ನನಗೆ ಸಮಾಜವಾದಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ನವರ ಬಗ್ಗೆ ನೂರಾರು ಒಳ್ಳೆಯ ಅಭಿಪ್ರಾಯಗಳಿದ್ದರೆ, ಸಾವಿರಾರು ತಕರಾರುಗಳಿವೆ.
ಆದರೆ, ಈ ಸಂದರ್ಭದಲ್ಲಿ ಅವುಗಳು ಅಪ್ರಸ್ತುತ. ಪತ್ರಿಕೆಯೊಂದು ಲೇಖನ ಬರೆದುಕೊಡಲು ಆಹ್ವಾನಿಸಿದಾಗ ನಾನು ತಿರಸ್ಕರಿಸಿದೆ.
ನಂತರ ಸಂಪಾದಕರಿಗೆ ಈ ಸಂದರ್ಭದಲ್ಲಿ ನಾನು ಬರೆಯುವ ಒಂದು ಶಬ್ದ ಅಥವಾ ಆಡುವ ಮಾತು ಯಾವ ಕಾರಣಕ್ಕೂ ಸಂಘಪರಿವಾರಕ್ಕೆ ನೆರವಾಗಬಾರದು. ಅಕಸ್ಮಾತ್ ಅವರು ಮುಖ್ಯಮಂತ್ರಿ ಆಗುವ ಅವಕಾಶ ದೊರೆತರೆ, ನಾನು ಪ್ರಥಮವಾಗಿ ಅವರ ದೌರ್ಬಲ್ಯ ಗಳ ಕುರಿತಾಗಿ ಲೇಖನ ಬರೆದುಕೊಡುತ್ತೀನಿ ಎಂದು ಆಶ್ವಾಸನೆ ನೀಡಿದೆ.
ಈ ದಿನದ ಸುದ್ದಿಯ ಪ್ರಕಾರ ಯಡಿಯೂರಪ್ಪನವರ ಪುತ್ರ ವಿಜಯೇಂದ್ರನಿಗೆ ವರುಣಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೇಟ್ ನೀಡುವ ಕುರಿತಾಗಿ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಕೇಳಲ್ಪಟ್ಟೆ.
ಅದು ನಿಜವಾಗಿದ್ದರೆ,ಅದು ಬಿ.ಜೆ.ಪಿ. ನಾಯಕರ ಬೌದ್ಧಿಕ ದಿವಾಳಿತನ ಎಂದು ಈಗಲೇ ಮುಂಗಡವಾಗಿ ಹೇಳಬಲ್ಲೆ. ಮಂಡ್ಯ ಲೋಕಸಭೆ ಚುನಾವಣೆಗೆ ದೇವೇಗೌಡರು ತಮ್ಮ ಮೊಮ್ಮಗನನ್ನು ಅಭಿಮನ್ಯುವಿನಂತೆ ನಿಲ್ಲಿಸಿದಾಗ, ಮಂಡ್ಯ ದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಮಂದಿ ಜೆ.ಡಿ.ಎಸ್. ಶಾಸಕರು ಇದ್ದರೂ ಸಹ ಆತ ( ಹೆಸರು ಮರೆತು ಹೋಗಿದೆ. ನಿಖಿಲ್ ಎಂದು ನೆನಪು) ಆತನು ಮಣ್ಣು ಮುಕ್ಕಿದನು.
ಈಗ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ನವರ ಪುತ್ರ ವಿಜಯೇಂದ್ರ ಸಿದ್ಧರಾಮಯ್ಯನವರ ಎದುರು ಮಣ್ಣು ಮಾತ್ರವಲ್ಲದೆ ಲದ್ದಿ ಮುಕ್ಕುವುದು ನಿಶ್ಚಿತ.
ಧಾರವಾಡದ ಮನೆ ಮಾರಾಟ ಮಾಡಿದ ನಂತರ ಎರಡು ಎಕರೆ ಭೂಮಿ ಕೊಳ್ಳಲು ಒಂದು ವರ್ಷ ಸತತವಾಗಿ ವರುಣಾ ಕ್ಷೇತ್ರದಲ್ಲಿ ಅಡ್ಡಾಡಿದ ನಂತರ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕಣ್ಣಾರೆ ನೋಡಿ ಈ ಮಾತುಗಳನ್ನು ಬರೆಯುತ್ತಿದ್ದೀನಿ.
ಬಿ.ಜೆ.ಪಿ. ನಾಯಕರು ಇಂತಹ ದುರಂಹಕಾರದ ಚಿಂತನೆಗಳನ್ನು ಬದಿಗಿರಿಸುವುದು ಒಳಿತು. ಮಂಡ್ಯದ ಫಲಿತಾಂಶ ವರುಣಾದಲ್ಲಿ ಪ್ರತಿಫಲಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ.
-ಜಗದೀಶ್ ಕೊಪ್ಪ ಹಿರಿಯ ಪತ್ರಕರ್ತರು




