ಬಾಗಲಕೋಟೆ: ಇವತ್ತಿನ ದಿನ ತಾಯಂದಿರು ಹಾಗೂ ಸಹೋದರಿಯರು ತಮ್ಮ ತಲೆಯ ಮೇಲೆ ಬಿಂದಿಗೆಳನ್ನು ಹಿಡಿದುಕೊಂಡು ನೀರಿಗಾಗಿ ಜಲಕುಂಬಗಳಿಗೆ ಹಾಗೂ ಬಾವಿಗಳಿಗೆ ಅಲೆದಾಡುವುದು ಈ ಯೋಜನೆಯಿಂದ ತಪ್ಪುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ರಾಜ್ಯದಲ್ಲಿ ಪ್ರತಿಯೊಂದು ಮನೆಗಳಿಗೆ ಜಲ ಜೀವನ ಮಿಷನ್ ಯೋಜನೆಯ ಮುಖಾಂತರ ನೀರು ಒದಗಿಸುವ ಕಾಮಗಾರಿಯ ಭೂಮಿ ಪೂಜೆ ಮಾಡುವ ಶಾಸಕ ಆನಂದ ನ್ಯಾಮಗೌಡ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನೀರು ಸದ್ಬಳಕೆ ದೃಷ್ಟಿಯಿಂದ ಗ್ರಾಮದ 3500 ಅಧಿಕ ಮನೆಗಳಿಗೆ 484.88 ಲಕ್ಷಗಳಲ್ಲಿ ಈ ಯೋಜನೆ ಪ್ರಾರಂಭವಾಗಿದ್ದು, ಗ್ರಾಮದ ಪ್ರತಿ ಮನೆಯ ಮುಂದಿನ ನಳಗಳಿಗೆ ಮೀಟರಗಳನ್ನು ಅಳವಡಿಸಲಾಗುತ್ತದೆ. ಇದರಿಂದ ನೀರನ್ನು ಮಿತವಾಗಿ ಹಾಗೂ ವ್ಯರ್ಥವಾಗದಂತೆ ತಡೆಯುವ ಉದ್ದೇಶ ಈ ಯೋಜನೆ ಹೊಂದಿದೆ ಎಂದರು.
ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಕಾಮಗಾರಿಗೆ ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಬೇಕು ಹಾಗೂ ಕಾಮಗಾರಿ ಮಾಡುವ ಸಂದರ್ಭದಲ್ಲಿ ಹಾನಿಯಾದ ರಸ್ತೆಗಳನ್ನು ಮತ್ತೆ ರೀಪೆರಿ ಮಾಡಿಕೊಡಬೇಕೆಂದು ಸಾರ್ವಜನಿಕರ ಸಮ್ಮುಖದಲ್ಲಿ ಗುತ್ತಿಗೆದಾರನಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಗ್ನಿ, ಗ್ರಾಮ ಪಂಚಾಯತಿ ಸದಸ್ಯರಾದ ಸುಭಾಷ ಪಾಟೋಳಿ, ರಾಜು ಬಂಡಿವಡ್ಡರ, ಅನೀಲ ತಿಕೋಟಾ, ರಾಜು ಭಜಂತ್ರಿ, ಚಂದು ಮಾದರ, ಹಣಮಂತ ಸಂತಿವೂರು ಮತ್ತು ಅಧಿಕಾರಿಗಳಾದ ಆರ್.ವಿ.ನಿಡೋಣಿ, ಗಿರೀಶ ಕಡಕೋಳ, ಸುರೇಶ ಪಂಚಾಳ, ಊರಿನ ಹಿರಿಯರಾದ ಅಭಯಕುಮಾರ ನಾಂದ್ರೇಕರ ಮಹಾದೇವ ಮಾಳಿ, ಜನಕರಾಜ ನಾಂದ್ರೆಕರ, ತುಳಜಪ್ಪ ಬಾಪಕರ, ಶಾಂತು ನ್ಯಾಮಗೌಡ ಹಾಗೂ ಅನೇಕರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ
ಜಲ ಜೀವನ ಮಿಷನ್ ಭೂಮಿ ಪೂಜೆ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಿಬ್ಬಂದಿಯೊಬ್ಬರು ಕಾರ್ಯಕ್ರಮದ ಹಿಂದಿನ ದಿನ ಗ್ರಾಮ ಪಂಚಾಯತಿಗೆ ಆಗಮಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ದೂರವಾಣಿ ಮುಖಾಂತರ ಹೇಳಿದ್ದರು. ಅದರಂತೆ ಎಲ್ಲಾ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಆದರೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಕಾರ್ಯಕ್ರಮಕ್ಕೆ ಭಾಗವಹಿಸಿಲು ಬಂದು, ಕ್ಷಣಮಾತ್ರದಲ್ಲಿ ನಮ್ಮ ಸಂಸದರಿಗೆ ಕಾರ್ಯಕ್ರಮದ ಬಗ್ಗೆ ಆಹ್ವಾನ ನೀಡಿಲ್ಲವೆಂದು ಭೂಮಿ ಪೂಜೆಯಲ್ಲಿ ಭಾಗವಹಿಸದೆ ಹಿಂತಿರುಗಿಸಿ ಹೋದರು.




