ನಟ ಚೇತನ್ ವರ್ಸಸ್ ನಟ ಉಪೇಂದ್ರ!

5 years ago

ಸ್ನೇಹಿತರೇ ನಮಸ್ಕಾರ. ಈ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅನೇಕರು ಸಮಾಜ ಸೇವೆ ಮಾಡ್ತಿರೋದು ನೋಡಿ ನನಗೆ ಬಹಳ ಸಂತೋಷ ಆಗಿದೆ. ಹಾಗೇ ನಮ್ಮ ಚಿತ್ರರಂಗದವರು ಅನೇಕರು ಸೇವೆ ಮಾಡ್ತಿರೋದು ನೋಡಿ ನನಗೆ ಬಹಳ ಹೆಮ್ಮೆ ಆಗಿದೆ ಎಂದು ನಟ ಚೇತನ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಆದರೆ ಇತ್ತೀಚೆಗೆ ಒಬ್ಬರು ಸೆಲೆಬ್ರಿಟಿ ವೈಚಾರಿಕತೆಯ ಕೊರತೆಯ ಮಾತುಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆ ವಿಚಾರಾನ ವಿವರಿಸಿ ಹೇಳೋದೇ ಈ ವಿಡಿಯೋ ಮಾಡುವ ಉದ್ದೇಶ. ಆ ಸೆಲೆಬ್ರಿಟಿ ಏನೇಳಿದಾರೆ ಅಂದ್ರೆ, ಜಾತಿ ವ್ಯವಸ್ಥೆ ಬಗ್ಗೆ ಮಾತಾಡಿದ್ರೆ ಜೀವಂತವಾಗಿ ಉಳಿಯುತ್ತೆ ಅದರ ಬಗ್ಗೆ ಮಾತಾಡದೇ ಇದ್ರೆ ಹೊರಟೋಗಿಬಿಡುತ್ತೆ ಅಂತಾ. ಇದು ಎಷ್ಟು ಹಾಸ್ಯಾಸ್ಪದವಾಗಿದೆ. ಹಾಗೇ ಭ್ರಷ್ಟಾಚಾರದ ಬಗ್ಗೆ ಮಾತಾಡದೆ ಮಾತ್ರ ಅದಿರುತ್ತೆ ಮಾತಾಡದೆ ಇದ್ರೆ ಅದೂ ಹೋಗಿಬಿಡುತ್ತೆ. ಸ್ತ್ರೀಭ್ರೂಣಹತ್ಯೆ ಬಗ್ಗೆ ಮಾತಾಡಿದ್ರೆ ಇರುತ್ತೆ ಮಾತಾಡದೆ ಇದ್ರೆ ಅದೂ ಹೊರಟೋಗಿಬಿಡುತ್ತೆ. ಅಥವಾ ಕೊರೊನಾ ಬಗ್ಗೆ ತಜ್ಞರು, ವಿದ್ವಾಂಸರು ಬಹುಶಃ ಮಾತಾಡದೆ ಇದ್ರೇನೇ ಅದು ಹೊರಟೋಗುತ್ತೆ ಅಂತಾ ಕಾಣುತ್ತೆ, ಇವ್ರ ಮಾತುಗಳನ್ನ ಕೇಳಿದ್ರೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಖಾಸಗಿ ಯೂಟ್ಯೂಬ್ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿದ್ದ ನಟ ಮತ್ತು ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಹೆಸರು ಹೇಳದೇ ತಿರುಗೇಟು ನೀಡಿರುವ ಚೇತನ್ ವಿಡಿಯೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನೋಡಿ ಸ್ನೇಹಿತರೇ, ಖಾಯಿಲೆ ಇದ್ದಾಗ ಅದನ್ನ ಗುರುತಿಸಬೇಕು. ಅದೇರೀತಿ ಸಮಾಜದ ಒಂದು ಖಾಯಿಲೆ ಈ ಜಾತಿ ವ್ಯವಸ್ಥೆ. ಅದನ್ನು ಗುರುತಿಸಿ ಅದನ್ನು ತೆಗೆದುಹಾಕಬೇಕು. ಅದಕ್ಕೆ ಈ ವ್ಯಕ್ತಿಯ ಮಾತು ಎಷ್ಟು ಮಾನಸಿಕ ಪ್ರಬುದ್ಧತೆ ಇದೆ ಅವರಲ್ಲಿ ಅಂತಾ ನಮಗೆ ಸ್ಪಷ್ಟವಾಗಿ ಕಾಣುತ್ತೆ ಎಂದಿದ್ದಾರೆ.

ಸ್ನೇಹಿತರೆ ನ್ಯಾಯ ಎಂದರೇನು? ಸಂವಿಧಾನದಲ್ಲಿ ನ್ಯಾಯ ಎಂದರೆ, ವ್ಯವಸ್ಥೆ ಹೇಗೆ ಹೋಗುತ್ತಿದೆ ಅದನ್ನೇ ಮುಂದುವರೆಸುವುದಲ್ಲ. ನ್ಯಾಯ ಎಂದರೆ ಯಾರು ತುಳಿತಕ್ಕೆ ಒಳಗಾಗಿರ್ತಾರೆ, ಯಾರು ಅನ್ಯಾಯದಲ್ಲಿ ಬದುಕಿರ್ತಾರೆ ಅವರ ಪರವಾಗಿ ನಿಂತ್ಕೊಂಡು ಸಮಾಜಾನ ತಿದ್ದೋದು. ಇದು ನಮ್ಮ ಸಂವಿಧಾನದಲ್ಲಿದೆ. ಅದು ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ಬರೆದಿರೋ ಸಂವಿಧಾನ. ಈ ವ್ಯಕ್ತಿ ನಮ್ಮ ಬಾಬಾಸಾಹೇಬರ ಬಗ್ಗೆ ಎಷ್ಟು ತಿಳ್ಕೊಂಡಿದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಸ್ವಲ್ಪ ಸಂವಿಧಾನ ಓದಿ. ಹಾಗೇ ಅವರೇಳ್ತಾರೆ, ಬಡತನಕ್ಕೂ ಜಾತಿಲೇಪ ಕಟ್ತಾ ಇದೀರಾ ಅಂತ. ನೀವು endorse ಮಾಡಿರೋ ಲೇಖನದಲ್ಲೇ ಸ್ಪಷ್ಟವಾಗಿ, ನೀವು ಹಾಕಿರೋ ನಿಮ್ ಟೈಮ್ ಲೈನಲ್ಲಿ ಹಾಕಿರೋದ್ರಲ್ಲೇ ಜಾತಿ ಸ್ಪಷ್ಟವಾಗಿದೆ. ಜಾತಿ endorse ಮಾಡ್ತಿರೋದು ನೀವು ಎಂದಿದ್ದಾರೆ.

ಆದರೆ ನೆನಪಿಟ್ಟುಕೊಳ್ಳಿ ಜಾತಿಗೂ ಬಡತನಕ್ಕೂ ಸಾವಿರಾರು ವರ್ಷ ನೂರಾರು ವರ್ಷ ಬಡತನಕ್ಕೂ ಮುಂಚೆ ಸಾವಿರಾರು ವರ್ಷದಿಂದ ಜಾತಿಯ ಭೇದಭಾವ ಇದೆ. ನಮ್ಮ ದೇಶದಲ್ಲಿ ಇವತ್ತು ಬಡವರು ಯಾರು? ಗುಡಿಸಲಲ್ಲಿ ಬದುಕುತ್ತಿರುವವರು ಯಾರು? ಯಾರವರು? ಯಾರು ಸ್ಲಂನಲ್ಲಿ ಬದುಕುತ್ತಿರುವವರು? ಯಾರು ಚರಂಡಿ ಕ್ಲೀನ್ ಮಾಡುವವರು? ಯಾರು ಪೌರಕಾರ್ಮಿಕರು? ಯಾರು ಸ್ಮಶಾನ ಕಾರ್ಮಿಕರು? ಯಾರು ಭೂಮಿ ಇಲ್ದೇ ಮನೆಮನೆಗೂ ಹೋಗಿ ಕೂಲಿ ಮಾಡೋರು ಯಾವ ಜನ? ಎಂದು ಪ್ರಶ್ನಿಸಿದ್ದಾರೆ.

ಅವರೇನು ಮೇಲ್ಜಾತಿಯವರು, ಜನಿವಾರ ಹಾಕ್ಕೋಳ್ಳೋರಾ ಅಲ್ಲ. ಪರಿಶಿಷ್ಟ  ಜಾತಿ ಪರಿಶಿಷ್ಟ ಪಂಗಡ ಶೂದ್ರ ಅತಿಶೂದ್ರ ಮತ್ತು ಬಹುಜನ ಜನ ಅನ್ನೋದನ್ನ ನೀವು ಜ್ಞಾಪಕ ಇಟ್ಕೊಳ್ಳಿ. ಇದು ನಿಮಗೆ ಕಾಣಲ್ಲ ಅಂದ್ರೆ ಜಾತಿಗೂ ಮತ್ತೆ ಬಡತನಕ್ಕೂ ಎಷ್ಟು ಸಂಬಂಧ ಇದೆ ಅಂತ ನಿಮಗೆ ಕಾಣಲ್ಲ ಅಂದ್ರೆ ನಿಮಗೆ ಬಹುಶಃ ಕುರುಡತನ ಅಂದ್ರೆ ಬ್ರಾ‍ಹ್ಮಣ್ಯದ ಮತ್ತು ಜಾತಿವಾದದ ಕನ್ನಡಕಾನ ತೆಗೆದ್ಹಾಕಿ. ನೀವು ನಿಮ್ಮ ಗಾಜಿನ ಮನೆಯಿಂದ ಇಳಿದು ಬನ್ನಿ ನಮ್ಮ ಜೊತೆ. ಕರ್ನಾಟಕದ ಮೂಲೆಮೂಲೆಗೂ ಕರ್ಕೊಂಡೋಗಿ ಏನ್ ಸತ್ಯ ಅಂತಾ ನಾವು ತೋರಿಸ್ತೀವಿ ಎಂದಿದ್ದಾರೆ.

ಹಾಗೇ ನೀವು ಸಾವಿರಾರು ವರ್ಷ ಅರ್ಹತೆ ಇಲ್ಲದಿದ್ದರೂ ಜಾತಿ ಸವಲತ್ತು ಪಡೆದಿದ್ದೀರಾ. ನಾನು ಕೂಡ ನೂರಾರು ವರ್ಷ ಅರ್ಹತೆ ಇಲ್ಲದಿದ್ದರೂ ಜಾತಿ ಸವಲತ್ತು ಪಡೆದಿದ್ದೇನೆ. ಇದನ್ನ ತೆಗೆದುಹಾಕಬೇಕು ಅಂದ್ರೆ ಮೊದಲು ನಾವು ನಮ್ಮನ್ನ ಪ್ರಶ್ನೆ ಮಾಡ್ಕೋಬೇಕು. ನಾವು ನಮ್ಮನ್ನ ಸ್ವಯಂ ವಿಶ‍್ಲೇಷಣೆ ಮಾಡ್ಕೋಬೇಕು. ಯಾವ ಸಮಾಜವನ್ನ ಅಭಿವೃದ್ಧಿ ಮಾಡೋಕೆ ಮುಂಚೆ ನಮ್ಮನ್ನ ನಾವು ತಿದ್ಕೋಬೇಕು ಎಂದಿದ್ದಾರೆ.

ಹಾಗೇನೇ ನೀವು ದೊಡ್ದಾಗಿ ಮಾತಾಡ್ತೀರಾ ಈ ಸೆಲೆಬ್ರಿಟಿಗಳಾಗಿ. ಏನೇನು ಅಂದ್ರೆ, ನಾನು ಜಾತಿ ಮೀರಿ, ಧರ್ಮ ಮೀರಿ ಪಕ್ಷ ಕಟ್ತೀನಿ ಇದು ಅದು ಅಂತ ಕ್ರಾಂತಿ ಮಾಡ್ತೀನಿ ಅಂತ ಭ್ರಮೆಯ ಮಾತು. ನೋಡಿ ನಮ್ಮ ಕರ್ನಾಟಕದ ಚರಿತ್ರೆ, ಹೋರಾಟದ ಇತಿಹಾಸವನ್ನು ಸ್ವಲ್ಪ ಓದ್ಕೊಳಿ. ಬಸವಣ್ಣ ಮತ್ತು ಬಸವಾದಿ ಶರಣರು, ಅಕ್ಕಮಹಾದೇವಿ, ಸೂಳೆ ಸಂಕವ್ವ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಕನಕದಾಸ, ಮಂಟೇಸ್ವಾಮಿ, ಮಾದಪ್ಪ, ಸರ್ವಜ್ಞ, ಕೈವಾರ ತಾತಯ್ಯ ಇವರೆಲ್ಲ ಏನೇನು ಸಾಧನೆ ಮಾಡಿದ್ರು ಅಂತಾ ಸ್ವಲ್ಪ ಓದ್ಕೊಳಿ. ಸ್ನೇಹಿತರೆ, ನಿಮಗೇನಾದ್ರೂ ಪುಸ್ತಕ ತಲುಪಿಸಬೇಕು ಅಂದ್ರೆ ನಾನೇ ತಲುಪಿಸ್ತೀನಿ. ಓದಿ ತಿಳ್ಕೊಂಡು ಹಾಗೇ ನಮ್ಮ ಸಂವಿಧಾನವನ್ನು ಓದಿ ತಿಳ್ಕೊಂಡು ನಿಜವಾದ ಬುದ್ಧಿವಂತರಾಗಿ. ಜೈ ಕರ್ನಾಟಕ, ಜೈ ಬಸವ, ಜೈ ಭೀಮ್ ಎಂದಿದ್ದಾರೆ.

Leave a Reply