ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಪ್ರತಿಭಟನೆಗೆ ಮುಂದಾಗಿರುವ ರಸ್ತೆ ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಸಾರಿಗೆ ನೌಕರರ ಸಂಘಗಳ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಮೊದಲ ಹೆಜ್ಜೆಯಾಗಿ ವೇತನ ಪರಿಷ್ಕರಣೆ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಶೇಕಡಾ24ರಷ್ಟು ವೇತನವನ್ನು ಪರಿಷ್ಕರಣೆ ಮಾಡಬೇಕೆಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ. ನಾವು ಶೇ.10ರಿಂದ 12ರಷ್ಟು ವೇತನ ಪರಿಷ್ಕರಣೆಗೆ ಸಮ್ಮತಿಸಿದ್ದೇವೆ. ಅಂತಿಮವಾಗಿ ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಬಿಎಂಟಿಸಿ ಹೊರತುಪಡಿಸಿದರೆ ಯಾವ ನಿಗಮಗಳು ಕೂಡ ಲಾಭದಲ್ಲಿಲ್ಲ. ಆದರೂ ನಾವು ನೌಕರರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರಿಯಾದ ಸಮಯಕ್ಕೆ ವೇತನವನ್ನು ಬಿಡುಗಡೆ ಮಾಡುತ್ತೇವೆ. ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.




