ಸಾಲ ಮಾಡಿಯಾದ್ರೂ ಪ್ರಚಾರ ಮಾಡಲು ಇಳಿದ ಸರ್ಕಾರ: ಕೆಪಿಸಿಸಿ
ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಇಲ್ಲದ ಹಣ ಈಗ ಬಂದ್ದು ಹೇಗೆ
ಮೆಟ್ರೋ ಕಾಮಗಾರಿಗೆ ಅನುಮತಿ ನೀಡುವುದು ಕೇಂದ್ರದ ಜವಾಬ್ದಾರಿ
ಸಂಕಷ್ಟದ ಸಮಯದಲ್ಲಿ ಜಾಹೀರಾತು ಹೆಸರಿನಲ್ಲಿ ದುಂದು ವೆಚ್ಚಕ್ಕಿಳಿದ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಅಬ್ಬರದಿಂದ ಬೆಂಗಳೂರು ಸೇರಿದಂತೆ ಅನೇಕ ಕಡೆ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕನಿಗೆ ಚಿಕಿತ್ಸೆ ಸಿಗದೆ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಆಪ್ತರು ಬಲಿಯಾಗಿದ್ದಾರೆ. ಅವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿ, ತಮ್ಮ ಸಂಬಂಧಿಗಳ ಅಂತ್ಯ ಸಂಸ್ಕಾರಕ್ಕೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಇವೆಲ್ಲ ಬೆಳವಣಿಗೆಗಳ ನಡುವೆ ಕೇಂದ್ರ ಸರ್ಕಾರ ಬೆಂಗಳೂರಿನ ಮೆಟ್ರೋ ವಿಸ್ತರಣೆಗೆ ಅನುಮತಿ ನೀಡಿತ್ತು. ಇದಕ್ಕಾಗಿ ಧನ್ಯವಾದ ಸಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪ್ರಕಟವಾಗಿ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಮೊದಲನೇ ಪುಟದಲ್ಲಿ ಪೂರ್ಣ ಜಾಹೀರಾತನ್ನು ಪ್ರಕಟಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಇದರೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಕೂಡ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದು, ಕೊರೊನಾ ಚಿಕಿತ್ಸೆಯ ನಡುವೆಯೂ ವಿಡಿಯೋ ಒಂದನ್ನು ಮಾಡಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕೆಪಿಸಿಸಿ ಕೂಡ ಇದರ ವಿರುದ್ಧ ದನಿ ಎತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ
- ರಾಜ್ಯದಲ್ಲಿನ ಕರೋನಾ ವಾರಿಯರ್ಸ್ ಗೌರವಧನಕ್ಕೆ ಹಣವಿಲ್ಲ.
- ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಹಣವಿಲ್ಲ.
- ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ
ಎಲ್ಲದಕ್ಕೂ ಹಣವಿಲ್ಲ ಎಂದು ಸಬೂಬು ಹೇಳುವ ಸರ್ಕಾರ ಹೆಣಗಳ ರಾಶಿಯ ಮದ್ಯೆ ದುಬಾರಿ ಪ್ರಚಾರಕ್ಕೆ ಇಳಿದಿದೆ. ವೈಫಲ್ಯ ಮುಚ್ಚಿಕೊಳ್ಳಲು @BJP4Karnataka ಸಾಲ ಮಾಡಿಯಾದ್ರೂ ಪ್ರಚಾರ ಮಾಡಲು ಇಳಿದಿದೆ ಎಂದು ವಾಗ್ದಾಳಿ ನಡೆಸಿದೆ.
ಸಾರಿಗೆ ನೌಕರರ ವೇತನ ಪರಿಷ್ಕರಣೆ ಕೊರೊನಾ ಹಿನ್ನೆಲೆಯಲ್ಲಿ ಸಾಧ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು. ಆದರೆ, ರಾಜ್ಯದಲ್ಲಿ ಪ್ರಕಟವಾಗುತ್ತಿರುವ ಬಹುತೇಕ ಪತ್ರಿಕೆಗಳಿಗೆ ಜಾಹೀರಾತು ನೀಡಲು ಹಣ ಎಲ್ಲಿಂದ ಬಂತು? ಎಂಬ ಪ್ರಶ್ನೆಗೆ ಬಿಜೆಪಿ ಉತ್ತರಿಸಬೇಕಿದೆ.




