ಗೌರಿ ಲಂಕೇಶ್ ಹತ್ಯಾ ವಿಚಾರಣೆಯ ANNUAL UPDATE

3 years ago

#ANNUALUPDATE #GauriLankesh #murder #trial #shivasundar

2022 ಜುಲೈ- 2023 ಸೆಪ್ಟೆಂಬರ್

ಆತ್ಮೀಯರೇ , ನಾಳೆಗೆ ಗೌರಿ ಹತ್ಯೆಯಾಗಿ ಆರು ವರ್ಷಗಳು. ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಹತ್ಯಾ ವಿಚಾರಣೆಯ 2022-23 ರ ಅವಧಿಯ ANNUAL UPDATE ಅನ್ನು ಕೆಳಗೆ ನೀಡಿದ್ದೇನೆ. ಆಸಕ್ತರು ಈ ವರದಿಯನ್ನು ಓದುವುದರ ಜೊತೆಗೆ ಗೌರಿ ಹತ್ಯಾ ವಿಚಾರಣೆಗೆ ವಿಶೇಷ ಕೋರ್ಟ್ ಒಂದನ್ನು ಸ್ಥಾಪಿಸಲು ಆಗ್ರಹಿಸಬೇಕೆಂದು ಕೋರುತ್ತೇನೆ.

ಗೌರಿ ಹತ್ಯಾ ಪ್ರಕರಣವು ತಡವಾಗುತ್ತಿರುವ ಬಗ್ಗೆ ಸಾರ್ವಜನಿಕ ಒತ್ತಡ ಹಾಗೂ ಕೋರ್ಟುಗಳ ಮಧ್ಯಪ್ರವೇಶಗಳ ಪರಿಣಾಮವಾಗಿ ಆರೋಪಿಗಳ ವಿದ್ಯುಕ್ತ ವಿಚಾರಣೆಯು 2022ರ ಜುಲೈನಲ್ಲಿ ಆರಂಭವಾಗಿದ್ದು ತಮಗೆ ನೆನಪಿನಲ್ಲಿ ಇರಬಹುದು.

ಗೌರಿ ಹತ್ಯಾ ಪ್ರಕರಣದಲ್ಲಿ 18 ಆರೋಪಿಗಳಿದ್ದಾರೆ. ಅವರಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ವಿಕಾಸ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಮೇಲೆ ಕೊಲೆ, ಸಂಘಟಿತ ಸಂಚು, ಇತ್ಯಾದಿಗಳ ಸೆಕ್ಷನ್ 302, 120 (ಬಿ ), ಇತ್ಯಾದಿಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ ಕಲಮುಗಳು ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ ( KOCCA) ಅಡಿಯಲ್ಲಿ ಆರೋಪಿಗಳನ್ನು ಹೊರಿಸಲಾಗಿದೆ.

ಇದಕ್ಕೆ ಪೂರಕವಾಗಿ ಪೊಲೀಸರು 400ಕ್ಕೂ ಹೆಚ್ಚು ಸಾಕ್ಷಿಗಳನ್ನೂ ಹಾಗೂ 1000ಕ್ಕೂ ಹೆಚ್ಚು ಪುರಾವೆಗಳನ್ನು ದಾಖಲಿಸಿರುವ ಸುಮಾರು 10 ಸಾವಿರ ಪುಟಕ್ಕೂ ಹೆಚ್ಚಿನ ಬೃಹತ್ ಚಾರ್ಜ್ ಶೀಟ್ ಅನ್ನು 2018ರ ನವಂಬರ್ ನಲ್ಲೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೂ ವಿಚಾರಣೆ ಪ್ರಾರಂಭವಾಗಲು ಐದು ವರ್ಷಗಳೇ ಬೇಕಾಯಿತು. ಅದಕ್ಕೆ ಆರೋಪಿ ಪರ ವಕೀಲರು ವಿನಾಕಾರಣ ವಿಳಂಬ ಮಾಡುತ್ತಿದ್ದದ್ದು ಒಂದು ಕಾರಣ ಎಂಬುದು ಪ್ರಾಸಿಕ್ಯೂಷನ್ ಆರೋಪ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಕೋರ್ಟ್ ಹಾಲ್ 1 ರಲ್ಲಿ ಸಿಟಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2022ರ ಜುಲೈನಿಂದ ವಿಚಾರಣೆಯು ನಡೆಯುತ್ತಿದೆ. ಪ್ರತಿ ತಿಂಗಳಲ್ಲಿ ಮೊದಲ ಅಥವಾ ಎರಡನೇ ವಾರದ ಐದು ದಿನಗಳಲ್ಲಿ ಗೌರಿ ಹತ್ಯಾ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ನಡೆಸುತ್ತಿದೆ.

ಪ್ರಾಸಿಕ್ಯೂಷನ್ ಪರವಾಗಿ 2018 ರಿಂದಲೂ ಪ್ರಖ್ಯಾತ ಜನಪರ ವಕೀಲರಾದ ಬಾಲನ್ ಅವರೇ ಕೇಸು ನಡೆಸುತ್ತಿದ್ದಾರೆ. ಆರೋಪಿಗಳ ಪರವಾಗಿ ಮಡಿಕೇರಿಯ ಕೆ. ಎಂ.ಕೃಷ್ಣಮೂರ್ತಿಯವರು ನಾಯಕತ್ವ ವಹಿಸಿದ್ದು ಅವರಿಗೆ ಏಳೆಂಟು ಹಿರಿಯ ಮತ್ತು ಕಿರಿಯ ವಕೀಲರು ಸಾಥ್ ನೀಡುತ್ತಿದ್ದಾರೆ.

ಕಳೆದ ಫೆಬ್ರವರಿಯಿಂದ ತನಿಖಾಧಿಕಾರಿಗಳ ಮತ್ತು ಪ್ರಾಸಿಕ್ಯೂಷನ್ನಿನ ವಿಶೇಷ ಮನವಿಯ ಮೇರೆಗೆ ಸಾಕ್ಷಿಗಳ ವಿಚಾರಣೆಯು ಬಹಿರಂಗವಾಗಿ ನಡೆಯುತ್ತಿಲ್ಲ. ಬದಲಿಗೆ in-camera ನಡೆಯುತ್ತಿದೆ.

ಬಹಿರಂಗ ಕೋರ್ಟಿನಲ್ಲಿ ವಿಚಾರಣೆಯು ನಡೆಯುವ ವೇಳೆಯಲ್ಲಿ ಆರೋಪಿಗಳ ಪರವಾಗಿ ಸಂಬಂಧಪಡದವರೆಲ್ಲಾ ನ್ಯಾಯಾಲಯದಲ್ಲಿ ತುಂಬಿಕೊಂಡು ಪ್ರಾಸಿಕ್ಯೂಷನ್ ನಡಾವಳಿಗೆ ಅಡ್ಡಿಯುಂಟುಮಾಡುತ್ತಿದ್ದರು ಎಂಬುದು in-camera ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ಕೊಟ್ಟ ಕಾರಣ.

2022 ರ ಜುಲೈ ನಿಂದ 2023ರ ಆಗಸ್ಟ್ ವರೆಗೆ 83 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 300 ಕ್ಕೂ ಹೆಚ್ಚು ಪುರಾವೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ದಾಖಲೀಕರಿಸಲಾಗಿದೆ.

  • ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ಬದಲಾಗಿದ್ದಾರೆ.
  • ಈ ಅವಧಿಯಲ್ಲಿ ಆರೋಪಿ ಮೋಹನ್ ಜಾಮೀನು ಪಡೆಯಲು ಸೆಷನ್ಸ್ ನ್ಯಾಯಾಲಯದಿಂದ ಹಿಡಿದು, ಸುಪ್ರೀಂ ವರಗೆ ಪ್ರಯತ್ನಿಸಿದರೂ. ಆದರೆ ಎಲ್ಲಾ ನ್ಯಾಯಾಲಯಗಳಲ್ಲೂ ಜಾಮೀನು ನಿರಾಕರಣೆಯಾಗಿದೆ.
  • ಕಳೆದ ತಿಂಗಳು ಆರೋಪಿ ನವೀನ ಕುಮಾರ್ ಮತ್ತು ಆರೋಪಿ ಸುರೇಶ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಪ್ರಾಸಿಕ್ಯೂಷನ್ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದೆ.
  • ಈ ಮಧ್ಯೆ ವಿಚಾರಣೆಗೆ ಒಳಪಟ್ಟ 83 ಸಾಕ್ಷಿಗಳಲ್ಲಿ ಒಬ್ಬ ಸಾಕ್ಷಿ (ಆರೋಪಿಗಳ ಸಂಘಟನೆಗೆ ಸಂಬಂಧಪಟ್ಟವ) ಉಲ್ಟಾ ಹೊಡೆದಿದ್ದಾರೆ.

ಇನ್ನಿಬ್ಬರು ಸಾಕ್ಷಿಗಳು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸಿನಲ್ಲಿ ಗುರುತು ಹಿಡಿಯುವಲ್ಲಿ ಮತ್ತು ಕೆಲವು ದಾಖಲೆಗಳನ್ನು ಧೃಢೀಕರಿಸುವಲ್ಲಿ ವಿಫಲರಾಗಿದ್ದಾರೆ.

ಉಳಿದಂತೆ ಪ್ರಾಸಿಕ್ಯೂಷನ್ ಯೋಜನಾಬದ್ಧವಾಗಿ ಕೇಸನ್ನು ಮುನ್ನಡೆಸುತ್ತಿದೆ.

  • ಆರೋಪಿಗಳ ಪರ ವಕೀಲರು ಪ್ರಧಾನವಾಗಿ ತನಿಖಾಧಿಕಾರಿಗಳು ನಿರ್ದಿಷ್ಟ ಪ್ರಕ್ರಿಯೆಗಳನ್ನು ಪಾಲಿಸುವಾಗ ಮಾಡಿರಬಹುದಾದ ಲೋಪಗಳನ್ನು ಆಧರಿಸಿ, ಸಾಕ್ಷಿಗಳು ದಾಖಲಿಸಿದ ಹೇಳಿಕೆಯಲ್ಲಿ ಇರಬಹುದಾದ ಸಣ್ಣಪುಟ್ಟ ತಪ್ಪುಗಳು, ಸಾಕ್ಷಿಗಳು ನಿಖರವಾದ ವಿವರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಇರುವ, ಒಂದಿಬ್ಬರು ಸಾಕ್ಷಿಗಳು ಆರೋಪಿಗಳನ್ನು ಸರಿಯಾಗಿ ಗುರುತಿಸದೆ ಇರುವ ಲೋಪಗಳ ಮೇಲೆ ಈವರೆಗೆ ತಮ್ಮ ಪಾಟಿ ಸವಾಲುಗಳನ್ನು ಪ್ರಧಾನವಾಗಿ ಫೋಕಸ್ ಮಾಡಿದ್ದಾರೆ.
  • ವರ್ಷಗಳು ಕಳೆದಂತೆ ನಿಖರ ನೆನಪುಗಳು ಅಳಿಸಿಹೋಗುತ್ತವೆ.
  • ಹಾಗೆಯೇ ಸಾಕ್ಷಿಗಳು ಕೆಲವೊಮ್ಮೆ ಬಾಹ್ಯ ಒತ್ತಡಕ್ಕೆ ಪಕ್ಕಾಗಿ ಉಲ್ಟಾ ಹೊಡೆಯಲು ಪ್ರಾರಂಭಿಸುತ್ತಾರೆ.
  • ಅಲ್ಲದೆ ಈಗಾಗಲೇ ಆರೋಪಿಗಳು ಸರಾಸರಿ ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.
  • ವಿಚಾರಣೆ ಅವಧಿಯುದ್ದಕ್ಕೂ ಜಾಮೀನು ನಿರಾಕರಿಸುವುದು ನ್ಯಾಯ ಸಂಹಿತೆಗೆ ವಿರುದ್ಧವಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ಮುಂದಿನ ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಲು ಅನುಕೂಲವಾಗುವಂತೆ ಗೌರಿಹತ್ಯಾ ಪ್ರಕರಣದ ವಿಚಾರಣೆಗೆ ಒಂದು ವಿಶೇಷ ಕೋರ್ಟನ್ನು ರಚಿಸಲು ಗೌರಿಯ ಭಾವಬಂಧುಗಳೆಲ್ಲಾ ಸರ್ಕಾರವನ್ನು ಆಗ್ರಹಿಸಬೇಕಿದೆ.

ಗೌರಿ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟ ಇನ್ನಿತರ ಮೂಲಭೂತ ವಿವರಗಳು ಕೆಳಗಿವೆ:

ಈಗ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿರುವವರು

  1. ಪ್ರಧಾನ ಆರೋಪಿ ತಂಡದ ನಾಯಕ ಅಮೋಲ್ ಕಾಳೆ
  2. ಗೌರಿಯ ಮೇಲೆ ಗುಂಡುಹಾರಿಸಿದ ಪರಶುರಾಮ್ ವಾಘಮೋರೆ
  3. ಆತನನ್ನು ಬೈಕಿನಲ್ಲಿ ಗೌರಿ ಮನೆಗೆ ಕರೆದುಕೊಂಡು ಹೋದ ಗಣೇಶ್ ಮಿಸ್ಕಿನ್
  4. ಕೆಲಸ ಮುಗಿದ ಮೇಲೆ ಮತ್ತೊಂದು ವಾಹನದಲ್ಲಿ ಅವರನ್ನು ಶೆಲ್ಟರ್ ಗೆ ಕರೆದುಕೊಂಡು ಹೋಗಲು ಕಾಯುತ್ತಿದ್ದ ಅಮಿತ್ ಬಡ್ಡಿ
  5. ಸಹ ಸಂಚುಗಾರ ಅಮಿತ್ ದೇಗ್ವೇಕರ್
  6. ಬೆಳಗಾವಿಯಲ್ಲಿ ಗೌರಿ ಹತ್ಯೆಗಾಗಿ ಆರೋಪಿಗಳಿಗೆ ಬಂದೂಕು ತರಬೇತಿ ಆಯೋಜನೆ ಮಾಡಿದ್ದ ಭರತ್ ಕುರ್ಣೇ
  7. ಬೆಂಗಳೂರಿನಲ್ಲಿ ಆರೋಪಿಗಳಿಗೆ ವಾಸ್ತವ್ಯ ಏರ್ಪಡಿಸಿದ್ದ ಸುರೇಶ ಎಚ್.ಎಲ್
  8. ಬಂದೂಕು ತರಬೇತಿಗೆ ಸಾಧನಗಳನ್ನು ಒದಗಿಸಿದ್ದ ಮಡಿಕೇರಿಯ ರಾಜೇಶ್ ಬಂಗೇರ
  9. ಹತ್ಯೆಯ ಮೊದಲು ನಂತರ ಶಸ್ತ್ರ ಹಾಗೂ ವಾಹನ ಸರಬರಾಜು ಮತ್ತು ಅದರ ನಾಶಕ್ಕೆ ಕಾರಣರಾದ ಆರೋಪಿಗಳಾದ ಮಹರಾಷ್ಟ್ರದ ಸುಧನ್ವ ಗೊಂದಲೇಕರ್
  10. ಸಹ ಸಂಚುಕೋರ ಶರದ್ ಕಳಸ್ಕರ್
  11. ವೈದ್ಯನ ಹೆಸರಲ್ಲಿ ಆರೋಪಿಗಳಿಗೆ ಬೆಂಗಳೂರಿನಲ್ಲಿ ಮತ್ತೊಂದು ವಾಸ್ತವ್ಯ ಏರ್ಪಡಿಸಿದ ಸುಳ್ಯದ ಮೋಹನ್ ನಾಯಕ್
  12. ವಾಹನ ವ್ಯವಸ್ಥೆ ಮಾಡಿದ ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ
  13. ಸಹ ಆರೋಪಿ-ಸಂಘಟಕ ಸುಜಿತ್ ಕುಮಾರ್
  14. ಸಹ ಆರೋಪಿ, ಸಂಘಟಕ ಮನೋಹರ್ ಯಡವೆ
  15. ಮಹಾರಾಷ್ಟ್ರದ ಸಹ ಆರೋಪಿ ಶ್ರೀಕಾಂತ್ ಪಂಗಾರ್ಕರ್
  16. ಮಂಡ್ಯದ ನವೀನ ಕುಮಾರ್ ( ಈತ ಭಗವಾನ್ ಹತ್ಯಾ ಸಂಚಿನ ಪ್ರಕರಣದಲ್ಲೂ ಆರೋಪಿ )
  17. ಸಹ ಆರೋಪಿ ಮಹಾರಾಷ್ಟ್ರದ ಹೃಷಿಕೇಶ್ ದೇವಡೇಕರ್.
    ಇವರಲ್ಲಿ ತಂಡದ ನಾಯಕನಾದ ಅಮೋಲ್ ಕಾಳೆಯನ್ನೂ ಒಳಗೊಂಡಂತೆ 7 ಆರೋಪಿಗಳು ಮಹಾರಾಷ್ಟ್ರದವರು. ಉಳಿದವರು ಕರ್ನಾಟಕದವರು.

ಎಲ್ಲಾ ಆರೋಪಿಗಳಿಗೂ ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಸಂಸ್ಥೆಗಳೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಬಂಧಗಳಿವೆ ಎಂಬುದು ಪ್ರಾಸಿಕ್ಯೂಷನ್ ಪತ್ತೆ ಹಚ್ಚಿರುವ ಸಂಗತಿ.

ಪ್ರಾಸಿಕ್ಯೂಷನ್ ಪ್ರಕಾರ ಸನಾತನ ಸಂಸ್ಥೆಯ ಸಿದ್ಧಾಂತ ಮತ್ತು ಗುರಿಗಳು ಈ ಆರೋಪಿಗಳನ್ನು ಹತ್ಯೆ ಮಾಡಲು ಪ್ರೇರೇಪಿಸಿದೆ. ಸನಾತನ ಸಂಸ್ಥೆಯ ಮಾರ್ಗ ದರ್ಶಕ ಗ್ರಂಥವಾಗಿರುವ “ಕ್ಷಾತ್ರ ಧಾರ್ಮ ಸಾಧನ” ದ ಪ್ರಕಾರ ಹಿಂದೂ/ ಸನಾತನ ಧರ್ಮಕ್ಕೆ ಕಂಟಕಪ್ರಾಯವಾಗಿರುವ ದುರ್ಜನರನ್ನು ಹತ್ಯೆ ಮಾಡುವ ಮೂಲಕ ಸನಾತನಕ್ಕೆ ಇರುವ ಅಡ್ಡಿಯನ್ನು ನಿವಾರಿಸಿಕೊಳ್ಳಬೇಕು. ಅದರಲ್ಲೂ ಸ್ವಧರ್ಮೀಯರಲ್ಲೇ ಇರುವ ದ್ರೋಹಿಗಳನ್ನು ಶಿಕ್ಷಿಸಬೇಕು. ಈ ಸಿದ್ಧಾಂತವೇ ಆರೋಪಿಗಳಿಗೆ ಗೌರಿ ಹತ್ಯೆ ಕೊಲೆಗೆ ಪ್ರೇರಣೆ ನೀಡಿತು. ಹಾಗೂ ಅವರು ಒಂದು ಸಿಂಡಿಕೇಟ್ ರಚಿಸಿಕೊಂಡು ಸಂಚು ಮಾಡಿ ತರಬೇತಿ ಪಡೆದುಕೊಂಡು ಒಂದು ಸಂಚಿನ ಪ್ರಕಾರ ಗೌರಿ ಹತ್ಯೆ ಮಾಡಿದರು. ಹಾಗೂ ಈ ಅಪರಾಧದಲ್ಲಿ ಒಬ್ಬೊಬ್ಬರದ್ದು ಒಂದೊಂದು ನಿರ್ದಿಷ್ಟ ಪಾತ್ರವಿದೆ ಎಂಬುದು ಪ್ರಾಸಿಕ್ಯೂಷನ್ ಆರೋಪ .
ಈ ಆರೋಪಗಳನ್ನು ಸಾಬೀತು ಮಾಡಲು ಹಿಂದಿನ ಸಿದ್ಧರಾಮಯ್ಯನವರ ಸರ್ಕಾರವು ಪ್ರಖ್ಯಾತ ಜನಪರ ವಕೀಲ ಬಾಲನ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿದೆ. ಬಿಜೆಪಿ ಸರ್ಕಾರವು ಅವರನ್ನು ಈವರೆಗೆ ಬದಲಾಯಿಸಲಿಲ್ಲ. ಈಗಲೂ ಅವರೇ ಪಬ್ಲಿಕ್ ಪ್ರಾಸಿಕ್ಯೂಟರ್.

ಇದೆ ತಂಡದವರೇ ಮಹಾರಾಷ್ಟ್ರದ ದಾಬೋಲ್ಕರ್, ಪನ್ಸಾರೆ ಹಾಗೂ ಕರ್ನಾಟಕದ ಪ್ರೊ. ಕಲ್ಬುರ್ಗಿಯವರ ಹತ್ಯೆಯಲ್ಲೂ ಆರೋಪಿಗಳಾಗಿದ್ದಾರೆ. ಹೀಗಾಗಿ ಇವರಲ್ಲಿ ಕೆಲವರು ಮಹಾರಾಷ್ಟ್ರದ ಜೈಲಿನಲ್ಲಿದ್ದಾರೆ. ಉಳಿದವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸಿನ ಮೂಲಕ ಹಾಜರು ಪಡಿಸಲಾಗುತ್ತಿದೆ.

ಈ ಅಪರಾಧದಲ್ಲಿ ಮೊದಲು 2018ರ ಫೆಬ್ರವರಿಯಲ್ಲಿ ಬಂಧನಕ್ಕೊಳಗಾದ ನವೀನ ಕುಮಾರ್ ಇಂದ ಹಿಡಿದು ಅದೇ ವರ್ಷ ಬೇರೆಬೇರೆ ಸಮಯದಲ್ಲಿ ಬಂಧನಕ್ಕೊಳಗಾದ ಎಲ್ಲಾ ಆರೋಪಿಗಳು (2020ರಲ್ಲಿ ಬಂಧನಕ್ಕೊಳಗಾದ ಹೃಷಿಕೇಶ್ ದೇವೇಡೆಕರ್ ಅವರನ್ನು ಬಿಟ್ಟು ) 2018ರಿಂದಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ.

ನಿಮ್ಮ

  • ಶಿವಸುಂದರ್, ಸಂಸ್ಕೃತಿ ಚಿಂತಕರು
    9448659774

Leave a Reply