ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಂಚಿಕೆ ವಿರುದ್ಧ ಲಂಬಾಣಿ, ಬೋವಿ ಸಮುದಾಯದ ಆಕ್ರೋಶ ಸ್ಪೋಟಿಸಿದೆ. ಸರ್ಕಾರದ ನಿರ್ಧಾರದ ವಿರುದ್ಧ ಈ ಸಮುದಾಯ ಹೋರಾಟಕ್ಕೆ ಮುಂದಾಗಿದೆ. ಇದರ ನಡುವೆ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.
ಈ ಘಟನೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಕಲ್ಲೇಟಿನಿಂದ ಗಾಯಗೊಂಡಿದ್ದಾರೆ. ಉದ್ರಿಕ್ತರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಕಲ್ಲು ತೂರಿದ್ದು, ಕಿಟಕಿ ಗಾಜುಗಳು ಒಡೆದಿವೆ.
ತಾಲ್ಲೂಕು ಬಂಜಾರ ಸಮಾಜದ ನೇತೃತ್ವದಲ್ಲಿ ಮುಂಜಾನೆ ಶಿಕಾರಿಪುರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಜಮಾವಣೆಗೊಂಡ ಸಾವಿರಾರು ಪ್ರತಿಭಟನಾಕಾರರು, ಸದಾಶಿವ ಆಯೋಗದ ವರದಿ ಅನ್ವಯ ಒಳಮೀಸಲಾತಿಗೆ ಶಿಫಾರಸು ಮಾಡುವ ಮೂಲಕ ನಮ್ಮ ಬದುಕು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿಂದ ಪಟ್ಟಣದ ಮಾಳೇರಕೇರಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸದತ್ತ ಪ್ರತಿಭಟನಾಕಾರರು ಗುಂಪು ಗುಂಪಾಗಿ ಹೊರಟರು. ಅವರನ್ನು ತಡೆಯಲು ಪೊಲೀಸರು ಮೂರು ಕಡೆ ಬ್ಯಾರಿಕೇಡ್ ಅಳವಡಿಸಿದ್ದರು. ಎರಡು ಬ್ಯಾರಿಕೇಡ್‌ಗಳನ್ನು ಮುರಿದು ಮುಂದಕ್ಕೆ ಬಂದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದರು.
ಈ ವೇಳೆ ಶಿಕಾರಿಪುರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಲಕ್ಷ್ಮಣ್, ನಗರ ಠಾಣೆ ಪಿಎಸ್‌ಐ ಮಂಜುನಾಥ ಕೊಪ್ಪಲೂರು, ಕಾನ್‌ಸ್ಟೆಬಲ್‌ಗಳಾದ ಶಂಕರಗೌಡ ಹಾಗೂ ಕಾಂತರಾಜು ಅವರ ತಲೆಗೆ ಕಲ್ಲೇಟು ಬಿದ್ದಿದೆ.
ಸೀರೆ ಸುಟ್ಟು ಆಕ್ರೋಶ: ಪ್ರತಿಭಟನಾಕಾರರು ಶಿಕಾರಿಪುರ ಪಟ್ಟಣದಲ್ಲಿ ಅಳವಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದರು. ಫೆಬ್ರುವರಿ 27ರಂದು ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ವಿತರಿಸಿದ್ದ ಸೀರೆಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು
ಅನ್ಯಾಯವಾಗಿಲ್ಲ: ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಬಂಜಾರ, ಭೋವಿ, ಕೊರಚ ಸಮುದಾಯಗಳಿಗೆ ತೃಪ್ತಿ ಇದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಹಂಚಿಕೆ ವಿಚಾರವಾಗಿ ನನಗೆ ಯಾವುದೇ ಅಸಮಾಧಾನವಿಲ್ಲ. ಸರ್ವರಿಗೆ ಸಮಬಾಳು ಮತ್ತು ಸಮಪಾಲು ವಿಚಾರದಲ್ಲಿ ನಂಬಿಕೆ ಇಟ್ಟು ಈ ಹಂಚಿ ಮಾಡಲಾಗಿದೆ. ಬಂಜಾರ, ಭೋವಿ, ಕೊರಚ ಸಮುದಾಯಗಳಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದೂ ತಿಳಿಸಿದರು.
ಒಳಮೀಸಲಾತಿ ಜಾರಿ ತರುವ ಸಂಬಂಧ ಸಂಪುಟ ಉಪಸಮಿತಿ ರಚಿಸುವುದಕ್ಕೆ ಮುನ್ನ ಅಂದರೆ ಫೆಬ್ರುವರಿಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಅನುಷ್ಠಾನ ಮಾಡಬಾರದು ಎಂಬ ಪತ್ರವನ್ನು ಬರೆದಿದ್ದು ನಿಜ. ಆದರೆ, ಸಂಪುಟ ಉಪಸಮಿತಿ ಸಭೆಯ ತೀರ್ಮಾನದ ಬಗ್ಗೆ ಅಸಮಾಧಾನಗೊಂಡಿಲ್ಲ. ಮುಖ್ಯಮಂತ್ರಿಯವರು ಸಾಧಕ– ಬಾಧಕಗಳನ್ನು ಪರಿಶೀಲಿಸಿಯೇ ಯಾರಿಗೂ ಅನ್ಯಾಯ ಆಗದಂತೆ ಹಂಚಿಕೆ ಮಾಡಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ ಎಂದರು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿಯನ್ನು ಒಪ್ಪಿಲ್ಲ, ಪರಿಶಿಷ್ಟ ಜಾತಿಯಿಂದ ಬಂಜಾರ ಸಮುದಾಯವನ್ನು ಕೈಬಿಡುವ ಸಂಬಂಧ ಯಾವುದೇ ಶಿಫಾರಸನ್ನು ಸರ್ಕಾರ ಮಾಡಿಲ್ಲ. ಕೆಲವರು ಸಹಿಸದೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾರೋ ಕೆಲವರು ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಪ್ರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಮುಂದುವರಿಸಲು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಧೈರ್ಯವಿದ್ದರೆ ಮಾಡಲಿ ನೋಡೋಣ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಒಳಮೀಸಲಾತಿ ಹಂಚಿಕೆ ಮಾಡಲಿಲ್ಲ. ತಾವು ಮಾಡಲಾಗದ್ದನ್ನು ಬಿಜೆಪಿ ಮಾಡಿದ್ದನ್ನು ಕಂಡು ಅಸೂಯೆಯಿಂದ ಕಾಂಗ್ರೆಸ್‌ನವರು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದರು.
ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಬಿಜೆಪಿ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಂಡೇ ಬಂದಿದ್ದರು. ಈಗ ನಾವು ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಸುದೀರ್ಘ ಕಾಲದಿಂದ ಇದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದರು.




