ಬೆಂಗಳೂರು: ಸಾರ್ವಜನಿಕರ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದು ಮುಖ್ಯಮಂತ್ರಿಗಳ ಜೊತೆಯಲ್ಲಿ ಸತತ ಮಾತುಕತೆಯಿಂದ ಅನುದಾನ ತಂದು ಅಭಿವೃದ್ದಿ ಕೆಲಸಗಳು ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಾದ ಪ್ರಥಮ ದರ್ಜೆ ಕಾಲೇಜು, ಪೊಲೀಸ್ ಕಾಲೋನಿ, ಪಶ್ಚಿಮ ಕಾರ್ಡ್ ರಸ್ತೆ, ಮೇಲ್ವೇತುವೆ, ಡಾ.ಬಿ.ಆರ್.ಅಂಬೇಡ್ಕರ್ ಸ್ಟೇಡಿಯಂ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎಂ ಸಿ ಬಡಾವಣೆ, ನಾಯಂಡಹಳ್ಳಿ ಕೆರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪಂತರಪಾಳ್ಯ ಪ್ರಗತಿಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತಾಎಇದ ಅವರು,
ಮಾಗಡಿರೋಡ್ ಪೊಲೀಸ್ ಠಾಣೆ ಹಿಂಭಾಗದಲ್ಲಿ ಶ್ರೀಮಂತರ ಕುಟುಂಬದ ಮಕ್ಕಳಿಗೆ ಸಿಗುವ ಹೈಟೆಕ್, ತಂತ್ರಜ್ಞಾನ ಶಿಕ್ಷಣ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಸಿಗಬೇಕು ಎಂಬ ಕಾರಣದಿಂದ ನವನವೀನ ಕಟ್ಟಡ, ಉತ್ತಮ ಶಿಕ್ಷಕ ವೃಂದವಿರುವ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಟ್ಟಲಾಗಿದೆ ಎಂದರು.
ಬೆಳೆಯುತ್ತಿರುವ ನಗರಕ್ಕೆ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಶಾಶ್ವತವಾಗಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿ ಜನರ ಜೀವನಮಟ್ಟ ಸುಧಾರಣೆ ಮಾಡಬೇಕು. ಈ ನಿಟ್ಟಿನಲ್ಲಿ ಜನಸಂಖ್ಯೆ ದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಳದಿಂದ ವೆಸ್ಟ್ ಆಫ್ ಕಾರ್ಡ್ ರೋಡ್ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದರ ನಿವಾರಣೆಗಾಗಿ ಮೇಲು ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ಇದೀಗ ಅಂತಿಮ ಸ್ವರೂಪಕ್ಕೆ ಬರುತ್ತಿದೆ ಎಂದರು.
ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲು ಸೇತುವೆಯಿಂದ ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್, ಆರ್.ಆರ್.ನಗರ, ಗೋವಿಂದರಾಜನಗರ, ವಿಜಯನಗರ ವಿದಾನಸಭಾ ಕ್ಷೇತ್ರದ ನಾಗರಿಕರಿಗೆ ಸುಲಭ ಸಂಚಾರಕ್ಕೆ ಅನುಕೂಲವಾಗಲಿದೆ ಮತ್ತು ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ ಮತ್ತು ಇಂಧನ ಸಹ ಉಳಿತಾಯವಾಗಲಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಾಕಿಂಗ್ ಟ್ರ್ಯಾಕ್, ಸ್ಕೇಟಿಂಗ್ ಟ್ರ್ಯಾಕ್, ಪ್ರೇಕ್ಷಕರು ಕುಳಿತುಕೊಳ್ಳಲು ಗ್ಯಾಲರಿ, ಸಂಗೀತ ಕಾರಂಜಿ, ಕ್ಲಾಕ್ ಟವರ್, ಉದ್ಯಾನವನ ಉತ್ತಮ ಕ್ರೀಡಾಂಗಣ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು.
ದಾಸರಹಳ್ಳಿಯಲ್ಲಿ 300 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಂತರಪಾಳ್ಯದಲ್ಲಿ 200 ಹಾಸಿಗೆ ಸಾಮ್ಯರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ನಾಯಂಡಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ಪರಿಸರ ರಕ್ಷಣೆ ಜೊತೆಯಲ್ಲಿ ಕೆರೆಯನ್ನು ಉಳಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪ್ರಥಮ ದರ್ಜೆ ಕಾಲೇಜು, ಮೇಲು ಸೇತುವೆ, ದಾಸರಹಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅಂಬೇಡ್ಕರ್ ಕ್ರೀಡಾಂಗಣ, ನಾಯಂಡಹಳ್ಳಿ ಕೆರೆ ಅಭಿವೃದ್ಧಿಯಾಗಿದ್ದು, ಮುಖ್ಯಮಂತ್ರಿಗಳಿಂದ ಸಾರ್ವಜನಿಕರ ಉಪಯೋಗಕ್ಕೆ ಜನವರಿಯಲ್ಲಿ ಲೋಕರ್ಪಣೆ ಮಾಡಲಾಗುವುದು ಎಂದರು.
ಮುಖ್ಯ ಆಯುಕ್ತರಾದ ತುಷಾರ್ ಗಿರೀನಾಥ್, ಜಂಟಿ ಆಯುಕ್ತ ಯೋಗೇಶ್, ಮುಖ್ಯ ಅಭಿಯಂತರ ದೊಡ್ಡಯ್ಯ, ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯ ದಾಸೇಗೌಡ, ಬಿ.ಜೆ.ಪಿ. ಮುಖಂಡರಾದ ರಮೇಶ್ ಶ್ರೀಧರ್ ಹಾಜರಿದ್ದರು




