ಠಾಣಾಧಿಕಾರಿಗಳ ಬದಲಾವಣೆಗೆ ಕನಿಷ್ಠ ಎರಡು ವರ್ಷ ನಿಗದಿಪಡಿಸಿ

2 years ago

ರಾಜ್ಯದ ಗೃಹ ಇಲಾಖೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೃತ್ತ ನಿರೀಕ್ಷಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಮಾಡಲು ಒಂದು ವರ್ಷದ ಮಿತಿಯನ್ನು ನಿಗದಿಪಡಿಸಿರುತ್ತಾರೆ. ಇದನ್ನೇ ಮಾನದಂಡವನ್ನಾಗಿಸಿಕೊಂಡು ಪ್ರತಿವರ್ಷವು ವೃತ್ತ ನಿರೀಕ್ಷಕರುಗಳನ್ನು ಠಾಣೆಯಿಂದ ಠಾಣೆಗೆ ವರ್ಗಾವಣೆ ಮಾಡುವ ಪದ್ಧತಿ ಇದೆ.

ಒಬ್ಬ ಅಧಿಕಾರಿ ಒಂದು ಠಾಣೆಗೆ ಬಂದು ತನ್ನ ಸರಹದ್ದನ್ನು ಅರಿತುಕೊಳ್ಳಲು ನಂತರ ಅಲ್ಲಿನ ಚಟುವಟಿಕೆಗಳ ಮಾಹಿತಿ ಪಡೆದು ಕಾನೂನು ಸುವ್ಯವಸ್ಥೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಸಿದ್ಧಪಡಿಸಿಕೊಳ್ಳಲು ಮತ್ತಷ್ಟು ತಿಂಗಳುಗಳು ಬೇಕಾಗುತ್ತದೆ.

ತನ್ನ ಠಾಣೆಯ ಸರಹದ್ದು ಅರಿತು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯೋನ್ಮುಖರಾಗುತ್ತಿದ್ದಂತೆ ಒಂದು ವರ್ಷದ ನೆಪದಲ್ಲಿ ವರ್ಗಾವಣೆ ಮಾಡಿದರೆ ಹೇಗೆ ತಾನೇ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆ. ಆದುದರಿಂದ ಠಾಣಾಧಿಕಾರಿಗಳ ವರ್ಗಾವಣೆಯ ಕಾಲಾವಧಿಯನ್ನು ಕನಿಷ್ಠ ಎರಡರಿಂದ ಮೂರು ವರ್ಷಕ್ಕೆ ಹೆಚ್ಚಿಸಿ.

ಇದರಿಂದ ದಕ್ಷ ಮತ್ತು ಸಮರ್ಥ ಅಧಿಕಾರಿಗಳು ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಿ ತಮ್ಮ ಸರಹದ್ದಿನಲ್ಲಾದರೂ ಮುಗ್ಧ ನಾಗರಿಕಗರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಆರೋಪಗಳು ಬಂದಾಗ ಮತ್ತು ವಿಶೇಷ ಪ್ರಕರಣದ ಸಂದರ್ಭದಲ್ಲಿ ಈ ಕಾಲಮಿತಿಯನ್ನು ಸಡಿಲಗೊಳಿಸಬಹುದು.

ಅದೇ ರೀತಿಯಲ್ಲಿ ನಗರದ ಪೊಲೀಸ್ ಆಯುಕ್ತರು, ಸಹಾಯಕ ಆಯುಕ್ತರು, ಉಪ ಆಯುಕ್ತರು ಮುಂತಾದಂತಹ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳಿಗೂ ಸಹ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಮಯಾವಕಾಶವನ್ನು ಒದಗಿಸಿಕೊಡಬೇಕು. ಪದೇ ಪದೇ ವರ್ಗಾವಣೆಗಳಾಗುತ್ತಿದ್ದರೆ ಅಧಿಕಾರಿಗಳಲ್ಲೂ ದುಡಿಯುವ ಆಸಕ್ತಿ ಇರುವುದಿಲ್ಲ, ಕಾನೂನಿನ ವ್ಯವಸ್ಥೆಯೂ ನಿಯಂತ್ರಣಕ್ಕೆ ಬರುವುದಿಲ್ಲ.

  • ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply