ಬೆಂಗಳೂರು: ನಾಗರೀಕ ಸಮಾಜ ಅಸಹ್ಯಪಡುವ ಅಸಹಜ ನಡವಳಿಕೆ ಎಂದೇ ಪರಿಗಣಿಸಲ್ಪಡುವ ವೈಫ್ ಸ್ವಾಪ್ (ಪತ್ನಿ ಬದಲಿಸುವ) ವಿದ್ಯಮಾನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ವೈಫ್ ಸ್ವಾಪ್ ಗೆ ತನ್ನನ್ನು ಬಲವಂತವಾಗಿ ದೂಡುವ ಪ್ರಯತ್ನ ನಡೆಯಿತು ಎಂದು ಆರೋಪಿಸಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.
ವೈಫ್ ಸ್ವಾಪ್ ಲೈಂಗಿಕ ಸುಖಕ್ಕಾಗಿ ಪತ್ನಿಯರನ್ನು ಬದಲಾಯಿಸಿಕೊಳ್ಳುವ ಕ್ರಿಯೆಯಾಗಿದೆ. ತನ್ನ ಪತ್ನಿಯನ್ನು ಒಂದು ರಾತ್ರಿಯ ಮಟ್ಟಿಗೆ ಸ್ನೇಹಿತನ ಜೊತೆ ಇರುವಂತೆ ಮಾಡುವುದು, ಸ್ನೇಹಿತನ ಹೆಂಡತಿಯ ಜೊತೆಗೆ ತಾನು ಇರುವ ಕ್ರಿಯೆಯಾಗಿದೆ. ತಾತ್ಕಾಲಿಕ ಒಪ್ಪಂದಗಳಾದ ಇವು ಐಷಾರಾಮಿ ಬದುಕನ್ನು ಹೊಂದಿರುವ ಕುಬೇರರ ನಡುವೆ ನಡೆಯುತ್ತಿದೆ ಎನ್ನಲಾಗಿತ್ತು. ಅಮೆರಿಕದಲ್ಲಿ ಆರಂಭವಾದ ಈ ಹೇಯ ಪದ್ಧತಿ ಅಲ್ಲಿಂದ ಇಲ್ಲಿಗೂ ತನ್ನ ಕಬಂಧ ಬಾಹುವನ್ನು ವಿಸ್ತರಿಸಿದೆ.
ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಇದು ದೊಡ್ಡ ಸದ್ದು ಮಾಡಿ, ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈಗ ರಾಜಧಾನಿಯಲ್ಲಿ ಮತ್ತೊಂದು ಪ್ರಕರಣ ದಾಖಲಾದಂತಾಗಿದೆ. ಹೆಚ್ಚಾಗಿ ಇವು ಹೈಫೈ ಸೊಸೈಟಿಗಳಲ್ಲಿ ನಡೆಯುತ್ತಿದ್ದು, ಬೆಳಕಿಗೆ ಬರದೇ ಮುಚ್ಚಿ ಹೋಗುತ್ತಿವೆ. ಹೆಚ್ಚಾಗಿ ಲೈಂಗಿಕ ಸುಖಕ್ಕಾಗಿ ಮಾತ್ರ ಇಂಥ ಕೃತ್ಯಗಳು ನಡೆಯುವುದು ದಾಖಲಾಗಿದೆ.
ಇದೀಗ ಮಹಿಳಾ ಠಾಣೆಗೆ ದೂರು ನೀಡಿರುವ ಮಹಿಳೆ, ವೈಫ್ ಸ್ವಾಪಿಂಗ್ ಗೆ ತನ್ನನ್ನು ಬಲವಂತಪಡಿಸಿರುವುದಲ್ಲದೇ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಪತಿ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು 10 ಜನರ ವಿರುದ್ಧ ಆರೋಪಿಸಿದ್ದಾರೆ.
23 ವರ್ಷದ ಸಂತ್ರಸ್ತೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಜೊತೆ ಮದುವೆಯಾಗಿದ್ದರು. ಹಿಂದೂ ಸಂಪ್ರದಾಯದಂತೆ ಗುರು – ಹಿರಿಯರ ಸಮ್ಮುಖದಲ್ಲಿ ಯುವತಿಯ ಪೋಷಕರು ಅದ್ದೂರಿಯಾಗಿ ಮದುವೆ ಮಾಡಿದ್ದರು.
ಮದುವೆ ಸಮಯದಲ್ಲಿ ಮಾತುಕತೆಯಂತೆ ವರನಿಗೆ 2 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವರದಕ್ಷಿಣೆ ರೂಪವಾಗಿ ಕೊಡಲಾಗಿತ್ತು. ಮದುವೆ ಬಳಿಕ ಕೆಲ ದಿನಗಳವರೆಗೆ ಎಲ್ಲ ಸರಿಯಾಗಿತ್ತು. ಕಾಲ ಕ್ರಮೇಣ ಪತಿ ತನಗೆ ನೀಡಲಾಗಿರುವ ಚಿನ್ನಾಭರಣದ ಗುಣಮಟ್ಟ ಸರಿಯಿಲ್ಲ ಎಂದು ಕಿರುಕುಳ ನೀಡತೊಡಗಿದ.
ಮದುವೆಗಾಗಿ ತಾನು 10 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ, ಇದನ್ನು ತೀರಿಸಬೇಕಿದೆ. ಹೀಗಾಗಿ ಮತ್ತಷ್ಟು ಹಣ ತರುವಂತೆ ಹೆಂಡತಿಗೆ ಪೀಡಿಸತೊಡಗಿದ. ಇದಾದ ನಂತರ ಮತ್ತೆ 2 ಲಕ್ಷ ರೂಪಾಯಿ ನೀಡಲಾಯಿತು. ಇದರಿಂದ ಸಂತೃಪ್ತನಾಗದೆ ಕಿರುಕುಳ ನೀಡುವುದು ಮುಂದುವರೆಸಿದ.
ಈ ವೇಳೆ ಆತನ ಸಂಬಂಧಿಯೊಬ್ಬ ನನ್ನ ಕೈ- ಕಾಲನ್ನು ಅಸಹ್ಯವಾಗಿ ಮುಟ್ಟಿದ್ದ. ಅಲ್ಲದೇ ಪತಿ ವಿಡಿಯೋ ತೋರಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
ಪತಿ ಕೆಲಸ ಮಾಡುವ ಕಂಪನಿಯಲ್ಲಿ ವೈಫ್ ಸ್ವಾಪಿಂಗ್ ಸಂಸ್ಕೃತಿ ಇದ್ದು, ತನ್ನ ಸ್ಮೇಹಿತರೊಂದಿಗೆ ಮಲಗುವಂತೆ ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಬೆಲ್ಟ್ ನಿಂದ ಹೊಡೆದಿದ್ದಾನೆ. ಕಳೆದ ನ.31 ರಂದು ರಾತ್ರಿ ಮದ್ಯ ಸೇವನೆ ಮಾಡಿ ಬಂದು ಕೊಲೆ ಮಾಡುವ ಉದ್ದೇಶದಿಂದ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದ. ಅಲ್ಲದೇ ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯ ನಡೆಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದು, ಗಂಡನ ಮನೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ತಡೆ ಕಾಯ್ದೆ, ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಐಪಿಸಿ ಸೆಕ್ಷನ್ ಗಳ ಅಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.



