ಎಲ್ಲ ಸಮೀಕ್ಷೆಗಳಲ್ಲೂ ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಅಲೆಯಿದೆ: ಸಿದ್ದರಾಮಯ್ಯ

2 years ago

ಬೆಂಗಳೂರು: ನಾವು ನಡೆಸಿರುವ ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಒಗ್ಗಟ್ಟಾಗಿ ಚುನಾವಣೆ ಮಾಡಿದರೆ ಉತ್ತರ ಕನ್ನಡ ಜಿಲ್ಲೆ ಸೇರಿ ಬೆಳಗಾವಿಯ ಜಿಲ್ಲೆಗಳಿಗೆ ಒಳಪಡುವ ಮೂರೂ ಲೋಕಸಭಾ ಕ್ಷೇತ್ರಗಳಲ್ಲೂ ಖಚಿತವಾಗಿ ಗೆಲುವು ಸಾಧಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಗೃಹಕಚೇರಿಯಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳು ಬೆಳಗಾವಿ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಮತ್ತು ಮಹಿಳೆಯರ ಬದುಕಿನ ಸಂಕಟವನ್ನು ಕಡಿಮೆ ಮಾಡಿವೆ ಎಂದರು.

ಇದಕ್ಕಾಗಿ ಯುವತಿಯರು ಮತ್ತು ಮಹಿಳೆಯರು ಶೇ.80 ರಷ್ಟು ನಮ್ಮ ಪರವಾಗಿ ಇದ್ದಾರೆ ಎನ್ನುವ ಸಕಾರಾತ್ಮಕ ವರದಿ ಸಮೀಕ್ಷೆಗಳಿಂದ ಹೊರ ಬಂದಿವೆ. ನಾವು ಜನರ ಮನೆ ಬಾಗಿಲಿಗೆ ಹೋಗಿ ಪ್ರತೀ ತಿಂಗಳು ಪ್ರತೀ ಕುಟುಂಬಕ್ಕೆ 5-6 ಸಾವಿರ ರೂಪಾಯಿ ಕೊಡುತ್ತಿರುವ ಮತ್ತು ವರ್ಷಕ್ಕೆ 50-60 ಸಾವಿರ ಪ್ರತಿ ಕುಟುಂಬದ ಖಾತೆಗೆ ಜಮೆ ಆಗುತ್ತಿರುವುದನ್ನು ಮನವರಿಕೆ ಮಾಡಿಸಿ, ಜನರ ನಡುವೆ ನಿಲ್ಲಬೇಕು. ಆಗ ನಮ್ಮ ಗೆಲುವು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಶಾಸಕಲಕ್ಷ್ಮಣ್ ಸವದಿ ಮತ್ತು ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ 40ಕ್ಕೂ ಹೆಚ್ಚು ಮಂದಿ ಜಿಲ್ಲಾ ಮುಖಂಡರು ಸಭೆಯಲ್ಲಿ ಹಾಜರಿದ್ದರು.

Leave a Reply