ನಮ್ಮದು ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಮಾಧ್ಯಮವನ್ನು ಗುರುತಿಸಲಾಗಿದೆ. ಭಾರತ ದೇಶವನ್ನು ಮತ್ತು ಕರ್ನಾಟಕ ರಾಜ್ಯವನ್ನು ಕಾಡುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿರುವಾಗ ಮಾಧ್ಯಮಗಳ ಕಣ್ಣುಗಳಿಗೆ ಯಾವುದೇ ಗಂಭೀರ ಸಮಸ್ಯೆ ಕಾಣುತ್ತಿಲ್ಲವೇಕೆ?
ಚಿತ್ರನಟಿ ಅಮೂಲ್ಯ ಬಸುರಿಯಾಗಿರುವ ಸುದ್ದಿಯನ್ನು ಇಡೀ ರಾಜ್ಯ ಖುಶಿಪಡುವ ಸುದ್ದಿಯೆಂದು ಬಿತ್ತರಿಸುತ್ತಿರುವುದು, ಸುದ್ದಿ ಮಾಧ್ಯಮಗಳ ಬೌದ್ಧಿಕ ದಾರಿದ್ರ್ಯದ ಸಂಕೇತವಲ್ಲವೇ? ಮಾಧ್ಯಮಗಳ ಸಾಮಾಜಿಕ ಹೊಣೆಗೇಡಿತನವನ್ನು ಚರ್ಚಿಸುವ ಮೂಲಕ ನಡೆತೆಗೆಟ್ಟ ಮಾಧ್ಯಮಗಳನ್ನು ಸರಿದಾರಿಗೆ ತರುವುದು ಹಾಗೂ ಭವಿಷ್ಯತ್ತಿನಲ್ಲಿ ಜವಾಬ್ದಾರಿಯುತ ಪತ್ರಕರ್ತರನ್ನು ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ? ಸಮಾಜವನ್ನು ದಾರಿ ತಪ್ಪಿಸುವ ಮಾಧ್ಯಮಗಳನ್ನು ಪ್ರಜ್ಞಾವಂತರಾದ ನಾವು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡು ನಡೆಯಬೇಕೆ?
ಇವರನ್ನು ಹೀಗೆಯೇ ಬಿಟ್ಟರೆ ನಾಳೆ ದಿನ ಅಮೂಲ್ಯರ ಹೆರಿಗೆಯನ್ನು ಲೈವ್ ತೋರಿಸೋದಕ್ಕು ಕೂಡಾ ಸಿದ್ಧರಾಗುತ್ತಾರೆ. ಹೆರಿಗೆ ಸಮಯದಲ್ಲಿ ಅಮೂಲ್ಯ ಧರಿಸಿದ್ದ ಉಡುಪುಗಳ ಬಣ್ಣ ಅಳತೆ ಮುಂತಾದ ಸಂಗತಿಗಳನ್ನು ವಿವರಿಸುತ್ತಾ, ಹೆರುವಾಗ ಇಡೀ ನಾಡಿಗೆ ಹೆರಿಗೆ ನೋವು ಬಂದಿದೆ ಎಂದೂ… ಹೆತ್ತ ಬಳಿಕ ಇಡೀ ನಾಡು ಮೆಚ್ಚುವಂತೆ ಹಡೆದಳೆಂದೂ ಸುದ್ದಿ ಮಾಡಬಹುದು!
ನಾಚಿಕೆಗೆಟ್ಟವರು... ಸ್ವಲ್ಪವಾದರೂ ಸಿಗ್ಗು ಬೇಡವೇ?
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




