ದೆಹಲಿ: ಮುನ್ಸಿಪಲ್ ಕಾರ್ಪೋರೇಶನ್ ಆಫ್ ಡೆಲ್ಲಿ ( MCD)ಯ ಚುನಾವಣೆ ಮುಗಿದಿದೆ. ಎಂಸಿಡಿಯು ದೆಹಲಿಯ ಸುಮಾರು ಒಂದೂವರೆ ಕೋಟಿ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಕೆಲಸ ಮಾಡುತ್ತದೆ. ದೆಹಲಿಯಲ್ಲಿ ಆಪ್ ಸರಕಾರ ಇದ್ದರೂ ಎಂಸಿಡಿ ಕಳೆದ ೧೫ ವರ್ಷಗಳಿಂದ ಬಿಜೆಪಿಯ ಕೈಯಲ್ಲಿದೆ. ಕಳೆದ ನಾಲ್ಕನೇ ತಾರೀಕಿನಂದು ಎಂಸಿಡಿಯ ೨೫೦ ಕೌನ್ಸಿಲರ್ ಗಳಿಗೆ ಚುನಾವಣೆ ನಡೆಯಿತು. ಮತದಾನ ಶೇಕಡಾ ೫೦ ರಷ್ಟೇ ಇತ್ತು. ದಶಂಬರ ೭ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿಯು ಈ ಚುನಾವಣೆಯನ್ನು ಎಂದಿನಂತೆ ಬಹಳ ಗಂಭೀರವಾಗಿಯೇ ಸ್ವೀಕರಿಸಿದೆ. ಅದರ ಆರು ಮುಖ್ಯಮಂತ್ರಿಗಳು ಮತ್ತು ೧೫ಕ್ಕೂ ಹೆಚ್ಚು ಕೇಂದ್ರ ಮಂತ್ರಿಗಳು ಎಂಸಿಡಿ ಚುನಾವಣೆಗೆ ಕೆಲಸ ಮಾಡಿದರು. ಅವರೆಲ್ಲರೂ ನೀಡಿದ ಒಂದು ಆಶ್ವಾನೆಯೆಂದರೆ ‘ ಈ ಸಲ ಬಿಜೆಪಿ ಗೆದ್ದರೆ ಎಂಸಿಡಿಗೆ ಕೇಂದ್ರ ಸರಕಾರವು ನೇರವಾಗಿ ಹಣಕಾಸಿನ ನೆರವು ನೀಡಲಿದೆ’. ( ಈಗ ಇರುವಂತೆ ದೆಹಲಿ ಸರಕಾರದ ಮೂಲಕ ಅಲ್ಲ).
ಈ ಆಶ್ವಾಸನೆಯು ಅಪ್ರಜಾಸತ್ತಾತ್ಮಕವಾಗಿರುವುದರ ಜೊತೆಗೆ, ಚುನಾಯಿತ ಸರಕಾರವನ್ನು ಪರೋಕ್ಷವಾಗಿ ದುರ್ಬಲಗೊಳಿಸುವ ಪ್ರಯತ್ನ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುವ ವಿಚಾರ. ಎಂಸಿಡಿಯ ಮೇಯರ್ ನ್ನು ನೇರ ಅನುದಾನದ ಮೂಲಕ ಬಲಪಡಿಸಿ, ಅವರನ್ನು ದೆಹಲಿ ಮುಖ್ಯಮಂತ್ರಿಗಳಿಗೆ ಪರ್ಯಾಯವಾಗಿ ಬೆಳೆಸಿ ಮುಖ್ಯಮಂತ್ರಿ ಹುದ್ದೆಯನ್ನೇ ನಿರ್ಜೀವಗೊಳಿಸುವ ಯೋಜನೆಯದು. ಒಂದೆಡೆ ಗವರ್ನರ್, ಇನ್ನೊಂದೆಡೆ ಮೇಯರ್ ಸರಕಾರ ನಡೆಸಿದರೆ ಮುಖ್ಯಮಂತ್ರಿಗೆ ಕೆಲಸವೇನೂ ಇಲ್ಲ.
ಎಕ್ಸಿಟ್ ಪೋಲುಗಳ ಪ್ರಕಾರ ದೆಹಲಿಯ ಮತದಾರರು ಈ ಕುತಂತ್ರದ ವಿರುದ್ಧ ಮತದಾನ ಮಾಡಿದ್ದಾರೆ. ನಾಳೆ ಎಲ್ಲವೂ ಸ್ಪಷ್ಟವಾಗುತ್ತದೆ.




