗದ ವಿವಿಧ ಮಗ್ಗುಲುಗಳನ್ನು ವ್ಯಾಖ್ಯಾನಿಸುತ್ತ ತೀವ್ರ ವಿಶ್ಲೇಷಣೆಗೊಳಪಡಿಸುತ್ತಾರೆ. ಇದು ಕೃತಿಯುದ್ದಕ್ಕು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಹಾಗೆ ಓದುಗನಲ್ಲಿ, ಇಲ್ಲಿರುವ ವಿಷಯಗಳ ಕುರಿತು ಪ್ರಶ್ನಿಸಿಕೊಳ್ಳುತ್ತಲೇ ವಿಮರ್ಶೆಗೆ ಗುರಿಪಡಿಸುತ್ತದೆ. ಈ ಒಂದು ಗುಣ ಸ್ವಭಾವವೇ ಕೃತಿಯ ಮೌಲ್ಯಯುತ ತೂಕಕ್ಕು ಕಾರಣವಾಗಿದೆ.
ಲೇಖಕರು ಇಲ್ಲಿ ತಮ್ಮ ಸಾಹಿತ್ಯ ಕೃತಿ ‘ತಿಮ್ಮಜ್ಜಿಯ ಮ್ಯಾಗ್ಲುಂಡಿ’ಯಲ್ಲಿ ಬರುವ ಸನ್ನಿವೇಶದ ಒಂದು ಚಿತ್ರಣವನ್ನು ಉದ್ದರಿಸುವ ಮೂಲಕ ಕಲಾವಿದನೊಬ್ಬನ ಪೂರ್ವಾಪರ ಅವಲೋಕಿಸುತ್ತಾರೆ. ಈ ಅವಲೋಕನದಲ್ಲಿ ಮುತ್ತುರಾಜು ಎಂಬ ಹೆಂಡ ಇಳಿಸುವ ಕಸುಬಿನ ಕುಲದ ಹೈದನೊಬ್ಬ ರಾಜ್ ಕುಮಾರ್ ಆದ ಬಗೆ, ನಂತರ ಆತ ಜನಮಾನಸದಲ್ಲಿ ನೆಲೆ ನಿಂತ ರೋಚಕತೆ ಬಗ್ಗೆ, ಅದು ನಮಗೆ ಕಟ್ಟಿಕೊಡುವ ಪ್ರಸ್ತುತಿ ಜನಪದೀಯವಾದ ಒಂದು ತಾತ್ತ್ವಿಕ ನೆಲೆಗಟ್ಟಿನಲ್ಲಿ! ಹೇಗೆಂದರೆ ಆಡಾಡುತ ಕೃತಿಯೊಳಗೆ ಅವು ಪ್ರಸ್ತಾಪಿಸುವ ವಿಚಾರ ವಿಶ್ಲೇಷಣೆಗಳ ರೂಪದಲ್ಲಿ ಅವಕ್ಕೆ ಒಂದು ಸಮತೂಕದ ಗಟ್ಟಿತನ ಪ್ರಾಪ್ತವಾಗುವಷ್ಟರ ಮಟ್ಟಿಗೆ ಜೀವಂತವಾಗಿದೆ.
ಇಲ್ಲಿ ರಾಜ್ ಕುಮಾರ್ ಒಬ್ಬ ವ್ಯಕ್ತಿ ಅಷ್ಟೆ. ಆದರೆ ‘ವ್ಯಕ್ತಿತ್ವ’ದ ಪ್ರಶ್ನೆ ಬಂದಾಗ ಲೇಖಕರು ಎಲ್ಲೂ ತಮ್ಮತನ ಬಿಟ್ಟುಕೊಡದೆ ನೇರವಾಗಿಯೇ ರಂಗಪ್ರವೇಶ ಮಾಡುತ್ತಾರೆ. ರಾಜ್ ಕುಮಾರ್ ಬಗ್ಗೆ ಅವರ ಮಡದಿ ಪಾರ್ವತಮ್ಮ, ಸೋದರ ವರದರಾಜ್ ಸೇರಿದಂತೆ ಚಿತ್ರರಂಗದ ಅನೇಕ ಸಮಕಾಲೀನ ಕಲಾವಿದರು ಬಿಡಿಬಿಡಿಯಾಗಿ ‘ರಾಜ್ ಕುಮಾರ್ ಅಂದರೆ ಏನು? ಅವರ ಪ್ರಸ್ತುತತೆ ಎಷ್ಟು?
ಕನ್ನಡ, ಕನ್ನಡತನ ಮತ್ತು ದೊಡ್ಡದಾದ ಸಿನಿ ಪರದೆಯಲ್ಲಿ ಆವರಿಸಿಕೊಂಡು ಆಯಾ ಕಾಲದ ಜನರ ಮನಸ್ಸಿನಲ್ಲಿ ಸ್ಥಾಪಿತವಾದ ರೀತಿ, ಹಾಗೆ ಅವರ ಉದಾತ್ತ ಬದುಕಿನ ಮಗ್ಗುಲುಗಳ ಬಗ್ಗೆ ಸಂದರ್ಭಕ್ಕನುಸಾರವಾಗಿ ಆಡಿರುವ ಅಂತರಂಗದ ಮಾತಿನಲ್ಲಿ ‘ರಾಜ್ ಕುಮಾರ್ ವ್ಯಕ್ತಿತ್ವದ’ ಅನಾವರಣವಾಗುತ್ತದೆ.
‘ಅಂತರಂಗದ ಅಣ್ಣ’ ನಲ್ಲಿ, ರಾಜ್ ಕುಮಾರ್ ಬದುಕಿನುದ್ದಕ್ಕು ಬ್ರಾಹ್ಮಣ್ಯದ ಬೇರುಗಳಿಗೆ ಆಹಾರವಾಗುತ್ತ ಅವುಗಳ ಸೆರಗಿನ ಕೆಂಡದೊಳಗಿಂದ ಬಿಡಿಸಿಕೊಂಡು ಮೇಲೇರಿ ಬಂದ ಬಗೆಯನ್ನು ಪ್ರಜ್ಞಾಪೂರ್ವಕವಾಗಿ ತೆರೆದಿಡುತ್ತದೆ. ರಾಜ್ ಕುಮಾರ್ ಎಂಬ ಕಲಾವಿದನ ಮನಸ್ಸು ಈ ಸಮಾಜದೊಳಗೆ ಅಡಗಿ ಕುಂತ ಬ್ರಾಹ್ಮಣ್ಯದ ಹಕೀಕತ್ತಿಗೆ ಬೇಸತ್ತು ಈ ಬೆಂಗಳೂರು, ಈ ಚಿತ್ರರಂಗದ ಸಹವಾಸವೇ ಬೇಡ ಎಂದು ಹಳ್ಳಿಯತ್ತ ಮುಖ ಮಾಡುವ ಇಂಗಿತವೂ ವ್ಯಕ್ತವಾಗುತ್ತದೆ. ಈ ಇಂಗಿತವು ನಮ್ಮ ಸಮಾಜದೊಳಗಿನ ಈ ಜಾತಿ ವ್ಯವಸ್ಥೆಯ ಕರಾಳತೆಯ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಅವು ಉದಯಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್, ಪ್ರಿಂಟ್ ಮೀಡಿಯಾಗಳು, ಇವೆಲ್ಲವನ್ನು ಹಿಡಿತದಲ್ಲಿಟ್ಟುಕೊಂಡ ಪಂಡಿತೋತ್ತಮರ ರೂಪದಲ್ಲಿ ಎದುರಾದ ಬಗೆಯನ್ನು ಲೇಖಕ ಪ್ರಕಾಶ್ ರಾಜ್ ಮೇಹು ಗಂಭೀರವಾಗಿ ಅಷ್ಟೇ ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಇದೆಲ್ಲವನ್ನು ‘ರಾಜ್ ಕುಮಾರ್ ಎಂಬ ವ್ಯಕ್ತಿತ್ವ’ ಯಾರ ಮನಸ್ಸಿಗೂ ನೋವಾಗದ ಹಾಗೆ ಪರಿಸ್ಥಿತಿಯನ್ನು ನಿಭಾಯಿಸಿ ತನ್ನ ಸೆಳೆತಕ್ಕೆ ಒಳಗುಮಾಡಿಕೊಂಡ ಒಂದು ಪ್ರಬುದ್ಧ ನಡೆಯನ್ನು ಗ್ರಹಿಸಿರುವುದು ‘ಅಂತರಂಗದ ಅಣ್ಣ’ನ ಬಹುಮುಖ್ಯ ವಿಚಾರಗಳು ಹಾಗು ಇದುವರೆಗೂ ಸುಳ್ಳುಗಳನ್ನೆ ಸತ್ಯಗಳೆಂದು ಬಿಂಬಿಸಿದ ವ್ಯವಸ್ಥಿತ ಮನಸ್ಸುಗಳಿಗೆ ಉತ್ತರ ರೂಪದಲ್ಲಿ ಕೆಲವು ಸತ್ಯಗಳ ಪುರಾವೆಯನ್ನು ಈ ಕೃತಿ ಪ್ರಕಟಿಸುತ್ತದೆ.
ರಾಜ್ ಕುಮಾರ್ ಇದುವರೆವಿಗೂ ನಟಿಸಿರುವ ಚಿತ್ರಗಳ ಮಾನವೀಯ ಮೌಲ್ಯಗಳತ್ತಲೂ ಗಮನಹರಿಸಿರುವ ಲೇಖಕರು ಆ ಕಾಲಕ್ಕೆ ಶಿವಾಜಿ ಗಣೇಶನ್, ಎನ್.ಟಿ.ಆರ್, ಎಂ.ಜಿ.ಆರ್, ನಾಗೇಶ್ವರರಾವ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್, ಸಾಯಿರ ಬಾನು, ವಿನೋದ್ ಖನ್ನಾ, ಕಮಲ್ ಹಾಸನ್, ರಜನಿಕಾಂತ್ ತರಹದವರೆಲ್ಲ ರಾಜ್ ಕುಮಾರ್ ವ್ಯಕ್ತಿತ್ವ ಕಂಡು ಮೂಖ ವಿಸ್ಮಿತರಾಗುವ ಭಾವುಕ ವಿಚಾರವೂ ಅತ್ಯಂತ ಪ್ರಭಾವಶಾಲಿಯಾಗಿದೆ. ಈ ಒಂದು ಅಂಶ ರಾಜ್ ಕುಮಾರ್ ಎಂಬ ವ್ಯಕ್ತಿ ಮತ್ತು ವ್ಯಕ್ತಿತ್ವ ಕರ್ನಾಟಕ ಮಾತ್ರವಲ್ಲ ಭಾರತದ ಮೇರು ಶಿಖರವಾಗಿ ಗುರುತಾಗುವ ಗುರುತರ ಅಂಶವನ್ನು ದಾಖಲೆ ಸಹಿತ ತೆರೆದಿಡುವ ‘ಅಂತರಂಗದ ಅಣ್ಣ’ ಎಲ್ಲೂ ಕ್ಲೀಷೆ ಎನಿಸದೆ ಓದುಗನ್ನು ಕುತೂಹಲದ ಘಟ್ಟಕ್ಕೆ ಕೊಂಡೊಯ್ಯುತ್ತ ಬೆರಗುಗೊಳಿಸುತ್ತದೆ.
ಹಾಗೆ ‘ಅಂತರಂಗದ ಅಣ್ಣ’ ನೊಳಗೆ ಒಂದು ನಿಗೂಢ ಪ್ರಶ್ನೆ ಇದೆ. ಅದು ಲೀಲಾವತಿ ಮಗ ವಿನೋದನ ಹುಟ್ಟಿನ ಪ್ರಶ್ನೆ. ಇದೇ ಈ ಕೃತಿಯ ಅಂತರಂಗ. ಲೇಖಕ ಪ್ರಕಾಶ್ ರಾಜ್ ಮೇಹು ಇದನ್ನು ಎಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ ಎಂದರೆ, ಬಹುಶಃ ಈ ವಿಚಾರ ರಾಜ್ ಕುಮಾರ್, ಪಾರ್ವತಮ್ಮ, ವರದರಾಜು, ವಜ್ರಮುನಿ, ಬಾಲಕೃಷ್ಣ, ನರಸಿಂಹರಾಜು, ರವಿ ಬೆಳಗೆರೆ ಇದ್ದಾಗಲೇ ಚರ್ಚಿತವಾಗಿದ್ದರೆ ಸತ್ಯಕ್ಕೆ ಮತ್ತಷ್ಟು ಮೆರುಗು ಇರುತ್ತಿತ್ತು ಅನ್ನುವಷ್ಟು ಇಲ್ಲಿ ಗಂಭೀರವಾಗಿ ನಿರೂಪಿತಗೊಂಡಿದೆ. ಈ ನಿರೂಪಣೆಗೆ ಮೂಲ ಕಾರಣ ರವಿ ಬೆಳಗೆರೆ ಬರೆದ ‘ರಾಜ್ ಲೀಲಾ ವಿನೋದ’ ಕೃತಿ. ಈ ಕೃತಿಯ ಒಂದೊಂದು ಮಗ್ಗುಲನ್ನು ಪ್ರಕಾಶ್ ರಾಜ್ ಮೇಹು ‘ಅಂತರಂಗದ ಅಣ್ಣ’ನಲ್ಲಿ ನಿಕಷಕ್ಕೆ ಒಡ್ಡಿ ರಾಜ್-ಲೀಲಾ ವಿನೋದವೇ ಸುಳ್ಳು ಅದು ‘ವಿನೋದವಲ್ಲ’ವೆಂದು ವಿಶ್ಲೇಷಿಸಿದ್ದಾರೆ.
ಲೀಲಾವತಿ ಕನ್ನಡ ಸಿನಿಮಾ ಲೋಕದ ಪ್ರಬುದ್ಧ ನಟಿ, ಸಂಯಮಿ, ಮಾತೃ ಹೃದಯಿ, ಬದುಕಿನಲ್ಲಿ ಪ್ರಬುದ್ದರು ಹೇಗೆ ಜೀವಿಸಬೇಕೋ ಹಾಗೆ ಜೀವಿಸಿದ ಸಹನಶೀಲೆ! ಇವಿಷ್ಟು ದೂರದ ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಪ್ರಕಾಶ್ ರಾಜ್ ಮೇಹು ‘ಅಂತರಂಗದ ಅಣ್ಣ’ನಲ್ಲಿ ಲೀಲಾವತಿಯವರ ಈ ಗುಣ ಸ್ವಭಾವವನ್ನು ನ್ಯಾಯದ ತಕ್ಕಡಿಗೆ ಹಾಕಿ ತೂಗಿ ನೋಡಿದ್ದಾರೆ.
ನಾನು ಗಮನಿಸಿದಂತೆ ಬೆಳಗೆರೆಯವರ ‘ರಾಜ್ ಲೀಲಾ ವಿನೋದ’ ಕೃತಿ ಹೆಸರಿಗಷ್ಟೆ ಜೀವನ ಚರಿತ್ರೆ. ಆದರೆ ಒಂದು ಜೀವನ ಚರಿತ್ರೆಗೆ ಇರಬೇಕಾದ ಸಮಷ್ಠಿ ಗುಚ್ಛವೇ ಇಲ್ಲದ ಕೃತಿ. ಎಲ್ಲವೂ ಬಿಡಿಬಿಡಿಯಾದ ಟಿಪ್ಪಣಿಗಳು, ಚಿತ್ರಗಳು, ಪತ್ರಗಳು. ಒಂದಷ್ಟು ಕಣ್ಣೀರು; ಹೃದಯ ತುಂಬಿ ಹರಿವ ಪ್ರೀತಿ; ಪ್ರೇಮೋನ್ಮಾದ; ಉದ್ವೇಗ ಸಿಟ್ಟು ಸೆಡವು; ಮಗ ವಿನೋದ, ರಾಜಕುಮಾರ್ ಮಗ ಎಂದು ಲೋಕಕ್ಕೆ ಗಟ್ಟಿಯಾಗಿ ಹೇಳಿ ದಾಖಲು ಮಾಡುವ ಧಾವಂತ ಹಾಗು ತಾನು ವ್ಯವಸ್ಥೆಯ ಆಸೆಗಣ್ಣಿಗೆ ಸಿಲುಕಿ ಶೋಷಣೆಗೆ ಒಳಗಾದ ಅಸಹಾಯಕ ಹೆಣ್ಣು ಎಂದು ತೋರಿರುವ ತವಕ. ಒಬ್ಬ ಪತ್ರಕರ್ತನೆದುರು ಲೀಲಾವತಿಯವರು ತನಗಾದ ನೋವಿನ ಬಗ್ಗೆ ಪರಿಪರಿಯಾಗಿ ನನ್ನ ಮಗ ವಿನೋದನನ್ನು ದೊಡ್ಡೋರು ಯಾವತ್ತಿಗೂ ನನ್ನ ಮಗ ಎಂದು ಹೇಳಲಿಲಲ್ಲವಲ್ಲ ಎಂದು ಹಲುಬಿದ್ದಾರೆ. ಆದರೆ ಪ್ರಕಾಶ್ ರಾಜ್ ಮೇಹು ‘ಅಂತರಂಗದ ಅಣ್ಣ’ ನಲ್ಲಿ ರಾಜ್ ಕುಮಾರ್ ಅಂತರಂಗದೊಳಗಿನ ಸತ್ಯವನ್ನು ಖುದ್ದು ಕಂಡು ಕೇಳಿದ ಸತ್ಯದ ದಾಖಲಾತಿಯನ್ನು ಮಂಡಿಸುವ ಮೂಲಕ ಲೀಲಾವತಿಯವರ ಸುಳ್ಳನ್ನು ಬಹಿರಂಗಗೊಳಿಸಿರುವುದು ಈ ಕೃತಿಯ ಮುಖ್ಯ ಶೋಧ.
ಈ ಶೋಧ, ರಾಜ್ ಕುಮಾರರಿಗೂ ಹದಿನೈದು ವರ್ಷ ಹಿರಿಯರಾದ ರಂಗಕರ್ಮಿ ಮಹಾಲಿಂಗ ಭಾಗವತರ್ ಎಂಬುದು. “ಇಡೀ ಚಿತ್ರರಂಗಕ್ಕೆ ಬಹಿರಂಗವಾಗಿಯೇ ವಿನೋದ್, ಭಾಗವತರ್ ಅವರ ಮಗ ಅನ್ನುವುದು ಗೊತ್ತಿರುತ್ತದೆ. 1980 ರಲ್ಲಿ ಮಹಾಲಿಂಗ ಭಾಗವತರ್ ತೀರಿ ಹೋಗುತ್ತಾರೆ. ತಂದೆ ಸತ್ತಾಗ ವಿನೋದ್ ಗೆ ಹದಿಮೂರು ವರ್ಷ. ಹೀಗಾಗಿ ತನ್ನ ತಂದೆ ಮಹಾಲಿಂಗ ಭಾಗವತರ್ ಅನ್ನೊ ಸತ್ಯ ವಿನೋದ್ ಗೂ ಗೊತ್ತಿದೆ. ಅಮ್ಮ ಮಗ ಇಬ್ಬರು ಸೇರಿಯೇ ನಾಟಕವಾಡುತ್ತಿದ್ದಾರೆ. ರಾಜಕುಮಾರರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಷ್ಟೇ ಅಲ್ಲ, ಮಹಾಲಿಂಗ ಭಾಗವತರರಿಗೂ ದ್ರೋಹ ಬಗೆಯುತ್ತಿದ್ದಾರೆ” ಎಂದು ‘ಅಂತರಂಗದ ಅಣ್ಣ’ ಕೃತಿಯಲ್ಲಿ ಲೇಖಕರು ಕೆಲವು ಖಚಿತ ದಾಖಲೆ ಇಟ್ಟುಕೊಂಡು ವಿಶ್ಲೇಷಿಸಿದ್ದಾರೆ.
ಇಲ್ಲಿನ ಪ್ರಮುಖ ಅಂಶ, ರಾಜ್ ಕುಮಾರರಿಗೂ ಲೇಖಕರಿಗೂ ಒಂದು ಅವಿನಾಭಾವ ಸಂಬಂಧವಿದೆ ಎಂಬುದು ಕೃತಿಯ ಪ್ರತಿ ಪುಟವು ಓದುಗನಿಗೆ ಮನವರಿಕೆ ಮಾಡುತ್ತದೆ. ಈ ಅವಿನಾಭಾವ ಸಂಬಂಧದ ಜೊತೆಗೆ ಲೇಖಕರಿಗೆ ರಾಜ್ ಕುಮಾರ್ ಅವರ ವೈಯಕ್ತಿಕ ಜೀವನದ ಒಂದು ಅನುಮಾನಿತ ವಿಚಾರದ ಬಗ್ಗೆ ಬಹಳ ಕುತೂಹಲವಿರುತ್ತದೆ. ಆ ಕುತೂಹಲವು ಲೇಖಕರಿಗೆ ಎಲ್ಲವನ್ನು ಒಳಗಣ್ಣಿನಿಂದ ನೋಡುವಂತೆ ಮಾಡುತ್ತದೆ. ಎಷ್ಟೋ ಸಲ ತಮ್ಮ ಒಳಗಿನ ಅನುಮಾನದ ಕುತೂಹಲಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಪಟ್ಟರು ಸಾಧ್ಯವಾಗದೆ ಅದಕ್ಕೊಂದು ಸುಸಂದರ್ಭ ಒದಗಿ ಬರುತ್ತದೆ. ಅಂಥ ಸುಸಂದರ್ಭದಲ್ಲಿ ಲೀಲಾವತಿ ಜೊತೆಗಿನ ಸಂಬಂಧ, ವಿನೋದ್ ತಮ್ಮ ಮಗನೇ ಎಂಬ ಪ್ರಶ್ನೆಯೇ ಆಗಿರುತ್ತದೆ. ಲೇಖಕರ ಈ ಅನಿರೀಕ್ಷಿತ ಪ್ರಶ್ನೆಗೆ ವಿಚಲಿತರಾಗದ ರಾಜ್ ಕುಮಾರ್ “ಅವರು ಹಾಗೆ ಹೇಳಿಕೊಳ್ಳುವುದರಿಂದ ಅವರಿಗೋ, ಅವರ ಮಗುವಿಗೋ ಒಳ್ಳೆದಾಗೋದಾದ್ರೆ ನಾನ್ಯಾಕೆ ವಿಲ್ಲನ್ ಆಗ್ಲಿ?” ಎಂಬ ಖಚಿತ ಉತ್ತರ ಥಟ್ಟನೆ ಬರುತ್ತದೆ. ಈ ಉತ್ತರದಿಂದ ಈಗಾಗಲೇ ಅವರ ಬಗ್ಗೆ ಇರುವ ಎಲ್ಲ ಅನುಮಾನಗಳಿಗೂ ‘ಅಂತರಂಗದ ಅಣ್ಣ’ ಕೃತಿಯು ಒಂದು ವೇದಿಕೆಯಾಗಿ, ಆ ವೇದಿಕೆ ಮೇಲೆ ಅಣ್ಣಾವ್ರ ಸಶಕ್ತ ಧ್ವನಿ ಸ್ಪಷ್ಟಪಡಿಸುತ್ತದೆ.
ಹಾಗೆ, ಲೀಲಾವತಿಯವರು ನಾಲ್ಕು ದಶಕಗಳು ಉರುಳಿದರೂ, ರಾಜ್ ಇದ್ದಾಗಲು ಹೇಳದ ತನ್ನ ಜೀವನಗಾಥೆಯನ್ನು ರಾಜ್ ಮರಣಿಸಿದ ಸುಮಾರು ಹನ್ನೊಂದು ವರ್ಷಗಳ ನಂತರ ಹೇಳುವ ಹಕೀಕತ್ತು ಏಕೆ ಬಂತು? ರಾಜ್ ಕುಮಾರ್ ಇದ್ದಾಗಲೆ ಬಹಿರಂಗ ಪಡಿಸಿದ್ದರೆ ನ್ಯಾಯ ಸಿಗುತ್ತಿತ್ತೋ ಏನೋ? ಆದರೆ ಅವರು ಇಲ್ಲದ ಘಳಿಗೆಯಲ್ಲಿ ಯಥಾವತ್ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರನ್ನು ಅವರ ವ್ಯಕ್ತಿತ್ವವನ್ನು ತೇಜೋವಧೆ ಮಾಡುತ್ತಿರುವುದು ಲೀಲಾವತಿಯವರಿಗೆ ಸರಿ ಅನ್ನಿಸುತ್ತಿದೆಯೇ? ಅವರು ಅದನ್ನು ಪ್ರಕಟಪಡಿಸಿರುವ ಸಮಯ ಎಂಥದ್ದು? ಅಥವಾ ಈ ಹಿಂದೆ ರಾಜ್ ಕುಮಾರ್ ವ್ಯಕ್ತಿತ್ವಕ್ಕೆ ಧಕ್ಕೆ ತರಲು ‘ಜಾತಿಜನ’ ಮಾಡಿದ ಕುಟಿಲೋಪಾಯದ ಮುಂದುವರಿದ ಭಾಗವಾಗಿ ಲೀಲಾವತಿಯವರ ಈ ನಡೆಯ ಹಿಂದೆ ಬ್ರಾಹ್ಮಣ್ಯದ ಬೇರುಗಳೇನಾದರು ಇವೆಯೇ? ಇವೆಲ್ಲ ಪ್ರಶ್ನೆಗಳನ್ನು ಪ್ರಕಾಶ್ ರಾಜ್ ಮೇಹು ಅವರ ‘ಅಂತರಂಗದ ಅಣ್ಣ’ ಕೃತಿಯು ಹುಟ್ಟು ಹಾಕುತ್ತದೆ.
- ಎಂ.ಜವರಾಜ್



